ಸೋಮವಾರ, ಸೆಪ್ಟೆಂಬರ್ 27, 2021
22 °C
ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ

ಕಾರವಾರದಲ್ಲಿ ಪೊಲೀಸ್ ನಾಕಾಬಂದಿ; ಅನಗತ್ಯ ಸುತ್ತಾಡಿದರೆ ಶಾಯಿಯ ಮುದ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಮನೆಗಳಲ್ಲೇ ಇರುವಂತೆ ಸರ್ಕಾರಗಳು ಮಾಡಿರುವ ಮನವಿಗೆ ಹಲವರು ಸ್ಪಂದಿಸುತ್ತಿಲ್ಲ. ನಗರ, ಪಟ್ಟಣಗಳ ರಸ್ತೆಗಳಲ್ಲಿ ಅನಗತ್ಯವಾಗಿ ಸುತ್ತಾಡುವವರ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. 

ತುರ್ತು ಅಗತ್ಯಗಳನ್ನು ಹೊರತು ಪಡಿಸಿ ಸುಮ್ಮನೆ ಮನೆಯಿಂದ ಹೊರಬಂದವರ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲಾಗುವುದು. ಸಮಾಜದ ಆರೋಗ್ಯಕ್ಕಾಗಿ ಜನರ ಮೇಲೆ ಒತ್ತಡ ಹೇರುವುದು ಇದರ ಉದ್ದೇಶವಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಈಗಿನ ಸ್ಥಿತಿಯಲ್ಲಿ ಜನರ ಆರೋಗ್ಯ ಕಾಪಾಡುವುದು ಎಲ್ಲರ ಹೊಣೆಯಾಗಿದೆ. ಆದ್ದರಿಂದ ನಿಯಮವನ್ನು ಮೊದಲ ಬಾರಿಗೆ ಉಲ್ಲಂಘಿಸಿದವರ ಅಂಗೈಗೆ ಅಳಿಸಲಾಗದ ಶಾಯಿಯಿಂದ ಮುದ್ರೆ ಒತ್ತಲಾಗುವುದು. ಎರಡನೇ ಬಾರಿ ನಿಯಮ ಉಲ್ಲಂಘಿಸಿದವರ ಹೆಸರನ್ನು ಅವರ ಮನೆಗಳ ಬಳಿ ಸಾರ್ವಜನಿಕವಾಗಿ ಧ್ವನಿವರ್ಧಕಗಳಲ್ಲಿ ಪ್ರಕಟಿಸಲಾಗುವುದು. ಜಿಲ್ಲಾಡಳಿತದೊಂದಿಗೆ ಮತ್ತು ಸಹಕರಿಸದೇ ಮೂರನೇ ಬಾರಿ ನಿಯಮ ಉಲ್ಲಂಘಿಸಿದರೆ ಅವರ ಭಾವಚಿತ್ರಗಳನ್ನು ಜಿಲ್ಲಾಡಳಿತದ ವೆಬ್‌ಸೈಟ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪೊಲೀಸ್ ನಾಕಾಬಂದಿ

ನಗರದಲ್ಲಿ ಬುಧವಾರದವರೆಗೂ ಸಾರ್ವಜನಿಕರ ಸಂಚಾರದ ಬಗ್ಗೆ ತೀರಾ ಗಂಭೀರವಾದ ನಿರ್ಬಂಧ ಹೇರಿರಲಿಲ್ಲ. ಆದರೆ, ಗುರುವಾರದಿಂದ ನಗರದ ಪ್ರಮುಖ ರಸ್ತೆಗಳು ಸೇರುವಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ. ರಸ್ತೆಗಳಲ್ಲಿ ಸಂಚರಿಸುವ ಎಲ್ಲರ ಮಾಹಿತಿ ಪಡೆದು ಅನಗತ್ಯವಾಗಿ ಸುತ್ತಾಡುತ್ತಿದ್ದಾರೆ ಎಂದು ಖಚಿತವಾದ ಕೂಡಲೇ ವಾಪಸ್ ಕಳುಹಿಸುತ್ತಿದ್ದಾರೆ. ಮಾತು ಕೇಳದವರನ್ನು ಲಾಠಿ ಹಿಡಿದು ಗದರಿಸಿ ಓಡಿಸಿದ ಸಂದರ್ಭಗಳೂ ಕಂಡುಬಂದವು. 

ಬಂದ್ ವಾತಾವರಣ

ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿದ ಕಾರಣ ಕಾರವಾರ ನಗರ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅತ್ಯಂತ ವಿರಳವಾಗಿತ್ತು. ವಿವಿಧ ಚಿಕಿತ್ಸೆಗಳಿಗಾಗಿ ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಔಷಧ ಮಳಿಗೆಗಳಿಗೆ ಬರುವವರಿಗೆ ಅವಕಾಶ ನೀಡಲಾಗಿತ್ತು. ನಗರದ ಎಲ್ಲ ಕಿರಾಣಿ, ದಿನಸಿ ಅಂಗಡಿ, ಹಣ್ಣು ಮಾರಾಟದ ಅಂಗಡಿಗಳನ್ನು ಮುಚ್ಚಲಾಗಿದೆ. 

ದಿನಸಿ ಮನೆಗೇ ಪೂರೈಕೆ

ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಜೀವನಾವಶ್ಯಕ ವಸ್ತುಗಳನ್ನು ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್‌ವಾರು ಸರಬರಾಜು ಮಾಡಲು ಜಿಲ್ಲಾ ನಗರಾಭಿವೃದ್ಧಿ ಕೋಶವು ಸ್ಥಳೀಯ ಸಂಸ್ಥೆಗಳಿಗೆ ಆದೇಶಿಸಿದೆ.

ನಗರ ಪ್ರದೇಶದಲ್ಲಿ ಔಷಧ ಮಳಿಗೆಗಳನ್ನು ಹೊರತುಪಡಿಸಿ ಮತ್ಯಾವುದೇ ಅಂಗಡಿಗಳನ್ನೂ ತೆರೆಯದಂತೆ, ಬೀದಿಬದಿ ವ್ಯಾಪಾರ ಮಾಡದಂತೆ ಕ್ರಮ ಕೈಗೊಳ್ಳಲು ಸೂಚಿಸಿದೆ.

ಇಡೀ ದೇಶವನ್ನು ಲಾಕ್ ಡೌನ್ ಮಾಡಿರುವ ಕಾರಣ ಸಾರ್ವಜನಿಕರು ರಸ್ತೆಗಳಲ್ಲಿ ಓಡಾಡಲು ಅವಕಾಶವಿಲ್ಲ. ಆದ್ದರಿಂದ ಜೀವನಾವಶ್ಯಕ ವಸ್ತುಗಳಾದ ತರಕಾರಿ, ಹಣ್ಣು, ದಿನಸಿ, ಹಾಲು, ಪ್ಯಾಕ್ಡ್ ನೀರು, ಮೊಟ್ಟೆ ಮುಂತಾದ ಆಹಾರ ಸಾಮಗ್ರಿಯನ್ನು ಮನೆಮನೆಗೆ ಪೂರೈಕೆ ಮಾಡಲಾಗುವುದು.

ಇದಕ್ಕೆ ಸ್ಥಳೀಯ ಸಂಸ್ಥೆಗಳ ವಾಹನಗಳು ಅಥವಾ ಖಾಸಗಿ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುವುದು. ಹಣ್ಣು ಮತ್ತು ತರಕಾರಿ ಪೂರೈಕೆಗೆ ತಳ್ಳುಗಾಡಿಗಳನ್ನೂ ಉಪಯೋಗಿಸಬಹುದು. ಆದರೆ, ಇವುಗಳಿಗೆ ತಗಲುವ ವೆಚ್ಚವನ್ನು ವ್ಯಾಪಾರಸ್ಥರೇ ಭರಿಸಬೇಕು ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಸೂಚಿಸಿದ್ದಾರೆ.

ಅಗತ್ಯ ವಸ್ತುಗಳನ್ನು ಪ್ರತಿ ದಿನ ಅಥವಾ ಎರಡು ದಿನಗಳಿಗೆ ಒಮ್ಮೆ ಪೂರೈಕೆ ಮಾಡಬೇಕು. ಈ ಕಾರ್ಯದಲ್ಲಿ ತೊಡಗಿರುವ ವಾಹನಗಳಿಗೆ ಧ್ವನಿವರ್ಧಕ, ತುರ್ತು ಆಹಾರ ಸಾಮಗ್ರಿ ಸಾಗಣೆ ವಾಹನ ಎಂಬ ಫಲಕ, ಒಂದು ಬದಿಯಲ್ಲಿ ಸಾಮಗ್ರಿಯ ದರ ಪಟ್ಟಿಯನ್ನು ಅಳವಡಿಸಬೇಕು. ವಾಹನಗಳ ಚಾಲಕರು ಮತ್ತು ಮಾಲೀಕರಿಗೆ ಸ್ಥಳೀಯ ಸಂಸ್ಥೆಗಳಿಂದ ಗುರುತಿನ ಚೀಟಿ ನೀಡಬೇಕು ಎಂದು ತಿಳಿಸಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ವ್ಯವಸ್ಥೆ

ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ 19 ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಸ್ಪತ್ರೆಯಲ್ಲಿ ಮೂರು ಹಂತದ ಚಿಕಿತ್ಸೆಗೆ ಅನುಗುಣವಾಗಿ ಕೆಲವು ಮಾರ್ಪಾಟು ಮಾಡಿಕೊಳ್ಳಲಾಗಿದೆ. 

ಆಸ್ಪತ್ರೆಯ ಬಲಭಾಗದಲ್ಲಿ ಸಾಮಾನ್ಯ ಶೀತ, ಜ್ವರ ಮುಂತಾದ ಹೊರರೋಗಿಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಶಂಕಿತರ ಚಿಕಿತ್ಸೆಗೂ ಪ್ರತ್ಯೇಕ ಕೌಂಟರ್ ತೆರೆದು ಪರಿಶೀಲನೆ ಮಾಡಲು ಬೇಕಾದ ಕ್ರಮ ಕೈಗೊಳ್ಳಲಾಗಿದೆ.

ಲಾಕ್‌ಡೌನ್ ಚಿತ್ರಣ

* ಐದನೇ ದಿನಕ್ಕೆ ಸ್ತಬ್ಧವಾದ ಕಾರವಾರ ನಗರ: ಜನಸಂಚಾರ ಅತ್ಯಂತ ವಿರಳ

* ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ನಾಕಾಬಂದಿ, ಅನಗತ್ಯ ತಿರುಗಾಟಕ್ಕೆ ತಡೆ

* ನಾಗರಿಕರ ಮನೆ ಬಾಗಿಲಿಗೇ ಜೀವನೋಪಾಯ ವಸ್ತುಗಳ ಪೂರೈಕೆ

* ಮೆಡಿಕಲ್‌, ಹಾಲಿನ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಜಾರಿ

* ಪೆಟ್ರೋಲ್ ಬಂಕ್‌ಗಳಲ್ಲಿ ಸರ್ಕಾರಿ ವಾಹನಗಳಿಗೆ ಮಾತ್ರ ಇಂಧನ

* ವೈರಸ್ ಹರಡದಂತೆ ಜಿಲ್ಲಾಡಳಿತದಿಂದ ಮತ್ತಷ್ಟು ಕಠಿಣ ಕ್ರಮಗಳ ಜಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು