ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ‘ಖಾತ್ರಿ’ ಪಡಿಸಿದ ಯೋಜನೆ

ಸಾವಿರಾರು ಜನರ ಹೊಟ್ಟೆಪಾಡಿಗೆ ದಿಕ್ಕು: ಈಗಾಗಲೇ ಶೇ 72.14ರಷ್ಟು ಸಾಧನೆ ಮಾಡಿದ ಜಿಲ್ಲೆ
Last Updated 4 ಅಕ್ಟೋಬರ್ 2020, 15:01 IST
ಅಕ್ಷರ ಗಾತ್ರ

ಕಾರವಾರ: ‘ಕೊರೊನಾ ವೈರಸ್ ಹರಡುವುದನ್ನು ತಡೆಯಲು ಲಾಕ್‌ಡೌನ್ ಘೋಷಿಸಿದಾಗ ಉದ್ಯೋಗ ಕಳೆದುಕೊಂಡೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಮಾರುಕಟ್ಟೆ ಪ್ರತಿನಿಧಿಯಾಗಿದ್ದ ನಾನು ಊರಿನಲ್ಲಿ ಹೊಟ್ಟೆಪಾಡಿಗೇನು ಮಾಡಲಿ ಎಂದು ಚಿಂತೆಗೀಡಾಗಿದ್ದೆ. ಉದ್ಯೋಗ ಖಾತ್ರಿಯು ನನ್ನನ್ನು ಬದುಕಿಸಿತು...’

ಅಂಕೋಲಾದ ಯುವಕ ರಾಮಕೃಷ್ಣನ ರೀತಿಯಲ್ಲೇ ಅನೇಕ ಮಂದಿ ಪದವೀಧರರು, ಬೇರೆ ಉದ್ಯೋಗಗಳಲ್ಲಿದ್ದವರು ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಿಂದ ಜೀವನ ಕಂಡುಕೊಂಡಿದ್ದಾರೆ. ಜನರಿಂದ ಬೇಡಿಕೆ ಹೆಚ್ಚುತ್ತಿದ್ದಂತೆ ಸರ್ಕಾರವು ಜಿಲ್ಲಾ ಪಂಚಾಯ್ತಿಗೆ ನಿಗದಿಪಡಿಸಿದ್ದ ವಾರ್ಷಿಕ ಗುರಿಯ ಮಾನವ ದಿನಗಳನ್ನೂ ತಲು‍ಪಲು ಸುಲಭವಾಗುತ್ತಿದೆ.‌

ಕೃಷಿ ಮತ್ತು ನೀರು ಇಂಗಿಸುವ ಕಾಮಗಾರಿಗಳಿಗೆ ಮಾತ್ರ ಆದ್ಯತೆ ನೀಡದೇ ಕೈತೋಟ, ಬಚ್ಚಲು ಮನೆಗಳ ನಿರ್ಮಾಣಕ್ಕೂ ಅವಕಾಶ ಕೊಡಲಾಗಿದೆ. ಮೊದಲ ಹಂತವಾಗಿ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ತಲಾ 20 ಬಚ್ಚಲು ಗುಂಡಿ ನಿರ್ಮಿಸಲಾಗುತ್ತಿದೆ. ಎಲ್ಲ 231 ಗ್ರಾಮ ಪಂಚಾಯ್ತಿಗಳಲ್ಲೂ ಯೋಜನೆ ಅನುಷ್ಠಾನದ ಗುರಿಯನ್ನು ಜಿಲ್ಲಾ ಪಂಚಾಯ್ತಿಯ ಅಧಿಕಾರಿಗಳು ಹೊಂದಿದ್ದಾರೆ.

ಗುರಿ ಮೀರಿ ಸಾಧನೆ:

ಶಿರಸಿ ತಾಲ್ಲೂಕಿನಲ್ಲಿ 1.92 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದೆ. ಏಪ್ರಿಲ್ ಆರಂಭದಿಂದ ಸೆಪ್ಟೆಂಬರ್ ಅಂತ್ಯಕ್ಕೆ 97 ಸಾವಿರ ಮಾನವ ದಿನಗಳನ್ನು ಪೂರ್ಣಗೊಳಿಸಲಾಗಿದೆ. ಆದರೆ, ಯೋಜನೆಯಡಿ ನೋಂದಣಿ ಮಾಡಿಸಿಕೊಂಡು ಉದ್ಯೋಗ ಪತ್ರ ಹೊಂದಿರುವ 27,214 ಜನರ ಪೈಕಿ ಕೇವಲ 9,754 ಜನ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಹಲಗದ್ದೆ ಗ್ರಾಮ ಪಂಚಾಯ್ತಿಯಲ್ಲಿ ಕಾಂಕ್ರೀಟ್ ರಸ್ತೆ, ಬನವಾಸಿ ಭಾಗದಲ್ಲಿ ಚರಂಡಿ ನಿರ್ಮಾಣ, ಬದನಗೋಡ ವ್ಯಾಪ್ತಿಯಲ್ಲಿ ಬಚ್ಚಲುಗುಂಡಿ ನಿರ್ಮಾಣ ಕಾರ್ಯ ಚುರುಕಾಗಿ ನಡೆದಿವೆ. ಬಿಸಲಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಪ್ಪಳ್ಳಿಯಲ್ಲಿ ಕೆರೆಯ ಹೂಳೆತ್ತುವ ಕೆಲಸವೂ ಆಗಿದೆ.

ಪೂರ್ವಭಾಗ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಸಮುದಾಯ ಕಾಮಗಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ತೋಟಗಾರಿಕೆ ಅವಲಂಬಿತವಾಗಿರುವ ಪಶ್ಚಿಮ ಭಾಗದ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ವೈಯಕ್ತಿಕ ಕಾಮಗಾರಿಗಳಾದ ತೋಟಗಳ ಅಭಿವೃದ್ಧಿ, ದನದ ಕೊಟ್ಟಿಗೆ ನಿರ್ಮಾಣ ಇವೇ ಮುಂತಾದ ಕೆಲಸಗಳು ನಡೆದಿವೆ ಎನ್ನುತ್ತಾರೆ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಎಫ್.ಜಿ.ಚೆನ್ನಣ್ಣನವರ.

ಮುಂಡಗೋಡ ತಾಲ್ಲೂಕಿನಲ್ಲಿ, ಲಾಕ್‍ಡೌನ್‌ನಿಂದ ಊರಿಗೆ ಮರಳಿದ ನೂರಾರು ಕುಟುಂಬಗಳು ಉದ್ಯೋಗ ಖಾತ್ರಿಯಡಿ ಕೆಲಸ ಪಡೆದಿವೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಾನವ ದಿನಗಳನ್ನು ಸೃಜಿಸಿದ ಮೂರನೇ ತಾಲ್ಲೂಕು ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಸೆಪ್ಟಂಬರ್ ಅಂತ್ಯದವರೆಗೆ ಒಟ್ಟು 1,67,707 ಮಾನವ ದಿನಗಳ ಬಳಕೆಯಾಗಿದೆ.

‘ಬಚ್ಚಲು ಗುಂಡಿ ಅಭಿಯಾನ ಹೆಚ್ಚು ಜನಪ್ರಿಯಗೊಂಡಿದೆ. ತಾಲ್ಲೂಕಿನ 16 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು 201 ಕಾಮಗಾರಿ ಕೈಗೊಂಡಿದ್ದು, 78 ಕೆಲಸಗಳು ಮುಕ್ತಾಯವಾಗಿವೆ. ಉಳಿದವನ್ನು 15 ದಿನಗಳಲ್ಲಿ ಮುಗಿಸಲು ಗುರಿ ನಿಗದಿಪಡಿಸಲಾಗಿದೆ’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ ಕಟ್ಟಿ ಹೇಳಿದರು.

‘ತೇಗಿನಕೊಪ್ಪ, ಅಗಡಿ, ಕರಗಿನಕೊಪ್ಪ ಸೇರಿದಂತೆ ಕೆಲವು ತಾಂಡಾಗಳಿಗೆ ಲಾಕ್‌ಡೌನ್‌ನಿಂದ ವಲಸೆ ಬಂದಿದ್ದ ಜನರಿಗೆ, ಹೊಸದಾಗಿ ಉದ್ಯೋಗ ಚೀಟಿ ಮಾಡಿಸಿ, ಅರಣ್ಯ ಪ್ರದೇಶದಲ್ಲಿ ಟ್ರೆಂಚ್ ನಿರ್ಮಾಣ ಕೆಲಸ ಕೊಡಲಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ 20 ಸಾವಿರ ಹೆಚ್ಚು ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಏಪ್ರಿಲ್‌ನಿಂದ ಸೆಪ್ಟಂಬರ್ ಅಂತ್ಯದವರೆಗೆ 5,118 ಕುಟುಂಬಗಳ 8,968 ಜನರಿಗೆ ಉದ್ಯೋಗ ನೀಡಲಾಗಿದೆ’ ಎಂದು ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಟಿ.ವೈ.ದಾಸನಕೊಪ್ಪ ಹೇಳಿದರು.

ಹಳಿಯಾಳ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯು ಹಲವರ ಹಸಿವು ನೀಗಿಸಲು ನೆರವಾಗಿದೆ. ತಾಲ್ಲೂಕಿನ ಒಟ್ಟು 1,65,980 ಮಾನವ ದಿನಗಳ ಗುರಿಯಲ್ಲಿ ಈಗಾಗಲೇ 1.83 ಲಕ್ಷ ಮಾನವ ದಿನಗಳನ್ನು ತಲುಪಲಾಗಿದೆ. ಪ್ರತಿಯೊಬ್ಬರಿಗೂ ದಿನಕ್ಕೆ ₹ 275 ಕೂಲಿ ಹಾಗೂ ಕಾಮಗಾರಿಗೆ ಉಪಯೋಗಿಸುವ ಸಲಕರಣೆಗಳನ್ನು ಸಜ್ಜುಗೊಳಿಸಲು ₹ 10 ನೀಡಲಾಗುತ್ತದೆ.

ಕೆರೆಗಳ ಹೂಳೆತ್ತುವುದು, ಅರಣ್ಯದಲ್ಲಿ ಟ್ರೆಂಚ್ ಹಾಗೂ ಬಂಡ್, ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಲು ಹೊಂಡಗಳು, ದನದ ಕೊಟ್ಟಿಗೆ ನಿರ್ಮಾಣ, ಕೃಷಿ ಹೊಂಡ, ಗೋಕಟ್ಟೆ, ಆಟದ ಮೈದಾನ, ಶಾಲಾ ಆವರಣ ಗೋಡೆ, ರೈತರ ಕಣ ಸಿದ್ಧಗೊಳಿಸುವುದು, ಶಾಲಾ ಕೈ ತೋಟ ಕಾಮಗಾರಿ ನಿರ್ವಹಿಸಲಾಗಿದೆ. ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ರಾಜೀವ ಗಾಂಧಿ ಸೇವಾ ಕೇಂದ್ರವನ್ನು ಸಹ ನಿರ್ಮಿಸಲಾಗಿದೆ.

ಕುಮಟಾ ತಾಲ್ಲೂಕಿನಲ್ಲಿ 2020–21ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು ₹ 1 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಟಿ.ನಾಯ್ಕ ತಿಳಿಸಿದ್ದಾರೆ.

ಯೋಜನೆಯಡಿ ಒಟ್ಟು 1,829 ಕುಟುಂಬಗಳು 38,434 ದಿವಸಗಳಲ್ಲಿ 222 ಕಾಮಗಾರಿಗಳನ್ನು ನಿರ್ವಹಿಸಿವೆ. ಗ್ರಾಮ ಪಂಚಾಯ್ತಿ ಅರಣ್ಯ ವ್ಯಾಪ್ತಿಯಲ್ಲಿ ನೀರಿಂಗಿಸುವ ಏಳು ಕಾಲುವೆಗಳು, ವಿವಿಧೆಡೆ 12 ಕೆರೆಗಳು, ಎರಡು ಚೆಕ್ ಡ್ಯಾಂಗಳು, ಐದು ಶಾಲಾ ಕಾಂಪೌಂಡ್‌ಗಳು, ನಾಲ್ಕು ಅಂಗನವಾಡಿಗಳು, 94 ದನದ ಕೊಟ್ಟಿಗೆಗಳು, 28 ಕಡಿಮೆ ಆಳದ ಬಾವಿಗಳು, ಮೀನು ಒಣಗಿಸುವ ಒಂದು ಕಣ, ಎರಡು ರಸ್ತೆಗಳು, 15 ಸಮುದಾಯದ ಕಾಮಗಾರಿಗಳು, ಸರ್ಕಾರದ ವಿವಿಧ ವಸತಿ ಯೋಜನೆಗಳ 45 ಮನೆಗಳ ನಿರ್ಮಾಣ ಹಾಗೂ ಏಳು ವೈಯಕ್ತಿಕ ಜಮೀನು ಅಭಿವೃದ್ಧಿ ಕಾಮಗಾರಿ ಸೇರಿವೆ ಎಂದು ವಿವರಿಸಿದ್ದಾರೆ.

1,476 ಕಾಮಗಾರಿ

ಸಿದ್ದಾಪುರ ತಾಲ್ಲೂಕಿಗೆ 92,809 ಮಾನವ ದಿನಗಳ ಗುರಿ ನಿಗದಿ ಮಾಡಲಾಗಿತ್ತು. ಸೆ.30ವರೆಗೆ 80,471 ಮಾನವ ದಿನಗಳ ಕೆಲಸ ಸಾಧ್ಯವಾಗಿದೆ.

ಈ ಯೋಜನೆಯಲ್ಲಿ ಈವರೆಗೆ ಒಟ್ಟು ₹ 1.98 ಕೋಟಿ ವೆಚ್ಚ ಮಾಡಲಾಗಿದೆ. ಒಟ್ಟು 1,476 ಕಾಮಗಾರಿಗಳು ನಡೆದಿವೆ ಎಂದು ತಾಲ್ಲೂಕು ಪಂಚಾಯ್ತಿ ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಾಜಗೋಡು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ನಾಯ್ಕ, ‘ಈ ವರ್ಷ ನಮ್ಮ ಗ್ರಾಮ ಪಂಚಾಯ್ತಿಯಲ್ಲಿ ನರೆಗಾದಲ್ಲಿ ಗುರಿ ಮೀರಿದ ಸಾಧನೆ ಮಾಡಿದ್ದೇವೆ. ಕೋವಿಡ್‌ ಹಿನ್ನೆಲೆಯಲ್ಲಿ ಸಮಾರಂಭಗಳು ಅಥವಾ ಜನರು ಸೇರುವಂತಹ ಕಾರ್ಯಕ್ರಮಗಳು ಇಲ್ಲವಾಗಿದ್ದ ಕಾರಣದಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡಲು ಸಾಧ್ಯವಾಯಿತು’ ಎಂದು ತಿಳಿಸಿದ್ದಾರೆ.

‘ಹೊಸ ಸಾಧ್ಯತೆಗಳಿಗೆ ಭಾಷ್ಯ’:

‌ಹೊನ್ನಾವರ ತಾಲ್ಲೂಕಿನಲ್ಲಿ ಜನರಿಗೆ ನೀಡಿರುವ ಜಾಬ್ ಕಾರ್ಡ್ ಗುತ್ತಿಗೆದಾರರ ಸ್ವತ್ತಾಗಿವೆ. ನಿರುದ್ಯೋಗಿಗಳ ಬದಲಿಗೆ ಜೆ.ಸಿ.ಬಿ ಮಾಲೀಕರಿಗೆ ಕೆಲಸ ಸಿಕ್ಕಿದೆ ಎಂಬ ಆಪಾದನೆಗಳೂ ಕೇಳಿ ಬಂದಿವೆ.

ಯೋಜನೆಯಿಂದ ಕೆಲವು ಗ್ರಾಮಗಳಲ್ಲಿ ಕೆರೆ, ಕಟ್ಟಡ, ನೈರ್ಮಲ್ಯ ಮೊದಲಾದವುಗಳಿಗೆ ಸಂಬಂಧಿಸಿದಂತೆ ಹಲವು ಅಭಿವೃದ್ಧಿ ಕಾರ್ಯಗಳಾಗಿವೆ.

‘ತಾಲ್ಲೂಕಿನಲ್ಲಿ ಆರು ತಿಂಗಳಲ್ಲಿ ಶೇ 53ರಷ್ಟು ಗುರಿ ಮುಟ್ಟಲಾಗಿದೆ. ಚಿಕ್ಕನಕೋಡ ಗ್ರಾಮ ಪಂಚಾಯ್ತಿಯಲ್ಲಿ ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಸಹಯೋಗದಲ್ಲಿ ಸುಮಾರು ₹ 40 ಲಕ್ಷ ವೆಚ್ಚದಲ್ಲಿ ಐದು ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗಿದೆ’ ಎಂದು ಯೋಜನೆಯ ಸಹಾಯಕ ನಿರ್ದೇಶಕ ಕೃಷ್ಣಾನಂದ ಹೇಳಿದರು.

‘ಯೋಜನೆಯ ಲಾಭ ಪಡೆದುಕೊಳ್ಳಲು ರೈತರು ದಾಖಲೆಗಳನ್ನು ಪೂರೈಸುವುದು ತಲೆನೋವಾಗಿದ್ದು, ಇದನ್ನು ಸರಳೀಕೃತಗೊಳಿಸಬೇಕು’ ಎಂದು ಮುಖಂಡ ನಾಗೇಶ ನಾಯ್ಕ ಬೀಳ್ಮಕ್ಕಿ ಆಗ್ರಹಿಸುತ್ತಾರೆ.

* ಕೋವಿಡ್ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯು ಆಪದ್ಭಾಂಧವನಂತೆ ಆಗಿದೆ. ಈ ಬಾರಿ ಕೈತೋಟ ಹಾಗೂ ಬಚ್ಚಲುಗುಂಡಿ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.

- ಮೊಹಮ್ಮದ್ ರೋಶನ್, ಜಿ.ಪಂ ಸಿ.ಇ.ಒ

–––––

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT