ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಗ್ರಾಮೀಣ ಕ್ರಾಂತಿಗೆ ಮಾದರಿ ‘ಮುಂಡಗನಮನೆ ಸೊಸೈಟಿ’

ಎರಡು ದಿನಗಳ ವಜ್ರ ಮಹೋತ್ಸವಕ್ಕೆ ಇಂದು ಚಾಲನೆ
Last Updated 14 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕು ಕೇಂದ್ರದಿಂದ 40 ಕಿ.ಮೀ ದೂರದ ಕುಗ್ರಾಮವೊಂದು ನಾಗರಿಕ ಸೌಲಭ್ಯಗಳನ್ನು ಮನೆ ಬಾಗಿಲಲ್ಲಿ ಕಾಣಲು ಕಾರಣವಾಗಿದ್ದು ಆ ಊರಿನ ಸಹಕಾರ ಸಂಘದಿಂದ. ಆನ್‌ಲೈನ್‌ ವಹಿವಾಟು, ನೆಫ್ಟ್ ಮೂಲಕ ಕ್ಷಣಾರ್ಧದಲ್ಲಿ ಹಣ ರವಾನೆಯಂತಹ ಸೇವೆಗಳು ಶಿರಸಿಯಲ್ಲೇ ವಿರಳವಾಗಿದ್ದ ಸಂದರ್ಭದಲ್ಲಿ, ಹಳ್ಳಿಗರಿಗೆ ಈ ಸೇವೆಯನ್ನು ಪರಿಚಯಿಸಿದ್ದು ಇದೇ ಸಹಕಾರಿ ಸಂಘ.

ಹೌದು, ಗ್ರಾಮೀಣ ಅಭಿವೃದ್ಧಿಯ ನೈಜ ಕ್ರಾಂತಿ ಮಾಡಿರುವ ಈ ಸಹಕಾರಿ ಸಂಘವೆಂದರೆ ತಾಲ್ಲೂಕಿನ ಮುಂಡಗನಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರ ಸಂಘ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವ ಕೆಲವೇ ಸಹಕಾರ ಸಂಘಗಳ ಸಾಲಿನಲ್ಲಿ ಈ ಸಂಘವೂ ಸೇರಿದೆ.

1959ರಲ್ಲಿ ದೇವನಳ್ಳಿಯಲ್ಲಿ ಸ್ಥಾಪನೆಗೊಂಡು ಸಹಕಾರ ಸಂಘವನ್ನು ನಾರಾಯಣ ನರಸಿಂಹ ಭಟ್ಟ ಮೂಲೆತೋಟ ಹಾಗೂ ಅವರ ಸಮಕಾಲೀನರು ಮತ್ತಿಘಟ್ಟಕ್ಕೆ ಸ್ಥಳಾಂತರಿಸಿದರು. ಈಗಲೂ ಕಾಲುಸಂಕ, ರಸ್ತೆಯಂತಹ ಅನೇಕ ಮೂಲ ಸೌಕರ್ಯಗಳ ನಿರೀಕ್ಷೆಯಲ್ಲಿರುವ ಮತ್ತಿಘಟ್ಟ ಭಾಗ, ಆರು ದಶಕಗಳ ಹಿಂದೆ ಕಾಲುದಾರಿಯ ಊರಾಗಿತ್ತು. ಊರಿನ ಅಭಿವೃದ್ಧಿಯ ದೂರದರ್ಶಿತ್ವ ಹೊಂದಿದ ಹಿರಿಯರು ಪ್ರಾರಂಭಿಸಿದ ಈ ಸಹಕಾರ ಸಂಘವು ಅಕ್ಷರಶಃ ಹಳ್ಳಿಗರ ಬದುಕಿಗೆ ಬೆಳಕಾಗಿದೆ.

ಟಿಎಸ್‌ಎಸ್ ಹಾಲಿ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೆಹಳ್ಳಿ ಅವರು ಸೊಸೈಟಿಯ ಅಧ್ಯಕ್ಷರಾಗಿ ನೊಗ ಹೊತ್ತರು. ಶೋಷಿತ ವರ್ಗಕ್ಕೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಸ್ಥಾಪನೆಯಾಗಿರುವ ಸಂಘದ ಆಶಯವನ್ನು ಈಡೇರಿಸುವ ಜೊತೆಗೆ, ಅವರು ಸಂಘವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದರು.

‘ಸಂಸ್ಥೆ ಪ್ರಾರಂಭವಾಗುವ ವೇಳೆಗೆ ಈ ಭಾಗದಲ್ಲಿ ರಸ್ತೆ, ವಾಹನ ಸೌಕರ್ಯ ಇರಲಿಲ್ಲ. ಸಾರ್ವಜನಿಕರು ಅಗತ್ಯ ಸಾಮಗ್ರಿಗಳನ್ನು ಹೊತ್ತು 36 ಕಿ.ಮೀ.ಗೂ ಹೆಚ್ಚು ದೂರ ಕಾಲ್ನಡಿಗೆಯಲ್ಲಿ ಮನೆ ತಲುಪಬೇಕಾಗಿತ್ತು. ಕೃಷಿ ಸಾಲ ನೀಡುವ ಪ್ರಮುಖ ಕಾರ್ಯದೊಂದಿಗೆ ಪ್ರಾರಂಭವಾದ ಸೊಸೈಟಿ, ಹಂತ ಹಂತವಾಗಿ ಜನರ ಅಗತ್ಯಗಳಿಗೆ ಸ್ಪಂದಿಸುತ್ತ ಹೋಯಿತು. ದೇವನಳ್ಳಿ, ಬೆಣಗಾಂವದಲ್ಲಿ ಶಾಖೆ ತೆರೆಯಿತು. ಪ್ರಸ್ತುತ ಜೀವನಾವಶ್ಯಕ ವಸ್ತು, ಕೃಷಿ ಉಪಕರಣ, ಗೊಬ್ಬರ, ಔಷಧಗಳನ್ನು ಮುಂಡಗನಮನೆ, ಬೆಣಗಾಂವ, ದೇವನಳ್ಳಿ, ಸರಗುಪ್ಪಾ, ದೇವನಮನೆ, ಕೆಳಗಿನಕೇರಿ, ಕಲ್ಲಳ್ಳಿ, ಕಳೂಗಾರ ಗ್ರಾಮದ 1100ಕ್ಕೂ ಹೆಚ್ಚು ಸದಸ್ಯರ ಮನೆಗಳಿಗೆ ತಲುಪಿಸುತ್ತಿದೆ’ ಎನ್ನುತ್ತಾರೆ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ.

‘ಮತ್ತಿಘಟ್ಟಕ್ಕೆ ರಸ್ತೆ ಸರಿಯಾಗಿಲ್ಲದ ಕಾಲದಲ್ಲಿ ಮಳೆಗಾಲದಲ್ಲಿ ಸಂಚಾರವೇ ದುಸ್ತರವಾಗಿತ್ತು. ಆಗ ಸೊಸೈಟಿಯೇ ಮುಂದಾಗಿ ರಸ್ತೆ ದುರಸ್ತಿಗೆ ಜನರನ್ನು ಒಗ್ಗೂಡಿಸಿ, ಬಾಡಿಗೆ ವಾಹನದಲ್ಲಿ ಅಗತ್ಯ ವಸ್ತುಗಳನ್ನು ತಂದು ಪೂರೈಸಿದ ಉದಾಹರಣೆಯೂ ಇದೆ’ ಎನ್ನುತ್ತಾರೆ ಹಿಂದಿನ ಕಾರ್ಯದರ್ಶಿ ವಿ.ಆರ್.ಹೆಗಡೆ.

ಸಂಘದ ನಿರ್ದೇಶಕರು, ಹಾಲಿ ಕಾರ್ಯದರ್ಶಿ ನಾಗಪತಿ ಹೆಗಡೆ, ಸಿಬ್ಬಂದಿ ಸಹಕಾರದಲ್ಲಿ ಸಂಘವು ಮುನ್ನಡೆಯುತ್ತಿದೆ. 2018–19ನೇ ಸಾಲಿನಲ್ಲಿ ₹ 30.55 ಲಕ್ಷ ಲಾಭ ಗಳಿಸಿದೆ.

*
ಗ್ರಾಹಕರ ಮತ್ತು ಸೊಸೈಟಿ ನಡುವಿನ ಸಂಬಂಧ ಯಾಂತ್ರಿಕವಾಗಿರುವ ಕಾಲದಲ್ಲಿ, ಇದಕ್ಕೆ ಭಿನ್ನವಾಗಿ ಗ್ರಾಹಕರೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿರುವ ಮುಂಡಗನಮನೆ ಸೊಸೈಟಿಯೆಂದರೆ, ಜನರಿಗೆ ಮತ್ತೊಂದು ಮನೆಯಿದ್ದಂತೆ
– ಶಂಕರ ದಿವೇಕರ, ಸ್ಥಳೀಯ ನಾಗರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT