ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್: ಹರಿದ ಬದುಕಿಗೆ ತೇಪೆ ಹಚ್ಚಲು ಪರದಾಟ, ಆದಾಯವಿಲ್ಲದೇ ದರ್ಜಿಗಳು ಕಂಗಾಲು

Last Updated 2 ಮೇ 2020, 19:45 IST
ಅಕ್ಷರ ಗಾತ್ರ

ಶಿರಸಿ: ‘ದಿನವಿಡೀ ಕುಳಿತು ಕೆಲಸ ಮಾಡುವ ಟೇಲರ್‌ಗಳಿಗೆ ಬೆನ್ನುನೋವು, ಸೊಂಟನೋವು, ಮೂಲವ್ಯಾಧಿಯಂತಹ ಕಾಯಿಲೆಗಳು ತಪ್ಪಿದ್ದಲ್ಲ. ಹೊಸ ಬಟ್ಟೆಯ ಎದುರು ಹಳೆ ನೋವನ್ನು ಮರೆಯುತ್ತ, ಹೊಟ್ಟೆಪಾಡಿಗಾಗಿ ಟೇಲರ್ ವೃತ್ತಿ ಮಾಡಿಕೊಂಡಿದ್ದವರು ನಾವು. ಕೊರೊನಾ ಈಗ ನಮ್ಮ ಬದುಕನ್ನೇ ಹರಿದಿದೆ’ ಎನ್ನುತ್ತ ಮಾತಿಗಾರಂಭಿಸಿದರು ಹಿರಿಯರಾದ ಗಣಪತಿ ಸರ್ವದೆ.

ಕೊರೊನಾ ವೈರಸ್ ನಿಯಂತ್ರಿಸಲು ಲಾಕ್‌ಡೌನ್ ಹೇರಿರುವ ಪರಿಣಾಮ ಹೊಲಿಗೆಯನ್ನೇ ನಂಬಿಕೊಂಡಿದ್ದ ಟೇಲರ್‌ಗಳ ಜೀವನ ಅತಂತ್ರವಾಗಿದೆ. ಬೆಳಗಿನಿಂದ ಸಂಜೆಯ ತನಕ ಮಷಿನ್ ಪ್ಯಾಡಲ್ ತುಳಿಯುತ್ತ, ಕೈಯಲ್ಲಿ ಬಟ್ಟೆ ಮುಂದೆ ಸರಿಸುತ್ತಲೇ ಎದುರು ಕುಳಿತವರ ಜೊತೆ ಮಾತನಾಡುತ್ತಿದ್ದ ಗಣಪತಿ ಸರ್ವದೆ ಅವರ ಹೊಲಿಗೆ ಯಂತ್ರ ಈಗ ಸ್ತಬ್ಧವಾಗಿದೆ.

‘ಮಾರ್ಚ್‌ನಿಂದ ಮೇವರೆಗೆ ಹೆಚ್ಚು ಶುಭ ಕಾರ್ಯಗಳು ನಡೆಯುತ್ತವೆ. ಟೇಲರ್‌ಗಳಿಗೆ ಬಿಡುವಿಲ್ಲದ ಕೆಲಸದ ಅವಧಿ ಇದು. ಈಗಲೇ ಕೆಲಸವಿಲ್ಲದ ಹಾಗಾಗಿದೆ. ಮೇ ಆರಂಭದಲ್ಲೇ ಶಾಲಾ ಮಕ್ಕಳ ಸಮವಸ್ತ್ರ ಸಿದ್ಧಪಡಿಸುವ ಆರ್ಡರ್‌ಗಳು ಬರುತ್ತಿದ್ದವು. ಈಗ ಬಟ್ಟೆ ಅಂಗಡಿಯನ್ನೇ ತೆರೆಯುತ್ತಿಲ್ಲ. ಇನ್ನು ಆರ್ಡರ್‌ಗಳು ಎಲ್ಲಿಂದ ಬರಬೇಕು? ದುಡಿದು ತಿನ್ನುವ ದರ್ಜಿಗಳಿಗೆ ಒಂದೂವರೆ ತಿಂಗಳಿನಿಂದ ಕೆಲಸವೇ ಇಲ್ಲದಂತಾಗಿದೆ’ ಎಂದು ಬೇಸರಿಸಿಕೊಂಡರು.

‘ಶಿರಸಿ, ಬನವಾಸಿ, ಬಿಸಲಕೊಪ್ಪ ಸೇರಿ ತಾಲ್ಲೂಕು ಟೇಲರ್ಸ್ ಅಸೋಸಿಯೇಷನ್‌ನಲ್ಲಿ 226 ಸದಸ್ಯರಿದ್ದಾರೆ. ಇವರಲ್ಲಿ ಶೇ 95ರಷ್ಟು ಜನರು ಬಿಪಿಎಲ್ ಕಾರ್ಡುದಾರರು. ಕಡುಬಡತನಲ್ಲಿ ಜೀವನ ನಡೆಸುವ ಟೇಲರ್‌ಗಳ ಉದ್ಯೋಗ ಮೇಲೆ ರೆಡಿಮೇಡ್ ಬಟ್ಟೆ ಉದ್ಯಮ ಕರಿನೆರಳು ಬೀರಿತ್ತು. ಬರುವ ಅಷ್ಟಿಷ್ಟು ಆದಾಯವನ್ನೂ ಕೊರೊನಾ ಕಸಿದುಕೊಂಡಿದೆ’ ಎನ್ನುತ್ತಾರೆ ಸಂಘದ ಸಹಕಾರ್ಯದರ್ಶಿ ಕಿಶೋರ ನೇತ್ರೇಕರ.

‘ಲಾಕ್‌ಡೌನ್‌ನಿಂದ ತೊಂದರೆಗೊಳಗಾದವರಿಗೆ ಸರ್ಕಾರ ನೀಡುವ ಯಾವ ಸೌಲಭ್ಯವೂ ನಮಗೆ ಸಿಕ್ಕಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳ ಗಮನವನ್ನೂ ಸೆಳೆದಿದ್ದೇವೆ. ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಿದರೆ, ನೀವು ಇಲಾಖೆಯಲ್ಲಿ ನೋಂದಣಿ ಮಾಡಿಸಿ, ಕಾರ್ಮಿಕ ಕಾರ್ಡ್‌ ಪಡೆದಿಲ್ಲ ಎನ್ನುತ್ತಾರೆ. ಈಗ ನೋಂದಣಿ ಮಾಡಿಸಲೂ ನಮ್ಮ ಬಳಿ ಹಣವಿಲ್ಲ. ಸರ್ಕಾರ ಇನ್ನಾದರೂ ನಮ್ಮ ಬಗ್ಗೆ ಗಮನಹರಿಸಬೇಕು’ ಎಂದು ಸಂಘದ ಅಧ್ಯಕ್ಷ ರಮೇಶ ದಿವಾಕರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT