ಸೋಮವಾರ, ಜೂನ್ 27, 2022
27 °C
ಕಸ್ತೂರಿ ರಂಗನ್– ಮಾಧವ ಗಾಡ್ಗೀಳ್ ಶಿಫಾರಸುಗಳ ಬಗ್ಗೆ ಹಲವು ಆಕ್ಷೇಪಗಳು

ಗಾಡ್ಗೀಳ್ ವರದಿಯತ್ತ ಹಲವರ ಚಿತ್ತ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

ಕಾರವಾರ: ಮಾಧವ ಗಾಡ್ಗೀಳ್ ಸಮಿತಿಯ ವರದಿ ಬಗ್ಗೆ ಕೇಳಿಬಂದ ಟೀಕೆಗಳ ಕಾರಣ, ಅದನ್ನು ಅಧ್ಯಯನ ಮಾಡಿ ಹೊಸ ವರದಿ ನೀಡಲು ಕೇಂದ್ರ ಸರ್ಕಾರವು 2012ರಲ್ಲಿ ಕಸ್ತೂರಿ ರಂಗನ್ ಸಮಿತಿಯನ್ನು ನೇಮಿಸಿತು. 

ಗಾಡ್ಗೀಳ್ ವರದಿಯು ಕಾಡಿನ ನಡುವೆ ಜೀವಿಸುತ್ತಿರುವವರ ಬದುಕಿಗೆ ಹತ್ತಿರವಿದೆ. ಯಾವುದೇ ನಿರ್ಬಂಧಗಳನ್ನು ಹೇರುವ ಮೊದಲು ಸ್ಥಳೀಯರೊಂದಿಗೆ ಚರ್ಚಿಸಬೇಕು ಎಂದು ಶಿಫಾರಸು ಮಾಡಿತ್ತು. ಅಲ್ಲದೇ, ವರದಿ ಸಿದ್ಧಪಡಿಸುವ ಮೊದಲು ಜನರ ಜತೆ ಸಂವಾದ ನಡೆಸಲಾಗಿತ್ತು. ಹಾಗಾಗಿ, ಈ ವರದಿಯಿಂದ ಅಷ್ಟಾಗಿ ತೊಂದರೆಯಿಲ್ಲ ಎಂಬುದು ಹಲವರ ಅನಿಸಿಕೆಯಾಗಿದೆ.

ಕಸ್ತೂರಿ ರಂಗನ್ ನೇತೃತ್ವದ ಸಮಿತಿಯು ಉಪಗ್ರಹ ಆಧಾರಿತ ಚಿತ್ರಗಳನ್ನು ಅಧ್ಯಯನ ಮಾಡಿ ವರದಿ ಸಿದ್ಧಪಡಿಸಿದೆ. ಇದರಲ್ಲಿ ಹಲವು ಅಂಶಗಳು ಬೆಳಕಿಗೆ ಬಂದಿಲ್ಲ. ಇದು ವಾಸ್ತವಾಂಶಗಳಿಂದ ಕೂಡಿಲ್ಲ ಎಂಬುದು ವಿರೋಧಿಸುವವರ ದೂರಾಗಿದೆ.

ಈ ವರದಿಗಳ ಬಗ್ಗೆ ಅಧ್ಯಯನ ಮಾಡಿರುವ ಶಿರಸಿ ತಾಲ್ಲೂಕಿನ ಭೈರುಂಬೆಯ ಕೆ.ಎಂ.ಹೆಗಡೆ, ‘ವರದಿಗಳನ್ನು ಅಧ್ಯಯನ ಮಾಡದವರೇ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ. ಗಾಡ್ಗೀಳ್ ವರದಿಯಲ್ಲಿ ಗುರುತಿಸಿದ್ದಕ್ಕಿಂತ ಕಡಿಮೆ ಪ್ರದೇಶವನ್ನು ಕಸ್ತೂರಿ ರಂಗನ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ ಸರ್ಕಾರವು ಅದರತ್ತ ಒಲವು ಹೊಂದಿದೆ’ ಎನ್ನುತ್ತಾರೆ.

ಗಾಡ್ಗೀಳ್ ವರದಿಯಲ್ಲೇನಿದೆ?
* ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯು (ಡಬ್ಯು.ಜಿ.ಇ.ಇ.ಪಿ) ಇಡೀ ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ಇ.ಎಸ್.ಎ) ಎಂದು ಶಿಫಾರಸು ಮಾಡಿದೆ.
* ಈ ಸಮಿತಿಯು ತನ್ನ ವರದಿಯಲ್ಲಿ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿರುವ 142 ತಾಲ್ಲೂಕುಗಳನ್ನು ಒಂದು, ಎರಡು ಮತ್ತು ಮೂರನೇ ಹಂತಗಳ ಪರಿಸರ ಸೂಕ್ಷ್ಮ ವಲಯ (ಎ.ಎಸ್.ಝೆಡ್) ಎಂದು ಗುರುತಿಸಿದೆ.
* ಮೊದಲ ಹಂತದಲ್ಲಿರುವ ತಾಲ್ಲೂಕುಗಳಲ್ಲಿ ಗಣಿಗಾರಿಕೆ, ಉಷ್ಣ ವಿದ್ಯುತ್ ಸ್ಥಾವರ ಸೇರಿದಂತೆ ಬಹುತೇಕ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಪ್ರಮಾಣದಲ್ಲಿ ನಿರ್ಬಂಧಿಸಬೇಕು.
* ಎ.ಎಸ್.ಝೆಡ್–1ರ ವ್ಯಾಪ್ತಿಯಲ್ಲಿ ಹೊಸ ಜಲಾಶಯಗಳನ್ನು ನಿರ್ಮಿಸಬಾರದು.
* ಪರಿಸರ ವಿಚಾರಗಳಲ್ಲಿ ಆಡಳಿತವು ಗ್ರಾಮ ಪಂಚಾಯಿತಿಯಿಂದ ಮೇಲಿನ ಹಂತಕ್ಕೆ ಹೋಗಬೇಕು. ಅಧಿಕಾರ ವಿಕೇಂದ್ರೀಕರಣ ಮಾಡಿ ಸ್ಥಳೀಯ ಆಡಳಿತಕ್ಕೆ ಹೆಚ್ಚಿನ ಬಲ ತುಂಬಬೇಕು.

ವರದಿ ಬಗ್ಗೆ ಟೀಕೆಗಳೇನು?
ಗಾಡ್ಗೀಳ್ ವರದಿಯು ಹೆಚ್ಚು ಪರಿಸರ ಪೂರಕವಾಗಿದ್ದು, ವಾಸ್ತವಾಂಶಗಳಿಂದ ಕೂಡಿಲ್ಲ. ಅಲ್ಲದೇ ಮಾಡಿರುವ ಶಿಫಾರಸುಗಳನ್ನು ಜಾರಿ ಮಾಡುವುದು ಕಷ್ಟಸಾಧ್ಯ ಎಂಬ ಟೀಕೆ ಎದುರಾಗಿತ್ತು. ವಿದ್ಯುತ್ ಉತ್ಪಾದನೆ ಮತ್ತು ಇತರ ಅಭಿವೃದ್ಧಿ ಯೋಜನೆಗಳಿಂದ ಪಶ್ಚಿಮ ಘಟ್ಟಕ್ಕೆ ಆಗಿರುವ ಹಾನಿಯನ್ನು ಸರಿಪಡಿಸಬೇಕು. ಆದರೆ, ಈ ಶಿಫಾರಸುಗಳನ್ನು ಜಾರಿ ಮಾಡಿದಾಗ ಆಗುವ ಆದಾಯ ನಷ್ಟದ ಭರ್ತಿಯ ಬಗ್ಗೆ ವರದಿಯಲ್ಲಿ ತಿಳಿಸಿಲ್ಲ ಎಂದು ಆಕ್ಷೇಪ ವ್ಯಕ್ತವಾಗಿತ್ತು.

ತಂತ್ರಜ್ಞಾನವನ್ನು ಬಳಸಿಕೊಂಡು ಸಿದ್ಧಪಡಿಸಲಾದ ಕಸ್ತೂರಿರಂಗನ್ ವರದಿಯು ವಾಸ್ತವಾಂಶಗಳಿಂದ ದೂರವಾಗಿದೆ. ಹಲವು ಪ್ರಮಾದಗಳಿಂದ ಕೂಡಿದೆ ಎಂಬ ಟೀಕೆಯಿದೆ. ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಕಡಿಮೆ ಮಾಡಿದ್ದರಿಂದ ಗಣಿಗಾರಿಕೆಯಂಥ ಚಟುವಟಿಕೆಗಳು ಹೆಚ್ಚಬಹುದು. ಇದು ಪರಿಸರಕ್ಕೆ ಮಾರಕವಾಗಬಹುದು ಎಂಬ ಆತಂಕವೂ ಹಲವರದ್ದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು