ಶನಿವಾರ, ಏಪ್ರಿಲ್ 17, 2021
23 °C
ಭಟ್ಕಳದ ಸ್ನೇಹ ವಿಶೇಷ ಶಾಲೆಯಲ್ಲಿ ವಿನೂತನ ಪ್ರಯೋಗ

ಅಣಬೆ ಬೆಳೆದು ಶಾಲೆಯ ನಿರ್ವಹಣೆ

ರಾಘವೇಂದ್ರ ಭಟ್ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ: ಸುಮಾರು 35 ಬುದ್ಧಿಮಾಂದ್ಯ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಪಟ್ಟಣದ ಕೋಕ್ತಿನಗರದಲ್ಲಿ ಇರುವ ‘ಸ್ನೇಹ ವಿಶೇಷ ಶಾಲೆ’ಯ ಶಿಕ್ಷಕರು, ಇದೀಗ ಶಾಲೆಯ ನಿರ್ವಹಣೆಗೆ ಅಣಬೆ ಬೆಳೆದು ಮಾರಾಟ ಮಾಡಲು ಮುಂದಾಗಿದ್ದಾರೆ.

ಸುಮಾರು 20 ವರ್ಷಗಳಿಂದ ನಡೆಯುತ್ತಿರುವ ಈ ಶಾಲೆಯಲ್ಲಿ ವಿವಿಧ ಜಾತಿ, ಧರ್ಮಗಳ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇವರ ಪೈಕಿ 20 ಮಕ್ಕಳು ಪ್ರೌಢರಾಗಿದ್ದಾರೆ. ಒಂದು ವರ್ಷದ ಹಿಂದೆ ಮಕ್ಕಳಿಗೆ ಶಾಲೆಯಲ್ಲೇ ಉಳಿಯಲು ಅವಕಾಶ ನೀಡುವ ಮೂಲಕ ವಸತಿ ಶಾಲೆಯನ್ನಾಗಿ ಮಾಡಲಾಗಿದೆ.

ಶಾಲೆಯ ಮಕ್ಕಳ ಎರಡು ಹೊತ್ತಿನ ಊಟ, ತಿಂಡಿ, ಶಿಕ್ಷಕರ ವೇತನ ನೀಡುವುದು, ಶಾಲೆಯ ವಾಹನಕ್ಕೆ ಇಂಧನ ತುಂಬಿಸುವುದು ದೊಡ್ಡ ಹೊರೆಯಾಗಿದೆ. ಶಾಲೆಗೆ ಆಗಾಗ ದಾನಿಗಳಿಂದ ವಸ್ತು, ಹಣದ ರೂಪದಲ್ಲಿ ದೇಣಿಗೆ ಬರುತ್ತಿದ್ದರೂ ಖರ್ಚನ್ನು ನಿಭಾಯಿಸುವುದು ಮುಖ್ಯ ಶಿಕ್ಷಕಿ ಮಾಲತಿ ಉದ್ಯಾವರ್ ಅವರಿಗೆ ದೊಡ್ಡ ಸವಾಲಾಗಿದೆ. 

ಶಾಲೆಯ ನಿರ್ವಹಣೆಗೆ ನಿಯಮಿತವಾಗಿ ಆದಾಯ ಬರುವಂತೆ ಮಾಡಲು ಏನಾದರೂ ಮಾಡಬೇಕು ಎಂದು ಮುಖ್ಯಶಿಕ್ಷಕಿ ಮಾಲತಿ ಚಿಂತನೆ ನಡೆಸಿದರು. ಅಣಬೆ ಕೃಷಿಗೆ ಮುಂದಾಗಿ ಕಾರ್ಯಪ್ರವೃತ್ತರಾದರು. ತಮ್ಮ ಸಹೋದರಿಯ ನೆರವಿನಿಂದ ಬೆಂಗಳೂರಿನ ಹೆಸರುಘಟ್ಟ ಪ್ರದೇಶದಿಂದ ಅಣಬೆ ಬೀಜಗಳನ್ನು ತರಿಸಿದರು. ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಒಗ್ಗೂಡಿಸಿಕೊಂಡು ಅಣಬೆ ಬೆಳೆಯಲು ಅರಂಭಿಸಿದರು.

‘₹ 1 ಸಾವಿರ ಬಂದರೆ ಸಾರ್ಥಕ’: ಅಣಬೆ ಬೆಳೆಯಲು ತರಬೇತಿಯನ್ನೂ ಪಡೆದುಕೊಂಡು ಬಂದಿರುವ ಮುಖ್ಯ ಶಿಕ್ಷಕಿ ಮಾಲತಿ, ಮೂರು ವಿವಿಧ ನಮೂನೆಗಳ ಅಣಬೆ ಬೆಳೆಯಲು ಯೋಜಿಸಿದ್ದಾರೆ.

‘ಬೆಳೆದ ಅಣಬೆಗೆ ಮಾರುಕಟ್ಟೆ ಒದಗಿಸಿಕೊಡುವಂತೆ ಹಲವರಲ್ಲಿ ವಿನಂತಿಸಿಕೊಂಡಾಗ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಣಬೆಯಿಂದ ಪ್ರತಿನಿತ್ಯ ₹ 1 ಸಾವಿರ ಗಳಿಸಲು ಸಾಧ್ಯವಾದರೆ ನಮ್ಮ ಪ್ರಯತ್ನ ಸಾರ್ಥಕವಾಗಲಿದೆ. ಮಕ್ಕಳನ್ನು ಪೋಷಿಸುವ ಧೈರ್ಯವೂ ಬರುತ್ತದೆ’ ಎಂದು ವಿವರಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು