ಬುಧವಾರ, ಅಕ್ಟೋಬರ್ 28, 2020
29 °C
ಕುಮಟಾ ಎ.ಪಿ.ಎಂ.ಸಿ ಸದಸ್ಯ ಆರ್.ಎಚ್.ನಾಯ್ಕ ಅವರ ಪ್ರಯೋಗ

ಕೃತಕವಾಗಿ ‘ಮಿಲ್ಕ್‌ ಫಿಶ್’ ಸಾಕಣೆ: ಕುಮಟಾದಲ್ಲಿ ಪ್ರಯೋಗ

ಎಂ.ಜಿ.ನಾಯ್ಕ Updated:

ಅಕ್ಷರ ಗಾತ್ರ : | |

Prajavani

ಕುಮಟಾ: ಜೀವ ವೈವಿಧ್ಯದ ತಾಣ ಎನಿಸಿಕೊಂಡಿರುವ ಇಲ್ಲಿಯ ಅಘನಾಶಿನಿ ನದಿಯಲ್ಲಿ ಸಿಗುವ ನೈಸರ್ಗಿಕ ಮೀನುಗಳನ್ನು, ಪಕ್ಕದ ಗಜನಿಯಲ್ಲಿ ಉದ್ಯಮ ದೃಷ್ಟಿಯಿಂದ ಬೆಳೆಸುವ ಪರಿಪಾಠ ಆರಂಭವಾಗಿದೆ.

ಅಘನಾಶಿನಿ ಗ್ರಾಮದ ದೊಡ್ಡ ಗಜನಿಯಲ್ಲಿ ಸಮೀಪದ ಕಾಗಾಲದ ಉದ್ಯಮಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಆರ್.ಎಚ್.ನಾಯ್ಕ, ನದಿಯಲ್ಲಿ ಸಿಗುವ ‘ಹೂವಿನಸೆಳಕ ಮೀನು’ ಮರಿಗಳನ್ನು (ಮಿಲ್ಕ್ ಫಿಶ್) ಮೊದಲ ಬಾರಿ ಕೃತಕವಾಗಿ ಬೆಳೆಸುವ ಹೊಸ ಪ್ರಯೋಗ ಕೈಗೊಂಡಿದ್ದಾರೆ.

ತಿನ್ನಲು ರುಚಿಕರವಾಗಿರುವ ಈ ಮೀನು ಅಘನಾಶಿನಿ ನದಿ, ಹಿನ್ನೀರು ಗಜನಿಯಲ್ಲೂ ಸಿಗುತ್ತದೆ. ಆದರೆ, ಬೇಕಾದ ಪ್ರಮಾಣದಲ್ಲಿ ಸಿಗದ ಕಾರಣ ಕೃತಕವಾಗಿ ಬೆಳೆಸುವುದು ಅನಿವಾರ್ಯ. ಹಿಂದೆ ಮೊಸಳೆ ಸಾಲಿನ ಮೀನು ಕೃಷಿಕ ದಿವಂಗತ ಇಬ್ರಾಹಿಂ ಉಪ್ಪಾರಕರ್ ಎನ್ನುವವರು ತಮ್ಮ ಗಜನಿಯಲ್ಲಿ ನದಿಯಲ್ಲಿ ಸಿಗುವ ನೈಸರ್ಗಿಕ ಕುರಡೆ ಮೀನು ಬೆಳೆಸಿ ಗಮನ ಸೆಳೆದಿದ್ದರು.

ಆರ್.ಎಚ್.ನಾಯ್ಕ ಸುಮಾರು ಐದು ಎಕರೆ ಗಜನಿ ಪಾಂಡ್‌ನಲ್ಲಿ ಮಿಲ್ಕ್ ಫಿಶ್ ಜೊತೆ ಅಘನಾಶಿನಿ ನದಿಯಲ್ಲಿ ಸಿಗುವ ಕೆಲ ನೈಸರ್ಗಿಕ ಮೀನುಗಳನ್ನೂ ಬೆಳೆಸುತ್ತಿದ್ದಾರೆ.

‘5 ಸಾವಿರ ಮಿಲ್ಕ್ ಫಿಶ್ ಮೀನು ಮರಿ, ನೈಸರ್ಗಿಕ ಮೀನುಗಳಾದ 5 ಸಾವಿರ ಕಾಗಳಸಿ ಮರಿ, 10 ಸಾವಿರ ಮಡ್ಲೆ ಮರಿ, ಬಿಳಿ ಸಿಗಡಿ ಹಾಗೂ ಟೈಗರ್ ಸಿಗಡಿ (ಕಾಯಿ ಶೆಟ್ಲಿ) ಸೇರಿ 10 ಸಾವಿರ ಮರಿಗಳನ್ನು ತೊಟ್ಟಿಯಲ್ಲಿ ಬಿಡಲಾಗಿದೆ. ಮಿಲ್ಕ್ ಫಿಶ್ ಹೊರತಾಗಿ ಉಳಿದ ಯಾವ ಮೀನುಗಳಿಗೂ ಕೃತಕ ಆಹಾರ ನೀಡುತ್ತಿಲ್ಲ. ಮಿಲ್ಕ್ ಫಿಶ್‌ಗೆ ಗೋವಾ, ಕೇರಳದಲ್ಲಿ ಹೆಚ್ಚು ಬೇಡಿಕೆ ಇದೆ. ಇದನ್ನು ಹೆಚ್ಚಾಗಿ ಎಲ್ಲೆಡೆ ಫಿಶ್ ಮಸಾಲಾ, ತವಾ ಫ್ರೈ ಮಾಡಲು ಬಳಸುತ್ತಾರೆ’ ಎಂದರು.

‘ಜುಲೈ 8ರಂದು ಮರಿಗಳನ್ನು ಬಿಡಲಾಗಿತ್ತು. ಈಗ ಅವು 300 ಗ್ರಾಂ ತೂಗುವಷ್ಟು ಬೆಳೆದಿವೆ. ಡಿಸೆಂಬರ್‌ನಲ್ಲಿ ಸುಮಾರು ಒಂದು ಕೆ.ಜಿ. ತೂಗುವಷ್ಟು ಬೆಳೆವಣಿಗೆಯಾದ ನಂತರ ಹಿಡಿಯಲಾಗುವುದು. ಪ್ರತಿ ಕೆ.ಜಿ.ಗೆ ₹ 200 ದರ ಸಿಗುವ ನಿರೀಕ್ಷೆಯಿದೆ’ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿ ನೀಡಿದ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ತಿಮ್ಮಪ್ಪ ಎಂ.ಎಚ್, `ನದಿ ಅಳಿವೆಯಲ್ಲೂ ಹೂವಿನಸೆಳೆಕ ಮೀನುಗಳು ಸಿಗುತ್ತವೆ. ಆದರೆ, ಹೆಚ್ಚಿನ ಪ್ರಮಾಣದ ಮರಿಗಳನ್ನು ಮೀನು ಮರಿಕೇಂದ್ರಗಳಿಂದ ಪಡೆಯಬಹುದು’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು