ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಬಸ್ ವೇಳಾಪಟ್ಟಿ ಹೊಂದಿಸುವ ತಲೆಬಿಸಿ!

ಬೇರೆ ಬೇರೆ ಸಮಯದಲ್ಲಿ ತರಗತಿಗಳು: ಗ್ರಾಮೀಣ ವಿದ್ಯಾರ್ಥಿಗಳಿಗೆ ಸಮಸ್ಯೆ
Last Updated 6 ಜನವರಿ 2021, 19:30 IST
ಅಕ್ಷರ ಗಾತ್ರ

ಕಾರವಾರ: ಕೋವಿಡ್ ಪ್ರಭಾವ ಕಡಿಮೆಯಾದ ಬಳಿಕ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲೂ ಶಾಲೆಗಳು ಆರಂಭವಾಗಿವೆ. ವಿದ್ಯಾರ್ಥಿಗಳೂ ತರಗತಿಗಳಿಗೆ ಬರುತ್ತಿದ್ದಾರೆ. ಆದರೆ, ಈಗ ಸಾರಿಗೆ ಸಂಸ್ಥೆಯವರು ಬಸ್ ವೇಳಾಪಟ್ಟಿ ಮರು ಹೊಂದಿಸುವ ಗೊಂದಲದಲ್ಲಿದ್ದಾರೆ.

ತರಗತಿಗಳಲ್ಲಿ 15ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕೂರಲು ಅವಕಾಶ ಇಲ್ಲದ ಕಾರಣ ಪಾಳಿಗಳಲ್ಲಿ ತರಗತಿಗಳು ನಡೆಯುತ್ತಿವೆ. ಹಾಗಾಗಿ ವಿದ್ಯಾರ್ಥಿಗಳು ಬೇರೆ ಬೇರೆ ಸಮಯದಲ್ಲಿ ವಿದ್ಯಾಸಂಸ್ಥೆಗಳಿಗೆ ಬರುತ್ತಿದ್ದಾರೆ. ‘ವಿದ್ಯಾಗಮ’ದಲ್ಲಿ ಅಧ್ಯಯನ ಮಾಡುತ್ತಿರುವ 6ರಿಂದ 9ನೇ ತರಗತಿಯ ವಿದ್ಯಾರ್ಥಿಗಳು, ತರಗತಿಗೆ ಹಾಜರಾಗುತ್ತಿರುವ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿ.ಯು ಹಾಗೂ ಪದವಿ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಬಸ್‌ಗಳನ್ನೇ ಅವಲಂಬಿಸಿದ್ದಾರೆ.

ಉತ್ತರ ಕನ್ನಡದಲ್ಲಿ ದಿನಕ್ಕೆ ಒಂದು ಅಥವಾ ಎರಡು ಬಸ್‌ಗಳ ಸಂಚಾರ ಇರುವ ಹಳ್ಳಿಗಳೂ ಇವೆ. ಬೆಳಿಗ್ಗೆ ಶಾಲಾರಂಭದ ಸಮಯಕ್ಕೆ ಹಾಗೂ ಸಂಜೆ ಶಾಲೆ ಮುಕ್ತಾಯಗೊಳ್ಳುವ ಸಂದರ್ಭಕ್ಕೆ ಅನುಕೂಲವಾಗುವಂತೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಗ್ರಾಮೀಣ ಮಾರ್ಗದ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ, ಈಗ ಬದಲಾದ ಸಂದರ್ಭದಲ್ಲಿ ತರಗತಿಗಳು ಏಕಕಾಲಕ್ಕೆ ಆರಂಭವಾಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್‌ಗಳ ಸಂಚಾರದ ಸಮಯವನ್ನೂ ಹೊಂದಾಣಿಕೆ ಮಾಡಬೇಕಾದ ಅನಿವಾರ್ಯತೆ ಸಾರಿಗೆ ಸಂಸ್ಥೆಯದ್ದಾಗಿದೆ.

ವಿದ್ಯಾರ್ಥಿಗಳ ಸಮಯಕ್ಕೆ ಬಸ್ ಸಂಚಾರ ಆರಂಭಿಸಿದರೆ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಪ್ರಯಾಣಿಕರನ್ನೇ ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿ ಹೊಂದಿಸಿದರೆ ವಿದ್ಯಾರ್ಥಿಗಳಿಗೆ ಅನನುಕೂಲವಾಗುತ್ತದೆ. ಅಧಿಕಾರಿಗಳು ಇದನ್ನು ನಿರ್ವಹಿಸುವ ಮಾರ್ಗೋಪಾಯಗಳ ಚಿಂತನೆ ನಡೆಸುತ್ತಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ, ‘ಶೇ 90ರಷ್ಟು ಮಾರ್ಗಗಳಲ್ಲಿ ಸಂಸ್ಥೆಯ ಬಸ್‌ಗಳ ಸಂಚಾರ ಆರಂಭವಾಗಿದೆ. ಅಂದಾಜು 150 ಬಸ್‌ಗಳು ಸಂಚರಿಸುತ್ತಿವೆ. ಆದರೆ, ತರಗತಿಗಳ ಸಮಯದಲ್ಲಿ ವ್ಯತ್ಯಾಸವಾಗಿದೆ. ಹಾಗಾಗಿ ಬಸ್‌ಗಳ ವೇಳಾಪಟ್ಟಿಯನ್ನೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಿರ್ವಹಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಬಸ್‌ಗಳ ಸಂಚಾರ ಆರಂಭವಾಗಿರುವುದು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ಅವರಿಗೆ ಸಮಸ್ಯೆಗಳಿದ್ದರೆ ಪರಿಹರಿಸಲು ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದು ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಹರೀಶ ಗಾಂವ್ಕರ್ ಹೇಳಿದರು.

ಪಾಸ್‌ಗಳಿಗೆ ಬೇಡಿಕೆ: ಶಾಲೆ, ಕಾಲೇಜುಗಳು ಆರಂಭವಾಗಿರುವ ಕಾರಣ, ಪ್ರಸಕ್ತ ಸಾಲಿನ ರಿಯಾಯಿತಿ ದರದ ವಿದ್ಯಾರ್ಥಿ ಬಸ್ ಪಾಸ್‌ಗಳಿಗೂ ಬೇಡಿಕೆ ಬರಲು ಶುರುವಾಗಿದೆ. ಜಿಲ್ಲೆಯ ಎಲ್ಲ 12 ತಾಲ್ಲೂಕುಗಳಿಂದ ಮಂಗಳವಾರದ ವರೆಗೆ 3,002 ಅರ್ಜಿಗಳು ಸಲ್ಲಿಕೆಯಾಗಿವೆ. 700 ಪಾಸ್‌ಗಳನ್ನು ಈಗಾಗಲೇ ವಿತರಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿ ಅರ್ಜಿ ನಮೂನೆಗಳುಆನ್‌ಲೈನ್‌ನಲ್ಲಿ ಲಭಿಸುತ್ತವೆ. ಅವುಗಳನ್ನು ಡೌನ್‌ಲೋಡ್ ಮಾಡಿ ವಿದ್ಯಾರ್ಥಿಗಳು ಭರ್ತಿ ಮಾಡಿದ ಬಳಿಕ ಶಿಕ್ಷಕರೇ ಸಾರಿಗೆ ಸಂಸ್ಥೆಗೆ ತಲುಪಿಸುತ್ತಾರೆ. ಪಾಸ್‌ಗಳು ಸಿದ್ಧವಾದ ಬಳಿಕ ಪುನಃ ಶಾಲೆಗಳಲ್ಲೇ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT