ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ ಜಿಲ್ಲೆಯೊಂದಿಗೆ ಆಸ್ಕರ್ ಫರ್ನಾಂಡಿಸ್ ನಂಟು

Last Updated 13 ಸೆಪ್ಟೆಂಬರ್ 2021, 15:35 IST
ಅಕ್ಷರ ಗಾತ್ರ

ಕಾರವಾರ: ಮಂಗಳೂರಿನಲ್ಲಿ ಸೋಮವಾರ ನಿಧನರಾದ ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಅವರಿಗೂ ಉತ್ತರ ಕನ್ನಡಕ್ಕೂ ನಂಟಿದೆ.

2013ರಲ್ಲಿ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಅವರು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಯ ಸಚಿವರಾಗಿದ್ದರು. ಆಗ ಜಿಲ್ಲೆಯ ಕರಾವಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 17ರಲ್ಲಿ (ಈಗಿನ 66) ಚತುಷ್ಪಥ ಕಾಮಗಾರಿ ಹಮ್ಮಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು. ಎಲ್ಲೆಲ್ಲಿ ಮೇಲ್ಸೇತುವೆ, ಅಂಡರ್ ಪಾಸ್ ನಿರ್ಮಿಸಬೇಕು, ಎಷ್ಟು ವಿಸ್ತೀರ್ಣದ ರಸ್ತೆ ಮಾಡಬೇಕು ಎಂಬ ಗೊಂದಲಗಳು ಶುರುವಾಗಿದ್ದವು. ಅದನ್ನು ಬಗೆಹರಿಸಲು ಕಾರವಾರದಲ್ಲಿ ಡಿ.17ರಂದು ಸಭೆ ಹಮ್ಮಿಕೊಂಡು ಭಟ್ಕಳದವರೆಗೆ ಸಾಗಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ್ದರು..

ಆ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಪ್ರತಿಕ್ರಿಯಿಸಿ, ‘ಪಕ್ಷದ ಹಲವಾರು ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಆಸ್ಕರ್ ಫರ್ನಾಂಡಿಸ್, ನನ್ನ ಜೊತೆ ಆತ್ಮೀಯ ಸಂಬಂಧವನ್ನು ಹೊಂದಿದ್ದರು. ಒಮ್ಮೆ ಹಳಿಯಾಳಕ್ಕೂ ಭೇಟಿ ನೀಡಿ, ನಮ್ಮ ಸಂಸ್ಥೆಯ ಚಟುವಟಿಕೆಗಳನ್ನು ಶ್ಲಾಘಿಸಿದ್ದರು’ ಎಂದು ನೆನಪಿಸಿಕೊಂಡಿದ್ದಾರೆ.

‘ಅವರು ತಳಮಟ್ಟದಿಂದ ಬೆಳೆದು ಬಂದ ನಾಯಕರಾಗಿದ್ದರು. ರಾತ್ರಿ ಒಂದು ಗಂಟೆಯವರೆಗೂ ದೆಹಲಿಯ ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದುದನ್ನು ಕಂಡಿದ್ದೇನೆ. ಅವರ ನಿಧನವು ವಿಶೇಷವಾಗಿ ರಾಜ್ಯದ ಕರಾವಳಿಗೆ ದೊಡ್ಡ ನಷ್ಟವಾಗಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ವಕ್ತಾರ ಶಂಭು ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT