ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ | ಸೇನಾ ಪೂರ್ವ ತರಬೇತಿ ಶಾಲೆ ಒಂದು ತಿಂಗಳಲ್ಲಿ ಆರಂಭ: ಸಚಿವ ಕೋಟ

Last Updated 25 ಜೂನ್ 2022, 14:12 IST
ಅಕ್ಷರ ಗಾತ್ರ

ಕಾರವಾರ: ‘ನಗರದಲ್ಲಿ ಹೆಂಜಾ ನಾಯ್ಕ ಹೆಸರಿನಲ್ಲಿ ಸೇನಾ ಪೂರ್ವ ತರಬೇತಿ ಶಾಲೆ ಸ್ಥಾಪಿಸಲು ಹಣಕಾಸು ಬಿಡುಗಡೆ ಮಾಡಲಾಗಿದೆ. ಇನ್ನೊಂದು ತಿಂಗಳಲ್ಲಿ ಮುಖ್ಯಮಂತ್ರಿಯಿಂದ ಉದ್ಘಾಟನೆ ಮಾಡಿಸಲಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸೇನಾ ಪೂರ್ವ ತರಬೇತಿ ಶಾಲೆಯ ಸ್ವರೂಪಗಳನ್ನು ನಿರ್ಧರಿಸಲಾಗಿದೆ. ಸ್ಥಳದ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

‘ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರು, ಮನೆ ಮಠ ಕಳೆದುಕೊಂಡವರ ಬಗ್ಗೆ ಇಂದಿನ ಮಕ್ಕಳಿಗೆ ತಿಳಿಸುವ ಅಗತ್ಯವಿದೆ. 75 ವರ್ಷಗಳ ಹಿಂದೆ ನಡೆದ ಘಟನೆಗಳನ್ನು ಸ್ಮರಿಸಬೇಕು. ಈ ಕಾರ್ಯಕ್ರಮವು ಅಂಥ ಸಂದರ್ಭಗಳನ್ನು ಸ್ಮರಿಸಲು ಒಂದು ಅವಕಾಶವಾಗಿದೆ’ ಎಂದರು.

‘‌ಭಾರತ ಬದಲಾಗಿದೆ. ಇದರ ಬಗ್ಗೆ ಯಾರಿಗೂ ಆತಂಕದ ಅವಶ್ಯಕತೆಯಿಲ್ಲ. ಸಮರ್ಥ, ಸ್ವಾಭಿಮಾನಿ, ಶಕ್ತಿಶಾಲಿ ಭಾರತ ನಿರ್ಮಾಣವು ಸಂವಿಧಾನದ ಆಶಯವಾಗಿದೆ. ಇಡೀ ವಿಶ್ವದ ಗಮನ ಈಗ ನಮ್ಮ ದೇಶದ ಮೇಲಿದೆ’ ಎಂದು ಹೇಳಿದರು.

‘ದೇಶಕ್ಕೆ ಸಂಕಷ್ಟದ ಸಂದರ್ಭದಲ್ಲಿ ಪ್ರತಿ ಮನೆಯಿಂದ ಯೋಧನೊಬ್ಬ ಬರಬೇಕು ಎಂಬ ಇದೇ ಉದ್ದೇಶದಿಂದ ಅಗ್ನಿಪಥ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಆದರೆ, ಅದನ್ನು ವಿರೋಧಿಸಿ, ಬಡವರು ಸಂಚರಿಸುವ ರೈಲಿಗೆ ಬೆಂಕಿ ಹಚ್ಚಿದವರಿಗೆ ಸಿಕ್ಕಿದ ಲಾಭವೇನು’ ಎಂದು ಪ್ರಶ್ನಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಅನೇಕರು ತ್ಯಾಗ ಬಲಿದಾನ ಮಾಡಿ ದೊರಕಿದ ಈ ಸ್ವತಂತ್ರ ದೇಶಕ್ಕೆ ನಾವೇನು ಕೊಡುಗೆ ನೀಡಬೇಕು ಎಂಬುದನ್ನು ಅರಿತುಕೊಳ್ಳಬೇಕು. ದೇಶಕ್ಕಾಗಿ ನಮ್ಮ ಯಾವುದೇ ಸೇವೆಗಳು ಕಾಲ್ಪನಿಕವಾಗಿ ಇರಬಾರದು’ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರ ಮನೆತನದವರಾದಬೊಮ್ಮಯ್ಯ ವೆಂಕಣ್ಣ ನಾಯಕ ಹಾಗೂ ಪ್ರಕಾಶ ನಾರಾಯಣ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಹರ್ಷನಾರಾಯಣ ಬೆಂಗಳೂರು ಉಪನ್ಯಾಸ ನೀಡಿದರು. ದಿನಕರ ಕಲಾ ನಿಕೇತನದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ ಸ್ವಾಗತಿಸಿದರು.

ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ಪಿ.ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ, ಮಾಜಿ ಶಾಸಕ ಗಂಗಾಧರ ಭಟ್ ವೇದಿಕೆಯಲ್ಲಿದ್ದರು.

ಕಡಲ್ಕೊರೆತ ತಡೆ: ಸಭೆ 27ಕ್ಕೆ
‘ರಾಜ್ಯದ ಕರಾವಳಿಯಲ್ಲಿ ಕಡಲ್ಕೊರೆತ ತಡೆಯಲು ಹೊಸ ತಂತ್ರಜ್ಞಾನದ ಕಾಮಗಾರಿ ನಡೆಸಲು ಚಿಂತಿಸಲಾಗಿದೆ. ಈ ಬಗ್ಗೆ ಚರ್ಚಿಸಲು ಬಂದರು ಖಾತೆ ಸಚಿವ ಎಸ್.ಅಂಗಾರ ಅವರಿಗೆಜೂನ್ 27ಕ್ಕೆ ಕಾರವಾರಕ್ಕೆ ಭೇಟಿ ನೀಡುವಂತೆ ಕೇಳಿದ್ದೇನೆ’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಡಲ್ಕೊರೆತ ತಡೆಯಲು ಪ್ರತಿ ವರ್ಷ ಕೋಟ್ಯಂತರ ರೂಪಾಯಿಯನ್ನು ಸರ್ಕಾರ ವ್ಯಯಿಸುತ್ತಿದೆ. ನಬಾರ್ಡ್ ಮೂಲಕ ಉಳ್ಳಾಲದಿಂದ ಕಾರವಾರದ ತನಕ ₹ 900 ಕೋಟಿ ಮೊತ್ತದ ಕಾಮಗಾರಿ ಆರಂಭಿಸಲು ಉದ್ದೇಶಿಸಲಾಗಿತ್ತು. ಆದರೆ, ಅದು ಉಳ್ಳಾಲದಲ್ಲೇ ಸಮಸ್ಯೆಗೀಡಾಯಿತು. ಇದರ ಬಗ್ಗೆ ಜನರಿಂದಲೂ ಟೀಕೆ ವ್ಯಕ್ತವಾಗುತ್ತಿದೆ. ಹಾಗಾಗಿ ಹೊಸ ವಿನ್ಯಾಸದಲ್ಲಿ, ಶಾಶ್ವತ ಪರಿಹಾರದ ಕಾಮಗಾರಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದರು.

***

ಸಮುದ್ರದಲ್ಲಿ ಈಜಲು ಹೋಗಿ ಹಲವು ಪ್ರವಾಸಿಗರು ಸಾವಿಗೀಡಾಗುತ್ತಿದ್ದಾರೆ. ಇದನ್ನು ತಡೆಯಲು ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
- ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT