ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಟ್ಯಾಂಕರ್ ಉರುಳಿ ಅನಿಲ ಸೋರಿಕೆ, ಸುತ್ತಲಿನ 25 ಮನೆಗಳ ತೆರವು

18 ತಾಸು ಹೆದ್ದಾರಿ ಸಂಚಾರಕ್ಕೆ ತಡೆ
Last Updated 26 ಸೆಪ್ಟೆಂಬರ್ 2020, 14:23 IST
ಅಕ್ಷರ ಗಾತ್ರ

ಕುಮಟಾ: ಸಮೀಪದ ಹಂದಿಗೋಣದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಡುಗೆ ಅನಿಲ ಸಾಗಣೆಯ ಟ್ಯಾಂಕರ್ ಶನಿವಾರ ಪಲ್ಟಿಯಾಯಿತು. ಅದರಿಂದ ಅನಿಲ ಸೋರಿಕೆ ಉಂಟಾಗಿ ಸುರಕ್ಷತೆಯ ದೃಷ್ಟಿಯಿಂದ ಸುತ್ತಲಿನ 30ಕ್ಕೂ ಹೆಚ್ಚು ಮನೆಗಳ ನಿವಾಸಿಗಳನ್ನು ತೆರವುಗೊಳಿಸಲಾಯಿತು.

ಟ್ಯಾಂಕರ್ ಉರುಳಿದ ಜಾಗದಿಂದ ಸುಮಾರು 200 ಮೀಟರ್ ಅಂತರದ ಮನೆಗಳಲ್ಲಿ ಬೆಂಕಿ ಹೊತ್ತಿಸದಂತೆ ಪೊಲೀಸರು ಧ್ವನಿವರ್ಧಕದ ಮೂಲಕ ಸೂಚನೆ ನೀಡಿದರು.

ಟ್ಯಾಂಕರ್ ಬಿದ್ದ ಜಾಗದಿಂದ ರಸ್ತೆಯ ಎರಡೂ ಕಡೆಗಳಲ್ಲಿ ನಾಲ್ಕೈದು ಕಿಲೋಮೀಟರ್ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಂಗಳೂರು ಕಡೆಗೆ ಹೋಗುವವರಿಗೆ ಪಟ್ಟಣದ ಗಿಬ್ಸ್ ವೃತ್ತದಿಂದ ಸಿದ್ದಾಪುರ ರಸ್ತೆಯಲ್ಲಿ ಚಂದಾವರ ಮೂಲಕ ಹೊನ್ನಾವರ ತಲುಪುವಂತೆ ಪರ್ಯಾಯ ಸಂಚಾರ ವ್ಯವಸ್ಥೆ ಕಲ್ಪಿಸಲಾಯಿತು.

ಅಸಮರ್ಪಕ ರಸ್ತೆ ಕಾಮಗಾರಿ:‘ರಾಷ್ಟ್ರೀಯ ಹೆದ್ದಾರಿಗೆ ಪ್ರತಿಸಲ ಮರು ಡಾಂಬರೀಕರಣ ಮಾಡಿದಾಗ ರಸ್ತೆಯು ನೆಲಕ್ಕಿಂತ ಅರ್ಧ ಅಡಿ ಹೆಚ್ಚು ಎತ್ತರವಾಗುತ್ತದೆ. ವೇಗವಾಗಿ ಹೋಗುವ ಟ್ಯಾಂಕರ್‌ನಂಥ ಭಾರದ ವಾಹನ ರಸ್ತೆ ಕೆಳಗೆ ಇಳಿದಾಗ ಉರುಳಿ ಬೀಳುತ್ತವೆ. ರಸ್ತೆಯ ಎರಡೂ ಬದಿ ಇಳಿಜಾರು ನಿರ್ಮಿಸಿ ಸರಿಪಡಿಸಿದರೆ ಅಪಘಾತ ತಪ್ಪುತ್ತದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸ್ಥಳೀಯ ಮುಖಂಡ ಗಜು ನಾಯ್ಕ ಅಳ್ವೆಕೋಡಿ ತಿಳಿಸಿದರು.

‘ಟ್ಯಾಂಕರ್ ಬಿದ್ದ ಪ್ರದೇಶದಲ್ಲಿ ಹೆದ್ದಾರಿ ಬದಿ ಅರ್ಧ ಅಡಿಗಿಂತ ಹೆಚ್ಚು ಆಳವಿದೆ. ಐದು ವರ್ಷಗಳಲ್ಲಿ ಈ ಪ್ರದೇಶದಲ್ಲಿ ಮೂರು ಟ್ಯಾಂಕರ್‌ಗಳು ಹೀಗೇ ಉರುಳಿವೆ. ಸಮಸ್ಯೆ ಹೇಳಿಕೊಂಡರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ಚತುಷ್ಪಥ ಹೆದ್ದಾರಿ ನಿರ್ಮಿಸುವ ಐ.ಆರ್.ಬಿ ಕಂಪನಿಯವರು ಪರಸ್ಪರ ಬೆರಳು ಮಾಡಿ ತೋರಿಸುತ್ತಾರೆ. ಹೋರಾಟ ಮಾಡಿದ ನಂತರ ಎ.ಪಿ.ಎಂ.ಸಿ ತಿರುವಿನಲ್ಲಿ ಮಾತ್ರ ರಸ್ತೆ ಸರಿಪಡಿಸಿ ಉಳಿದಡೆ ಹಾಗೇ ಬಿಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT