ಶುಕ್ರವಾರ, ಡಿಸೆಂಬರ್ 3, 2021
20 °C
ಸಮುದ್ರ ದಂಡೆ, ರಸ್ತೆ ಬದಿ, ನದಿ ತಟದಲ್ಲಿ ಬಹಿರ್ದೆಸೆ: ತಡೆಗೆ ಮತ್ತಷ್ಟು ಜಾಗೃತಿ ಅಗತ್ಯ

ಉತ್ತರ ಕನ್ನಡ: ದಾಖಲೆಯಲ್ಲಷ್ಟೇ ಬಯಲು ಶೌಚ ಮುಕ್ತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಬಯಲು ಬಹಿರ್ದೆಸೆಗೆ ಕಡಿವಾಣ ಬಿದ್ದಿದೆ. ಇಂಥ ಕಾರ್ಯಗಳಿಂದ ತಮ್ಮ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಜನರಿಗೂ ಅರಿವು ಮೂಡಿದೆ. ಆದರೆ, ನಗರ ಹಾಗೂ ಪಟ್ಟಣಗಳಲ್ಲೇ ಈ ಸಮಸ್ಯೆ ಅಲ್ಲಲ್ಲಿ ಮುಂದುವರಿದಿದೆ.

ಹಳ್ಳಿಗಳಲ್ಲಿ ಮನೆ ಮನೆಗಳಲ್ಲಿ ಶೌಚಾಲಯಗಳ ನಿರ್ಮಾಣವಾಗಿದ್ದು, ಅವುಗಳ ಬಳಕೆಯೂ ಆಗುತ್ತಿದೆ. ವೈಯಕ್ತಿಕ ಶೌಚಾಲಯಗಳು ಇಲ್ಲದ ಮನೆಗಳ ಸಂಖ್ಯೆ ಅತ್ಯಂತ ಕಡಿಮೆ ಇವೆ. ಮಲೆನಾಡಿನಲ್ಲಿ ಇಂಥ ಸೌಕರ್ಯವನ್ನು ಹಲವರು ವೈಯಕ್ತಿಕ ನೆಲೆಯಿಂದಲೇ ಮಾಡಿಕೊಂಡಿದ್ದಾರೆ. ಆದರೆ, ಕರಾವಳಿಯ ವಿವಿಧೆಡೆ ನದಿ, ಕಡಲತೀರಗಳಲ್ಲಿ ಬಯಲು ಶೌಚ ಮಾಡುವುದು ಇನ್ನೂ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ.

‘ಕಾರವಾರ ತಾಲ್ಲೂಕಿನ ಮಾಜಾಳಿ, ದಂಡೇಬಾಗ, ಕಾಳಿ ನದಿ ಸಂಗಮದ ಸಮೀಪ ಇಂದಿಗೂ ನಡೆಯುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇಲ್ಲದಿದ್ದರೆ ಅಸಹ್ಯ ಪಟ್ಟುಕೊಳ್ಳಬೇಕಾಗುತ್ತದೆ’ ಎಂದು ವಾಯುವಿಹಾರಕ್ಕೆ ಹೋಗುವ ರಮೇಶ ನಾಯ್ಕ ದೂರುತ್ತಾರೆ.

‘ಹಲವರ ಮನೆಗಳಲ್ಲಿ ಶೌಚಾಲಯಗಳಿವೆ. ಆದರೂ ಅವುಗಳ ಬಳಕೆ ಮಾಡುವುದಿಲ್ಲ. ಬಯಲಲ್ಲಿ ಬೀಡಿ, ಸಿಗರೇಟು ಸೇದುತ್ತ ಕುಳಿತು ಬಹಿರ್ದೆಸೆ ಮಾಡುವುದು ಹಲವರಿಗೆ ರೂಢಿಯಾಗಿದೆ. ಈ ರೀತಿ ಅನಾಗರಿಕವಾಗಿ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ.

ಶಿರಸಿ: ತಾಲ್ಲೂಕಿನ ಬಹುತೇಕ ಹಳ್ಳಿಗಳು ಬಯಲು ಬಹಿರ್ದೆಸೆಯಿಂದ ಮುಕ್ತಗೊಂಡಿವೆ. ಎರಡು ವರ್ಷಗಳ ಹಿಂದೆ ಮೊದಲ ಹಂತದ ಅಭಿಯಾನದಲ್ಲಿ ಸಾವಿರಾರು ಶೌಚಾಲಯಗಳು ನಿರ್ಮಾಣಗೊಂಡಿದ್ದು, ಎರಡನೇ ಹಂತದಲ್ಲಿ 160 ಶೌಚಾಲಯಗಳು ನಿರ್ಮಾಣಗೊಂಡಿವೆ.

ಆದರೂ ಅಲ್ಲಲ್ಲಿ ಜಾಗದ ಕೊರತೆ ಕಾರಣಕ್ಕೆ ಶೌಚಾಲಯ ಕಟ್ಟಿಸಿಕೊಳ್ಳಲು ಪರದಾಡುತ್ತಿರುವ ಕುಟುಂಬಗಳು ಇವೆ. ಕೆಲವು ಗ್ರಾಮಗಳಲ್ಲಿ ಇಂತಹ ಮನೆಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ. 

ಶೌಚಾಲಯ ಇಲ್ಲದ ಮನೆಗಳನ್ನು ಗುರುತಿಸಿ ಸ್ವಚ್ಛ ಭಾರತ ಅಭಿಯಾನ, ನರೇಗಾ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಗುತ್ತಿದೆ. ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ₹12 ಸಾವಿರ, ಪರಿಶಿಷ್ಟ ವರ್ಗದ ಫಲಾನುಭವಿಗಳಿಗೆ ₹15 ಸಾವಿರ ಅನುದಾನ ನೀಡಲಾಗುತ್ತಿದೆ.

‘ವಸತಿ ಯೋಜನೆ ಅಡಿ ಮನೆ ಮಂಜೂರಾದವರು ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಬೇಕಿದೆ. ಹೊಸದಾಗಿ ಮನೆ ನಿರ್ಮಿಸಿಕೊಂಡವರಿಗೂ ಶೌಚಾಲಯ ಕಟ್ಟಿಸಿಕೊಳ್ಳುವಂತೆ ಸೂಚಿಸಲಾಗುತ್ತಿದೆ. ಪ್ರತಿ ಗ್ರಾಮಗಳಲ್ಲಿ ನಿರಂತರ ಸಮೀಕ್ಷೆ ನಡೆಸಲಾಗುತ್ತಿದ್ದು, ಶೌಚಾಲಯ ರಹಿತರ ಸಂಖ್ಯೆ ತಾಲ್ಲೂಕಿನಲ್ಲಿ ಇಲ್ಲ’ ಎನ್ನುತ್ತಾರೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ.ಚೆನ್ನಣ್ಣನವರ.

ಹೊನ್ನಾವರ: ಉತ್ತರ ಕನ್ನಡವು ಬಯಲು ಶೌಚ ಮುಕ್ತ ಜಿಲ್ಲೆಯೆಂದು ಘೋಷಣೆಯಾಗಿರುವಾಗ ಹೊನ್ನಾವರ ತಾಲ್ಲೂಕು ಕೂಡ ಈ ಗೌರವದ ಪಾಲು ಪಡೆದಿದೆ.

2018ರಲ್ಲಿ ಘೋಷಣೆಯಾದ ನಂತರದಲ್ಲಿ ಹಲವು ಬದಲಾವಣೆಗಳಾಗಿವೆ. ಮನೆಗಳು ಹೆಚ್ಚಾದಂತೆ ಅದೇ ಪ್ರಮಾಣದಲ್ಲಿ ಶೌಚಾಲಯಗಳ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ.

‘ಕಟ್ಟಡ, ಇತರ ಸಾಮಗ್ರಿ ಹಾಗೂ ಕೂಲಿ ದರದಲ್ಲಿ ತೀವ್ರ ಏರಿಕೆಯಾಗಿರುವುದರಿಂದ ಸರ್ಕಾರ ನೀಡುವ ಸಹಾಯಧನ ಶೌಚಾಲಯ ನಿರ್ಮಾಣಕ್ಕೆ ಏನೇನು ಸಾಲದು’ ಎಂದು ಗುಂಡಿಬೈಲ್‌ನ ಸುಬ್ರಹ್ಮಣ್ಯ ನಾಯ್ಕ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಸಿದ್ದಾಪುರ: ತಾಲ್ಲೂಕಿನಲ್ಲಿ ಬಯಲು ಬಹಿರ್ದೆಸೆ ಕಡಿಮೆಯಾಗಿದೆ. ಆದರೆ, ತಾಲ್ಲೂಕು ಸಂಪೂರ್ಣ ಮುಕ್ತವಾಗಿಲ್ಲ. ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಈಗಲೂ ಜನರು ಬಯಲನ್ನೇ ಆಶ್ರಯಿಸಿದ್ದಾರೆ. 

ಕೆಲವು ವರ್ಷಗಳ ಹಿಂದೆ ತಾಲ್ಲೂಕು ನಿವೃತ್ತ ನೌಕರರ ಸಂಘ ಶೌಚಾಲಯದ ಅಗತ್ಯದ ಬಗ್ಗೆ ಇಡೀ ತಾಲ್ಲೂಕಿನಾದ್ಯಂತ ಅಭಿಯಾನವನ್ನೇ ನಡೆಸಿತು. ಇಂತಹದ್ದೇ ಹಲವು ಕಾರಣಗಳಿಂದ ಶೌಚಾಲಯದ ಅಗತ್ಯದ ಬಗ್ಗೆ ಜನರಲ್ಲಿ ಜಾಗೃತಿಯೂ ಉಂಟಾಯಿತು. ಜನರಲ್ಲಿ ಉಂಟಾದ ಜಾಗೃತಿ ಸಕಾರಾತ್ಮಕ ಪರಿಣಾಮ ಬೀರಿದೆ.

‘ಶೌಚಾಲಯಕ್ಕೆ ಸಂಬಂಧಿಸಿದ ಸರ್ಕಾರದ ಯೋಜನೆ ಜಾರಿಯಾದ ನಂತರವೂ ತಾಲ್ಲೂಕಿನಲ್ಲಿ ನೂರಕ್ಕೆ ನೂರು ಕುಟುಂಬಗಳಿಗೆ ಶೌಚಾಲಯ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ. ಶೇ 70ರಷ್ಟು ಕುಟುಂಬಗಳಿಗೆ ಮಾತ್ರ ಶೌಚಾಲಯ ಇರಬಹುದು’ ಎಂಬುದು ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಗೌಡರ್‌ ಅವರ ಅಭಿಪ್ರಾಯ.

ಕೋಳಿ ಗೂಡು, ಕಟ್ಟಿಗೆ ಸಂಗ್ರಹ!

ಕುಮಟಾ: ತಾಲ್ಲೂಕು ಬಯಲು ಶೌಚ ಮುಕ್ತವಾಗಿದ್ದರೂ ಶೌಚಾಲಯ ಕಟ್ಟಿಸಿಕೊಂಡವರು ನೀರಿನ ಕೊರತೆಯ ಕಾರಣವೊಡ್ಡಿ ಅದನ್ನು ಕೋಳಿ ಗೂಡು, ಕಟ್ಟಿಗೆ ಸಂಗ್ರಹ ಕೊಠಡಿಯಾಗಿಸಿಕೊಂಡಿರುವ ಉದಾಹರಣೆಗಳಿವೆ.

2011ರಲ್ಲಿ ಆಶಾ ಕಾರ್ಯಕರ್ತೆಯರು ನಡೆಸಿದ ಸಮೀಕ್ಷೆಯ ಪ್ರಕಾರ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ಪ್ರತಿ ಫಲಾನುಭವಿಗೂ ಶೌಚಾಲಯ ನಿರ್ಮಾಣಕ್ಕೆ ಸರ್ಕಾರದ ₹12 ಸಾವಿರ ಸಹಾಯಧನ ನೀಡಿದೆ.

ಎ.ಪಿ.ಎಲ್ ಪಡಿತರ ಚೀಟಿ ಹೊಂದಿರುವವರಿಗೆ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮನವೊಲಿಸಲಾಗಿದೆ. ನದಿ, ಬೆಟ್ಟ, ಕಾಲುವೆ ಸನಿಹ ಇರುವ ಎಷ್ಟೋ ಜನರ ಮನೆಗಳಲ್ಲಿ ಶೌಚಾಲಯ ಇದ್ದರೂ ಅವರಲ್ಲಿ ಕೆಲವರು ಅದನ್ನು ಬಳಸದೆ ಪ್ರಕೃತಿ ಮಡಿಲನ್ನೇ ಆಶ್ರಯಿಸುತ್ತಿದ್ದಾರೆ.

‘ಕುಟುಂಬ ವಿಭಜನೆಯ ನಂತರ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವವರು ಶೌಚಾಲಯಕ್ಕೆ ಅರ್ಜಿ ಸಲ್ಲಿಸಿದ ತಕ್ಷಣ ಅವರಿಗೆ ಸಹಾಯಧನ ಮಂಜೂರು ಮಾಡಲಾಗುತ್ತದೆ. ಶೌಚಾಲಯವನ್ನು ಸಮರ್ಪಕವಾಗಿ ಬಳಕೆ ಮಾಡುವ ಬಗ್ಗೆ ಜನರಿಗೆ ಮಾಹಿತಿ ಮತ್ತು ಸರ್ವೆ ಕಾರ್ಯ ಬರುವ ನವೆಂಬರ್ ತಿಂಗಳ ಅಂತ್ಯಕ್ಕೆ ಮುಗಿಯಬೇಕಾಗಿದೆ. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಶೌಚಾಲಯ ಬಳಕೆಯ ಜಾಗೃತಿ ಚಳವಳಿಯನ್ನು ಮುಂದುವರಿಸಲಾಗಿದೆ’ ಎಂದು ಕಾಯನಿರ್ವಾಹಕ ಅಧಿಕಾರಿ ಸಿ.ಟಿ. ನಾಯ್ಕ ತಿಳಿಸಿದರು.

ನದಿಗೆ ಶೌಚದ ನೀರು:

ಹೊನ್ನಾವರ: ಅರಣ್ಯ ಅತಿಕ್ರಮಿತ ಜಾಗದಲ್ಲಿ ಬಹಳಷ್ಟು ಮನೆಗಳು ನಿರ್ಮಾಣಗೊಂಡಿದ್ದು, ಈ ಮನೆಗಳ ಮಾಲೀಕರಿಗೆ ಶೌಚಾಲಯ ನಿರ್ಮಿಸಲು ಸಹಾಯಧನಕ್ಕಿಲ್ಲ. ಶೌಚಾಲಯಗಳಿಗೆ ಅಗತ್ಯವಾದ ಇಂಗು ಗುಂಡಿ ನಿರ್ಮಿಸದೇ ತ್ಯಾಜ್ಯವನ್ನು ಗುಂಡಬಾಳ ಸೇರಿದಂತೆ ವಿವಿಧ ನದಿ ಹಾಗೂ ಹಳ್ಳಗಳ ದಂಡೆಗಳಲ್ಲಿ ನಿರ್ಮಿಸ ಲಾಗಿರುವ ಶೌಚಾಲಯಗಳಿಂದ ನೇರವಾಗಿ ನೀರಿಗೆ ಬಿಡಲಾಗುತ್ತಿದೆ ಎಂಬ ಆತಂಕ ಕೂಡ ವ್ಯಕ್ತವಾಗಿದೆ.

‘ಶೌಚಾಲಯಗಳ ತ್ಯಾಜ್ಯವನ್ನು ಹಳ್ಳ-ನದಿಗಳಿಗೆ ಬಿಡಲು ಅವಕಾಶವಿಲ್ಲ. ಹಾಗೆ ಮಾಡಿದ್ದು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸುತ್ತೇವೆ’ ಎಂಬುದು ಅಧಿಕಾರಿಗಳು ನೀಡುವ ಎಚ್ಚರಿಕೆಯಾಗಿದೆ.

ಜನಜಾಗೃತಿ ಮೂಡಿಸಿದ್ದರಿಂದ ಎರಡು ವರ್ಷಗಳಲ್ಲಿ ಜಾಗದ ಕೊರತೆಯ ನಡುವೆಯೂ ಶೌಚಾಲಯ ನಿರ್ಮಾಣಕ್ಕೆ ಜಾಗ ಹೊಂದಿಸಿಕೊಂಡು, ನಿರ್ಮಿಸಿಕೊಂಡವರು ಅನೇಕರಿದ್ದಾರೆ.

– ಎಫ್.ಜಿ.ಚೆನ್ನಣ್ಣನವರ, ಇ.ಒ ಶಿರಸಿ ತಾ.ಪಂ.

ಆಸ್ತಿ ವಿಭಜನೆಯಾದರೂ ಪಹಣಿಯಲ್ಲಿ ನಮೂದಾಗದಿದ್ದರೆ ಶೌಚಾಲಯಕ್ಕೆ ಸಹಾಯಧನ ನೀಡಲಾಗದು. ಆಯಾ ಗ್ರಾ.ಪಂ ವ್ಯಾಪ್ತಿಯಲ್ಲಿ ಅಗತ್ಯತೆ ಪರಿಶೀಲಿಸಿ ಮಂಜೂರು ಮಾಡಲಾಗುತ್ತಿದೆ.

– ಸುರೇಶ ನಾಯ್ಕ, ಇ.ಒ ಹೊನ್ನಾವರ ತಾ.ಪಂ.

ಪ್ರಜಾವಾಣಿ ತಂಡ: ಸದಾಶಿವ ಎಂ.ಎಸ್, ಗಣಪತಿ ಹೆಗಡೆ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ರವೀಂದ್ರ ಭಟ್ ಬಳಗುಳಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು