ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯಕ್ರಮ ಸಮಿತಿ: ಬೆಂಗಳೂರಿಗೇ ಪ್ರಾಧಾನ್ಯ!

ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿ ಪ್ರಕ್ರಿಯೆ: ಪ್ರಾದೇಶಿಕ ಅಸಮಾನತೆಯ ಕೂಗು
Last Updated 9 ಜುಲೈ 2021, 20:32 IST
ಅಕ್ಷರ ಗಾತ್ರ

ಕಾರವಾರ: ರಾಜ್ಯದಲ್ಲಿ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಸ್ಪರ್ಧಾತ್ಮಕ ‍ಪರೀಕ್ಷಾ ಪಠ್ಯಕ್ರಮ ರೂಪಿಸುವ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಇದಕ್ಕಾಗಿ ರಚಿಸಲಾಗಿರುವ ಸಮಿತಿಯ ಸದಸ್ಯರಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಉಪನ್ಯಾಸಕರನ್ನೇ ಬಹುಸಂಖ್ಯೆಯಲ್ಲಿ ನೇಮಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

80 ಉಪನ್ಯಾಸಕರನ್ನು ಒಳ ಗೊಂಡಿರುವ ಸಮಿತಿಯಲ್ಲಿ ಬೆಂಗಳೂರಿನವರೇ 67 ಉಪನ್ಯಾಸಕರಿದ್ದಾರೆ. ಕೋಲಾರ, ರಾಮನಗರ, ಮೈಸೂರು ಜಿಲ್ಲೆಯ ಬೆರಳೆಣಿಕೆಯಷ್ಟು ಮಂದಿಯಿ ದ್ದಾರೆ. ಉತ್ತರ ಕರ್ನಾಟಕ ಭಾಗದಿಂದ ನರಗುಂದ ಮತ್ತು ಜಮಖಂಡಿಯಿಂದ ಮಾತ್ರ ತಲಾ ಒಬ್ಬರು ಉಪನ್ಯಾಸಕರು ಸಮಿತಿಯಲ್ಲಿದ್ದಾರೆ.

‘ಕರಾವಳಿ, ಉತ್ತರ ಕರ್ನಾಟಕದಲ್ಲಿ ಪರೀಕ್ಷಾ ಪಠ್ಯಕ್ರಮ ಸಿದ್ಧಪಡಿಸಲು ಅರ್ಹರಾದ, ಅನುಭವಿ ಉಪನ್ಯಾಸಕರಿಲ್ಲ ಎಂದು ಬಿಂಬಿಸಲುಇಲಾಖೆ ಈ ಧೋರಣೆ ಹೊಂದಿದೆಯೇ ಎಂಬ ಶಂಕೆ ಇದೆ. ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಲ್ಲಿ ಪ್ರಾದೇಶಿಕ ತಾರತಮ್ಯ ಏಕೆ’ ಎಂದು ಉತ್ತರ ಕನ್ನಡದ ಉಪನ್ಯಾಸಕರೊಬ್ಬರು ಪ್ರಶ್ನಿಸಿದರು.

‘ಈ ಬಗ್ಗೆ ಪ್ರಶ್ನಿಸಿದರೆ ಕೋವಿಡ್‌ನ ನೆಪ ಹೇಳುತ್ತಾರೆ. ಆದರೆ, ಈಗ ನೇಮಿಸಲಾಗಿರುವ ಸಮಿತಿ ಸದಸ್ಯರಿಗೂ ಅವರು ಸಿದ್ಧಪಡಿಸಿದ ಪಠ್ಯಕ್ರಮವನ್ನು ಪಿ.ಡಿ.ಎಫ್ ಮತ್ತು ಇ–ಮೇಲ್ ಮೂಲಕ ಕಳುಹಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಸೂಚಿಸಿದ್ದಾರೆ. ಅಲ್ಲದೇ ತರಬೇತಿಗೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಆದ್ದರಿಂದ ಸಾಂಕ್ರಾಮಿಕ ಸೋಂಕು ನೆಪ ಮಾತ್ರವಷ್ಟೇ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜ್ಯೇಷ್ಠತೆ ಆಧರಿಸಿ ಸಮಿತಿಗೆ ಪರಿಗಣಿಸಲಾಗಿದೆ ಎಂದರೂ ಕೆಲ ವಿಷಯಗಳಿಗೆ ಸಹಾಯಕ ಪ್ರಾಧ್ಯಾಪಕರನ್ನು ನೇಮಿಸಲಾಗಿದೆ. ಇದರ ಬದಲು ವಿಶ್ವವಿದ್ಯಾಲಯಗಳ ಪ್ರೊಫೆಸರ್‌ಗಳನ್ನು ನೇಮಿಸಬಹುದಿತ್ತು. ಬ್ಯಾಂಕಿಂಗ್ ಪರೀಕ್ಷೆಗಳ ಮಾದರಿಯಲ್ಲಿ ಬೇರೆ ರಾಜ್ಯಗಳ ಉಪನ್ಯಾಸಕರಿಗೆ ಹೊರಗುತ್ತಿಗೆ ಕೊಡಬಹುದಿತ್ತು. ಆದರೆ, ಆ ರೀತಿ ಮಾಡದೇ ಕೇವಲ ಬೆಂಗಳೂರು ಮತ್ತು ಸುತ್ತಮುತ್ತಲಿನ ಉಪನ್ಯಾಸಕರನ್ನೇ ಪಠ್ಯಕ್ರಮ ಸಿದ್ಧಪಡಿಸಲು ನೇಮಿಸಿದ್ದರ ಬಗ್ಗೆ ಸ್ಪಷ್ಟತೆಯಿಲ್ಲ’ ಎಂದು ಹೇಳಿದರು.

‘ವರ್ಗಾವಣೆ ಮಾಡಿಸಿಕೊಂಡರು’: ‘2017ರಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾದ ಹೆಚ್ಚಿನವರು ಬೆಂಗಳೂರು ಸುತ್ತಮುತ್ತಲಿನವರು. ಅವರನ್ನು ಬೇರೆ ಬೇರೆ ಜಿಲ್ಲೆಗಳಿಗೆ ನೇಮಿಸಲಾಯಿತು. ಆದರೆ, ಬಹುತೇಕ ಮಂದಿ ನಿಯೋಜನೆ ಮೂಲಕ ವರ್ಗಾವಣೆ ಮಾಡಿಸಿಕೊಂಡರು. ಇದರಿಂದ ಕರಾವಳಿ ಜಿಲ್ಲೆಗಳಲ್ಲಿ ಉಪನ್ಯಾಸಕರ ಸಮಸ್ಯೆ ಬಗೆಹರಿಯಲೇ ಇಲ್ಲ’ ಎನ್ನುತ್ತಾರೆ ಉಪನ್ಯಾಸಕರೊಬ್ಬರು.

‘ಕಳೆದ ಬಾರಿಯೂ ಪಠ್ಯಕ್ರಮ ಸಮಿತಿಯಲ್ಲಿ ಬೆಂಗಳೂರಿನವರೇ ಅಧಿಕ ಸಂಖ್ಯೆಯಲ್ಲಿದ್ದರು. ಈ ಬಾರಿಯೂ ಆ ರೀತಿ ಆಗದಂತೆ ಪಾರದರ್ಶಕತೆ ಅಗತ್ಯವಿದೆ’ ಎಂದು ಅವರು ಆಗ್ರಹಿಸುತ್ತಾರೆ.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ.ಪಿ ಅವರಿಗೆ ‘ಪ್ರಜಾವಾಣಿ’ ಹಲವು ಸಲ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT