ಬುಧವಾರ, ಸೆಪ್ಟೆಂಬರ್ 22, 2021
29 °C
ಪುಣೆಯಿಂದ ಕಾರವಾರಕ್ಕೆ ಆವಕ: ಪ್ರತಿ ಕೆ.ಜಿ.ಗೆ ₹ 150ರವರೆಗೆ ದರ

ಕಾರವಾರ: ಏರುಗತಿಯಲ್ಲೇ ಸಾಗುತ್ತಿರುವ ಈರುಳ್ಳಿ ದರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯಾದ್ಯಂತ ಈರುಳ್ಳಿ ದರವು ಈ ವಾರವೂ ಏರುಗತಿಯಲ್ಲೇ ಸಾಗುತ್ತಿದೆ. ಮೂರು ವಾರಗಳಿಂದ ಪ್ರತಿ ಕೆ.ಜಿ.ಗೆ ₹ 100ರ ಗಡಿ ದಾಟಿದ್ದ ದರವು ಈ ವಾರ ₹ 150ಕ್ಕೇರಿದೆ. 

ರಾಜ್ಯದಲ್ಲಿ ಬೆಳೆದ ಈರುಳ್ಳಿ ಮಾರುಕಟ್ಟೆಯ ಬೇಡಿಕೆಗೆ ಸಾಕಷ್ಟು ಪೂರೈಕೆಯಾಗುತ್ತಿಲ್ಲ. ಹೀಗಾಗಿ ನಗರಕ್ಕೆ ಪುಣೆಯಿಂದ ಹಳೆಯ ಸಂಗ್ರಹವನ್ನು ತರಿಸಿಕೊಳ್ಳಲಾಗುತ್ತಿದೆ. ನಗರದ ವಿವಿಧ ತರಕಾರಿ ಮಳಿಗೆಗಳಿಗೆ ಮಧ್ಯವರ್ತಿಗಳ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಪ್ರತಿ ಕೆ.ಜಿ ಈರುಳ್ಳಿ ದರವು ಕಾರವಾರದ ಭಾನುವಾರ ಸಂತೆಯಲ್ಲಿ ರಾಜ್ಯದ ಈರುಳ್ಳಿಗೆ ₹ 100ರಿಂದ ₹ 120ರಷ್ಟಿತ್ತು. ಆದರೆ, ಗುರುವಾರ ₹ 150ರಂತೆ ಮಾರಾಟವಾಯಿತು. 

ಬೆಳಗಾವಿ ಹಾಗೂ ವಿಜಯಪುರ ಭಾಗಗಳಿಂದಲೂ ಈರುಳ್ಳಿ ಆವಕವಾಗುತ್ತಿದೆ. ಆದರೂ ದರದಲ್ಲಿ ಇಳಿಕೆಯಾಗುತ್ತಿಲ್ಲ. ಇದು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಪ್ರವಾಹ ಹಾಗೂ ಅತಿವೃಷ್ಟಿಯ ಪರಿಣಾಮ ಚಿತ್ರದುರ್ಗ, ತುಮಕೂರು, ಹಾವೇರಿ, ಬಳ್ಳಾರಿ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದೆ. ಗಡ್ಡೆಗಳು ಕೊಳೆತು ರೈತರಿಗೂ ಭಾರಿ ನಷ್ಟವಾಗಿದೆ.

ಟೊಮೆಟೊ ದರದಲ್ಲಿ ಏರಿಳಿತ: ಎರಡು ವಾರಗಳ ಹಿಂದೆ ಪ್ರತಿ ಕೆ.ಜಿ.ಗೆ ₹ 50ರಂತೆ ಮಾರಾಟವಾಗುತ್ತಿದ್ದ ಟೊಮೆಟೊ ದರದಲ್ಲಿ ಏರಿಳಿತ ಮುಂದುವರಿದಿದೆ. ಕಳೆದ ವಾರ ಪ್ರತಿ ಕೆ.ಜಿ.ಗೆ ₹ 25ರಂತೆ ಬಿಕರಿಯಾಗುತ್ತಿತ್ತು. ಆದರೆ, ಈ ವಾರ ₹ 30ರಂತೆ ದರ ನಿಗದಿಯಾಗಿತ್ತು. ಉಳಿದಂತೆ, ಬಹುತೇಕ ಎಲ್ಲ ತರಕಾರಿಗಳ ದರವೂ ಹಿಂದಿನ ವಾರದಂತೆಯೇ ಮುಂದುವರಿದಿದೆ.

ಮೀನು ಮಾರುಕಟ್ಟೆ: ನಗರದ ಮೀನು ಮಾರುಕಟ್ಟೆಯಲ್ಲಿ ಕೂಡ ವಿವಿಧ ಜಾತಿಯ ಮೀನುಗಳ ದರ ಏರಿಕೆಯಾಗಿದೆ. ಈ ವರ್ಷ ಪ್ರಾಕೃತಿಕ ವಿಕೋಪದಿಂದ ಮೀನುಗಾರಿಕೆ ಅವಧಿಗೂ ಮೊದಲೇ ಸ್ಥಗಿತಗೊಂಡಿದೆ. ಜೊತೆಗೇ ಒಂದು ವಾರದಿಂದ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮೀನುಗಾರಿಕಾ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಸಾಂಪ್ರದಾಯಿಕ ದೋಣಿಗಳಲ್ಲೂ ಮೀನುಗಾರಿಕೆ ನಡೆಯುತ್ತಿಲ್ಲ. ಇದರ ಪರಿಣಾಮ ಮೀನಿನ ದರ ಏರಿಕೆಯಾಗಿದೆ.

ಹಿಂದಿನ ವಾರ ಒಂದು ಕೆ.ಜಿ.ಗೆ ₹ 800ರ ದರವನ್ನು ಹೊಂದಿದ್ದ ಪಾಂಫ್ರೆಟ್ ಮೀನು, ಸದ್ಯ ₹ 1,000ದಲ್ಲಿ ಗ್ರಾಹಕರ ಕೈಗೆ ಸಿಗುತ್ತಿದೆ. ಕೆ.ಜಿಗೆ ₹ 1,200ರ ದರ ಹೊಂದಿದ್ದ ಕಿಂಗ್‌ಫಿಶ್, ಈಗ ₹ 300ರಷ್ಟು ಏರಿಕೆ ಕಂಡು ₹ 1,500ರಲ್ಲಿ ಮಾರಾಟವಾಗುತ್ತಿದೆ.

––––

ಕಾರವಾರ ಮಾರುಕಟ್ಟೆ

ತರಕಾರಿ;ಕೆ.ಜಿ.ಗೆ ದರ (₹ ಗಳಲ್ಲಿ)

ಆಲೂಗಡ್ಡೆ;30

ಟೊಮೆಟೊ;30

ಸೌತೆಕಾಯಿ;40

ತೊಂಡೆಕಾಯಿ;40

ಬೀನ್ಸ್;50

ಬೆಂಡೆಕಾಯಿ;40

ಕ್ಯಾರೆಟ್;80

ಬೀಟ್‌ರೂಟ್;60

ಕ್ಯಾಪ್ಸಿಕಂ;60

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು