ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಚಿಣ್ಣರ ಜಗುಲಿಯೀಗ ಗೃಹೋತ್ಪನ್ನ ಕೇಂದ್ರ

ಲಾಕ್‌ಡೌನ್‌ನಲ್ಲಿ ಸ್ವ ಉದ್ಯೋಗ ಕಂಡುಕೊಂಡ ಮಹಿಳೆಯರು
Last Updated 11 ಜುಲೈ 2020, 19:31 IST
ಅಕ್ಷರ ಗಾತ್ರ

ಶಿರಸಿ: ತೊದಲು ಮಾತನಾಡುತ್ತ ಪುಟ್ಟಪುಟ್ಟ ಹೆಜ್ಜೆಯಿಟ್ಟು ಓಡುತ್ತಿದ್ದ ಚಿಣ್ಣರ ಜಗುಲಿಯನ್ನು ದೊಡ್ಡ ಗ್ಯಾಸ್ ಒಲೆಗಳು, ಕೊತಕೊತ ಕುದಿಯುವ ಎಣ್ಣೆ ಬಂಡಿಗಳು ಆಕ್ರಮಿಸಿವೆ. ಪುಟಾಣಿಗಳ ಕಲರವ ಕೇಳುತ್ತಿದ್ದ ಕೊಠಡಿಯಲ್ಲಿ ಈಗ ಅಮ್ಮಂದಿರ ಹರಟೆ ಕೇಳುತ್ತಿದೆ.

ಹೌದು, ನಿತ್ಯವೂ ಪುಟಾಣಿಗಳ ತುಂಟಾಟ, ಸದಾ ಜೀವಂತಿಕೆಯಿಂದ ತುಂಬಿರುತ್ತಿದ್ದ ಇಲ್ಲಿನ ಜಯನಗರದ ವಿಶ್ವಭಾರತಿ ಪ್ಲೇ ಸ್ಕೂಲ್, ಗೃಹೋತ್ಪನ್ನ ಕೇಂದ್ರವಾಗಿ ರೂಪುಗೊಂಡಿದೆ. ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ಕಾರಣಕ್ಕೆ ಶಾಲೆ–ಕಾಲೇಜುಗಳೇ ಬಾಗಿಲು ತೆರೆದಿಲ್ಲ. ಇನ್ನು ಪುಟ್ಟ ಮಕ್ಕಳ ಆಟದ ಮನೆಯನ್ನು ತೆರೆಯುವುದು ದೂರದ ಮಾತು.

ಅದಕ್ಕಾಗಿ ಇಲ್ಲಿನ ಮುಖ್ಯಸ್ಥರು, ಶಿಕ್ಷಕರು ಪರ್ಯಾಯ ಆದಾಯ ಮೂಲವನ್ನು ಕಂಡುಕೊಂಡಿದ್ದಾರೆ. ‘ಮಕ್ಕಳಿಂದ ಗಿಜಿಗುಡುತ್ತಿದ್ದ ಶಾಲೆ ಸದಾ ಬಾಗಿಲು ಹಾಕಿರುತ್ತಿತ್ತು. ಈ ಜಾಗದ ಸದ್ಬಳಕೆ ಮಾಡಿಕೊಳ್ಳಬೇಕು ಮತ್ತು ಕೆಲಸವಿಲ್ಲದೇ ಸುಮ್ಮನೆ ಕಾಲಕಳೆಯುವುದರ ಬದಲಾಗಿ ಏನಾದರೊಂದು ಉದ್ಯೋಗ ಮಾಡಬೇಕು ಎಂದು ಚರ್ಚಿಸಿದೆವು. ಆಗ ಗೃಹ ಉತ್ಪನ್ನ ಸಿದ್ಧಪಡಿಸುವ ಯೋಚನೆ ಬಂತು’ ಎನ್ನುತ್ತಾರೆ ಪ್ಲೇ ಸ್ಕೂಲ್ ಮುಖ್ಯಸ್ಥೆ ವೀಣಾ ಹೆಗಡೆ.

‘ಶಾಲೆಯ ಶಿಕ್ಷಕಿಯರು, ಸುತ್ತಲಿನ ಆರೆಂಟು ಮಹಿಳೆಯರು ಸೇರಿ, ಮೇ 21ರಿಂದ ಹಲಸಿನ ಕಾಯಿ ಚಿಪ್ಸ್ ಮಾಡಲು ಪ್ರಾರಂಭಿಸಿದೆವು. ಮಾರುಕಟ್ಟೆಯೂ ಸುಲಭವಾಗಿ ಸಿಕ್ಕಿತು. ಬೇರೆ ಬೇರೆ ಊರುಗಳಿಂದ ಹಲಸಿನ ಕಾಯಿ ಸಂಗ್ರಹಿಸಿ, ಸುಮಾರು 55 ಕೆ.ಜಿ.ಯಷ್ಟು ಚಿಪ್ಸ್, ಹಲಸಿನ ಬೇಳೆಯ ನಿಪ್ಪಟು ಮಾರಾಟ ಮಾಡಿದೆವು. ಈಗ ಹಲಸಿನ ಹಂಗಾಮು ಮುಗಿದಿದೆ. ಮುಂದೇನು ಎಂದು ಯೋಚಿಸುತ್ತಿದ್ದೇವೆ’ ಎಂದು ಅವರು ತಿಳಿಸಿದರು.

ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಸಂಧ್ಯಾ ಹೆಗಡೆ, ನೇಂದ್ರ ಬಾಳೆಕಾಯಿ ಚಿಪ್ಸ್ ಮಾಡುತ್ತಿದ್ದಾರೆ. ಜೊತೆಗೆ ಹಲಸಿನ ಹಣ್ಣಿನ ಡ್ರೈ ಸೊಳೆ, ಹಣ್ಣಿನ ಬಾರ್‌ಗಳನ್ನು ತಯಾರಿಸಿದ್ದಾರೆ. ಫೇಸ್‌ಬುಕ್‌ನ ಮಹಿಳಾ ಮಾರುಕಟ್ಟೆಗೆ ಸೇರಿಕೊಂಡ ಅವರು, ಹೊರ ಜಿಲ್ಲೆ, ಹೊರ ರಾಜ್ಯಗಳಿಗೂ ಚಿಪ್ಸ್‌ಗಳನ್ನು ಕಳುಹಿಸಿದ್ದಾರೆ. ‘ಸಂಬಳಕ್ಕಾಗಿ ಆಡಳಿತ ಮಂಡಳಿಯನ್ನು ಒತ್ತಾಯಿಸುವ ಬದಲಾಗಿ, ಸ್ವ ಉದ್ಯೋಗ ಮಾಡಿ ಬದುಕು ನಡೆಸುವ ನಿರ್ಧಾರ ಮಾಡಿದೆ. ಎರಡು ತಿಂಗಳುಗಳಲ್ಲಿ ಸುಮಾರು ಎರಡು ಕ್ವಿಂಟಲ್ ಬಾಳೆಕಾಯಿ ಚಿಪ್ಸ್ ಮಾರಾಟವಾಗಿದೆ’ ಎನ್ನುತ್ತಾರೆ ಸಂಧ್ಯಾ. ಗೃಹ ಉತ್ಪನ್ನ ಬೇಕಾದಲ್ಲಿ 9480102676, 9480085534 ಈ ಸಂಖ್ಯೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT