ಬುಧವಾರ, ಜನವರಿ 26, 2022
25 °C
ಸಾರ್ವಜನಿಕರ ವಿಚಾರಣೆಗೆ ಸೂಚನೆ

ಒಂದೂ ಡೋಸ್ ಪಡೆಯದ 45,725 ಮಂದಿ: ಲಸಿಕೆ ಪಡೆಯದವರಿಗೆ ನಿರ್ಬಂಧಕ್ಕೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಜಿಲ್ಲೆಯಲ್ಲಿ 45,725 ಮಂದಿ ಕೋವಿಡ್ ಲಸಿಕೆಯ ಒಂದೂ ಡೋಸನ್ನು ಇನ್ನೂ ಪಡೆದುಕೊಂಡಿಲ್ಲ. ಅವರನ್ನು ಎಚ್ಚರಿಸುವ ಕ್ರಮದ ಭಾಗವಾಗಿ, ಸಹಕಾರ ಸಂಸ್ಥೆಗಳು, ಬ್ಯಾಂಕ್ ಮೊದಲಾದ ಸಾರ್ವಜನಿಕ ವ್ಯವಹಾರ ಸ್ಥಳಗಳಿಗೆ ಭೇಟಿ ನೀಡುವವರನ್ನು ಲಸಿಕೆ ಪಡೆದುಕೊಂಡಿರುವ ಬಗ್ಗೆ ವಿಚಾರಿಸಲು ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ನಗರ, ಪಟ್ಟಣ ಭಾಗದಲ್ಲಿ 20,298 ಮಂದಿ, ಗ್ರಾಮೀಣ ಭಾಗದಲ್ಲಿ 25,427 ಲಸಿಕೆ ಪ‍ಡೆದಿಲ್ಲ. ಮೊದಲ ಹಂತದಲ್ಲಿ ಈ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಅದಕ್ಕೂ ಸ್ಪಂದಿಸದಿದ್ದರೆ ಆಯಾ ಸಂಸ್ಥೆಗಳಿಗೆ ಅವರ ಪ್ರವೇಶವನ್ನು ನಿಷೇಧಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ’ ಎಂದೂ ಎಚ್ಚರಿಕೆ ನೀಡಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುವವರನ್ನು ಪ್ರತಿ 15 ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗುವುದು. ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವಿವಿಧ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗುವುದು. ಸೋಂಕಿನ ಪ್ರಕರಣಗಳು ವಿವಿಧ ಜಿಲ್ಲೆಗಳಲ್ಲಿ ಹೆಚ್ಚುತ್ತಿದ್ದು, ಉತ್ತರ ಕನ್ನಡದಲ್ಲಿ ಹರಡದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಎರಡು ಬಾರಿ ಸಮೀಕ್ಷೆ:

‘ಜಿಲ್ಲೆಯಲ್ಲಿ 10.78 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿಯಿದೆ. 9.97 ಲಕ್ಷ ಮಂದಿ (ಶೇ 93ರಷ್ಟು) ಮೊದಲ ಡೋಸ್ ಪಡೆದಿದ್ದಾರೆ. 6.66 ಲಕ್ಷ ಜನ (ಶೇ 67ರಷ್ಟು) ಎರಡನೇ ಡೋಸ್  ಹಾಕಿಸಿಕೊಂಡಿದ್ದಾರ’ ಎಂದು ಮುಲ್ಲೈ ಮುಗಿಲನ್ ತಿಳಿಸಿದರು.

ಕೋವಿಡ್ ಲಸಿಕೆ ಪಡೆದವರ ಕುರಿತು ಮತದಾರರ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ಸಮೀಕ್ಷೆ ಮಾಡಲಾಗಿದೆ. ಈ ರೀತಿ ಎರಡು ಬಾರಿ ಖಚಿತ ಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

‘ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆ ನೀಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಲಸಿಕೆ ಪಡೆಯದವರ ಪಟ್ಟಿಯನ್ನು ಆರೋಗ್ಯ ಉಪ ಕೇಂದ್ರವಾರು ಸಿದ್ಧಪಡಿಸಲಾಗಿದೆ. ಜಿಲ್ಲೆಯಲ್ಲಿರುವ 334 ಆರೋಗ್ಯ ಉಪ ಕೇಂದ್ರಗಳಿವೆ. ಅವುಗಳ ಪೈಕಿ 107 ಕೇಂದ್ರಗಳಲ್ಲಿ ಲಸಿಕೆಯ ಒಂದೂ ಡೋಸ್ ಪಡೆಯದ ತಲಾ 100ಕ್ಕಿಂತ ಹೆಚ್ಚು ಮಂದಿಯಿದ್ದಾರೆ. ಅಂತಹ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಮನೆ, ಮನೆಗೆ ಕಳುಹಿಸಿ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.

***

ಮನೆ, ಮನೆಗೆ ಹೋಗಿ ಲಸಿಕೆ ನೀಡುವುದಕ್ಕೆ ನ್ಯಾಯಾಲಯದ ನಿರ್ಬಂಧವಿಲ್ಲ. ಪೋರ್ಟಲ್ ಸಮಸ್ಯೆಯಿಂದ ಮೊಬೈಲ್‍ಗೆ ಸಂದೇಶ ಬರುವುದು ತಡವಾಗುತ್ತಿದೆ. ಅದನ್ನು ಸರಿಪಡಿಸಲಾಗುವುದು.

– ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ

***

ಲಸಿಕೆ ಪಡೆಯದವರು

ತಾಲ್ಲೂಕು;ನಗರ;ಗ್ರಾಮೀಣ

ಭಟ್ಕಳ;9,451;3,078

ಹಳಿಯಾಳ;2,453;2,303

ಶಿರಸಿ;2,329;3,228

ಕುಮಟಾ;1,918;3,910

ಯಲ್ಲಾಪುರ;1,117;2,227

ಕಾರವಾರ;1,397;895

ಅಂಕೋಲಾ;470;1,837

ಹೊನ್ನಾವರ;821;4,351

ಮುಂಡಗೋಡ;324;1,327

ಸಿದ್ದಾಪುರ;ಇಲ್ಲ;983

ಜೊಯಿಡಾ;ಇಲ್ಲ;1,288

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು