ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರ: ಮಳೆಗಾಲ ಪೂರ್ವದ ಕೆಲಸಕ್ಕೆ ವೇಗ

ಕಟ್ಟಡಗಳ ದುರಸ್ತಿ, ತೋಟಕ್ಕೆ ಗೊಬ್ಬರ
Last Updated 12 ಮೇ 2021, 19:30 IST
ಅಕ್ಷರ ಗಾತ್ರ

ಹೊನ್ನಾವರ: ಕೋವಿಡ್ ಎರಡನೇ ಅಲೆ ಸೃಷ್ಟಿಸಿರುವ ಸಂಕಷ್ಟದ ಸರಮಾಲೆಯ ನಡುವೆಯೇ ಮಳೆಗಾಲ ಕೂಡ ಸಮೀಪಿಸುತ್ತಿದೆ. ಇದರಿಂದ ಜನರು ಆತಂಕದಲ್ಲೇ ಮುಂಗಾರು ಪೂರ್ವ ತಯಾರಿಯಲ್ಲಿ ತೊಡಗಿದ್ದಾರೆ.

ಮನೆ, ಅಂಗಡಿ, ದನದ ಕೊಟ್ಟಿಗೆ ಹೀಗೆ ವಿವಿಧ ರೀತಿಯ ಕಟ್ಟಡಗಳನ್ನು ರಿಪೇರಿ ಮಾಡುವ ಕೆಲಸ ಹಲವರದ್ದಾಗಿದೆ. ಹೊಸ ಮನೆ ಹಾಗೂ ಉಳಿದ ಕಟ್ಟಡಗಳನ್ನು ಪೂರ್ಣಗೊಳಿಸಲು ಕೆಲವರು ಹೆಣಗಾಡುತ್ತಿದ್ದಾರೆ. ಕೊಬ್ಬರಿ ತಯಾರಿಸುವುದು, ಹೊಲ-ಗದ್ದೆಗಳಿಗೆ ತರಗೆಲೆಗಳ ಗೊಬ್ಬರ ಹಾಕುವುದು, ಅಡಿಕೆ ಮಿಳ್ಳೆ ಉದುರದಂತೆ ಮದ್ದು ಸಿಂಪಡಣೆ ಮೊದಲಾದ ಕೆಲಸಗಳನ್ನು ತುರ್ತಾಗಿ ಪೂರ್ಣಗೊಳಿಸುವ ಧಾವಂತದಲ್ಲಿದ್ದಾರೆ.

ಲಾಕ್‌ಡೌನ್ ಕಾರಣದಿಂದ ವಾಹನಗಳ ಸಂಚಾರಕ್ಕೆ ನಿಯಂತ್ರಣ ಹೇರಲಾಗಿದೆ. ಇದರಿಂದ ಕೆಲವೆಡೆ ಕೂಲಿಕಾರರು ಕೆಲಸ ಕಳೆದುಕೊಂಡಿದ್ದರೆ, ಇನ್ನು ಕೆಲವೆಡೆ ಕೂಲಿಕಾರರ ಕೃತಕ ಅಭಾವ ಸೃಷ್ಟಿಯಾಗಿದೆ.

ಬೆಂಗಳೂರು, ಗೋವಾ ಮತ್ತಿತರ ಸ್ಥಳಗಳಲ್ಲಿ ಕೆಲಸದಲ್ಲಿದ್ದ ಅನೇಕರು ಮನೆಗೆ ವಾಪಸಾಗಿದ್ದಾರೆ. ಮದುವೆ ಮತ್ತಿತರ ಸಮಾರಂಭಗಳಿಗೆ ಆಮಂತ್ರಣವಿದ್ದರೂ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೆಲವು ಮನೆಗಳಲ್ಲಿ ಅಣ್ಣ– ತಮ್ಮಂದಿರು ಹಾಗೂ ಇತರ ಸದಸ್ಯರು ಸೇರಿಕೊಂಡು ಮನೆ, ತೋಟದ ಕೆಲಸ ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ.

‘ಮಳೆಗಾಲದ ಪೂರ್ವದಲ್ಲಿ ಹಿಂದೆಲ್ಲ ನಮಗೆ ಪುರುಸೊತ್ತೇ ಇರುತ್ತಿರಲಿಲ್ಲ. ಈ ಬಾರಿ ಕೆಲಸದ ಒತ್ತಡ ಅಷ್ಟೊಂದಿಲ್ಲ. ಕೂಲಿ ಹಣ ಇಂತಿಷ್ಟೇ ಬೇಕು ಎಂದು ಪಟ್ಟುಹಿಡಿಯುವಂತಿಲ್ಲ. ಕೋವಿಡ್ ಭಯದ ನಡುವೆ ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಹೆರಾವಲಿ ಗ್ರಾಮದ ದನದ ಕೊಟ್ಟಿಗೆಯೊಂದಕ್ಕೆ ಸೋಗೆ ಹೊದಿಕೆ ಮಾಡುತ್ತಿದ್ದ ಸುಬ್ರಹ್ಮಣ್ಯ ನಾಯ್ಕ ಹೇಳಿದರು.

ಮಹಿಳೆಯರು ಅಡುಗೆ ಕೆಲಸದ ಜೊತೆಗೆ ಹಪ್ಪಳ– ಸಂಡಿಗೆ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಶಾಲಾ– ಕಾಲೇಜುಗಳು ಮುಚ್ಚಿರುವುದರಿಂದ ಮನೆಯಲ್ಲೇ ಇರುವ ಮಕ್ಕಳು ಇವರ ಸಹಾಯಕ್ಕೆ ನಿಂತಿರುವುದನ್ನು ಕೆಲವು ಮನೆಗಳಲ್ಲಿ ಕಾಣಬಹುದಾಗಿದೆ.

ಹಲಸು, ಮಾವು ಮೊದಲಾದ ಹಣ್ಣಿನ ಬೆಳೆಗಳು ಈ ಬಾರಿ ಬೆಳೆಯಲು ತಡವಾಗಿದೆ. ಈಗಷ್ಟೇ ಈ ಹಣ್ಣುಗಳು ಕೊಯ್ಲಿಗೆ ಸಿಗುತ್ತಿವೆ. ಆಗಾಗ ಮೋಡ ಕವಿಯುತ್ತಿರುವುದರಿಂದ ಮಳೆಗಾಲಕ್ಕಾಗಿ ಈ ಹಣ್ಣುಗಳ ಉತ್ಪನ್ನಗಳನ್ನು ತಯಾರಿಸುವ ಕೆಲಸಕ್ಕೆ ವೇಗ ಸಿಕ್ಕಿದೆ. ಹಳ್ಳಿಗಳಲ್ಲಿ ಅಕ್ಕಪಕ್ಕದ ಮನೆಯವರು ಹಾಗೂ ನೆಂಟರಿಷ್ಟರ ಸಹಕಾರದೊಂದಿಗೆ ನಡೆಯುತ್ತಿದ್ದ ಇಂಥ ಹಲವು ಮುಂಗಾರು ಪೂರ್ವ ಹಂಗಾಮಿನ ಕೆಲಸಗಳಿಗೆ ಕೋವಿಡ್ ಪೆಟ್ಟು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT