ಶನಿವಾರ, ಜುಲೈ 31, 2021
22 °C
ಕಡಿಮೆ ಬಂಡವಾಳದ ಕಾರಣ ಯುವಕರನ್ನು ಹೆಚ್ಚು ಆಕರ್ಷಿಸುತ್ತಿರುವ ತರಕಾರಿ ವ್ಯಾಪಾರ

ಮುಂಡಗೋಡ | ಲಾಕ್‌ಡೌನ್ ಬಳಿಕ ಬದಲಾದ ಉದ್ಯೋಗ

ಶಾಂತೇಶ ಬೆನಕನಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ಲಾಕ್‍ಡೌನ್ ನಂತರ ಅನೇಕರ ಉದ್ಯೋಗಗಳು ಬದಲಾಗಿವೆ. ದೂರದ ಬೆಂಗಳೂರು, ಗೋವಾ, ಮುಂಬೈಯಲ್ಲಿ ದುಡಿಯುತ್ತಿದ್ದ ಕೆಲವರು, ಮರಳಿ ಅವರ ಕೆಲಸಕ್ಕೆ ಹೋಗಲಾಗದೇ ಸ್ವಂತ ಊರಲ್ಲೇ ಪರ್ಯಾಯ ಉದ್ಯೋಗ ಕಂಡುಕೊಂಡಿದ್ದಾರೆ. ತರಕಾರಿ ವ್ಯಾಪಾರ ಹಲವರನ್ನು ಸೆಳೆಯುತ್ತಿದೆ.

ಜೀಪು, ಕಾರು, ಟಾಟಾ ಏಸ್, ದ್ವಿಚಕ್ರ ವಾಹನಗಳೇ ಸದ್ಯದ ಮಟ್ಟಿಗೆ ತರಕಾರಿ ಮಾರುವ ಸಂಚಾರಿ ಅಂಗಡಿಗಳಾಗಿವೆ. ನಾಲ್ಕು ಗಾಲಿಯ ತಳ್ಳುವ ಗಾಡಿಗಳೂ ಇವುಗಳ ಜೊತೆ ಪೈಪೋಟಿ ನಡೆಸುತ್ತಿವೆ. ಪಟ್ಟಣದ ಪ್ರಮುಖ ರಸ್ತೆಗಳ ಪಕ್ಕದಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು ತರಕಾರಿ ಮಾರುವವರ ಸಂಖ್ಯೆಯೂ ಈಚಿನ ದಿನಗಳಲ್ಲಿ ಹೆಚ್ಚಿದೆ.

‘ಲಾಕ್‍ಡೌನ್ ತೆರವುಗೊಂಡ ನಂತರ ಕಟ್ಟಡ ನಿರ್ಮಾಣ ಸಾಮಗ್ರಿ ಸಾಗಿಸುವ ಬಾಡಿಗೆ ಕೆಲವು ದಿನಗಳವರೆಗೆ ಇತ್ತು. ಕ್ರಮೇಣ ಅದೂ ಕಡಿಮೆಯಾಯಿತು. ದಿನ ಕಳೆದಂತೆ ಒಂದು ರೂಪಾಯಿಯನ್ನೂ ಗಳಿಸದೇ ಮನೆಗೆ ಹೋದಂಥ ದಿನಗಳೇ ಹೆಚ್ಚಾಗತೊಡಗಿದವು. ಇದರಿಂದ ಪರ್ಯಾಯವಾಗಿ ತರಕಾರಿ ಮಾರಲು ಯೋಚಿಸಿದೆ. ವಾರದಲ್ಲಿ ಮೂರು ದಿನ ಹಾವೇರಿ ಮಾರುಕಟ್ಟೆಯಿಂದ ತರಕಾರಿ ಖರೀದಿಸಿ, ಪಟ್ಟಣದಲ್ಲಿ ಮಾರುತ್ತಿರುವೆ. ಈ ವಹಿವಾಟಿಗೆ ಕಡಿಮೆ ಬಂಡವಾಳ ಸಾಕು. ಹೆಚ್ಚಿನ ಬೇಡಿಕೆಯೂ ಇದೆ’ ಎನ್ನುತ್ತಾರೆ ಟಾಟಾ ಏಸ್ ಮಾಲೀಕ ಜಗದೀಶ್.

‘ಟಿಬೆಟನ್ ಕ್ಯಾಂಪ್‍ನಲ್ಲಿ ಏಳೆಂಟು ವರ್ಷಗಳಿಂದ ವಾಹನವನ್ನು ಬಾಡಿಗೆಗೆ ಓಡಿಸುತ್ತಿದ್ದೆ. ಕ್ಯಾಂಪ್‍ನಲ್ಲಿ ಲಾಕ್‍ಡೌನ್ ಇನ್ನೂ ಮುಂದುವರಿದಿದೆ. ಹಾಗಾಗಿ ಮೂರು ತಿಂಗಳಿಂದ ಬಾಡಿಗೆಯೇ ಇಲ್ಲದೇ ಆರ್ಥಿಕವಾಗಿ ತೊಂದರೆ ಅನುಭವಿಸಿದ್ದೆ. ಕೊನೆಗೆ ಅದೇ ವಾಹನದಲ್ಲಿ ತರಕಾರಿ ಮಾರುತ್ತ ಜೀವನ ಸಾಗಿಸುತ್ತಿದ್ದೇನೆ’ ಎಂದು ಪಿಕ್‍ಅಪ್ ಗಾಡಿ ಮಾಲೀಕ ರಜಾಕ್ ಹೇಳಿದರು.

‘ಲಾಕ್‍ಡೌನ್ ನಂತರ ಊರಿಗೆ ಮರಳಿರುವ ಕೆಲವು ಯುವಕರು ಉದ್ಯೋಗ ಖಾತ್ರಿ ಕೆಲಸದಲ್ಲಿಯೂ ದುಡಿದಿದ್ದಾರೆ. ಕೃಷಿ ಕೆಲಸಕ್ಕೂ ಹೋಗುತ್ತಿದ್ದಾರೆ. ಕೆಲವರು ತರಕಾರಿ ಮಾರುತ್ತ ಆದಾಯ ಗಳಿಸುತ್ತಿದ್ದಾರೆ’ ಎಂದು ರೈತ ಪರಶುರಾಮ ರಾಣಿಗೇರ ಹೇಳಿದರು.

‘ವ್ಯಾಪಾರಿಗಳ ಸಂಖ್ಯೆ ಹೆಚ್ಚಳ’:‌ ‘ಪಟ್ಟಣದ ವ್ಯಾಪ್ತಿಯಲ್ಲಿ ಸದ್ಯ 40ರಿಂದ 50ರಷ್ಟು ತರಕಾರಿ ವ್ಯಾ‍ಪಾರಿಗಳಿದ್ದಾರೆ. ಲಾಕ್‌ಡೌನ್‌ಗಿಂತ ಮುಂಚೆ ಶಿವಾಜಿ ವೃತ್ತದಲ್ಲಿ ಒಂದೆರೆಡು ಅಂಗಡಿ ಬಿಟ್ಟರೆ, ತರಕಾರಿ ಮಾರುವರ ಸಂಖ್ಯೆ ಕಡಿಮೆ ಇತ್ತು. ಬೇರೆ ವಸ್ತು ಮಾರುವ ಅಂಗಡಿಗಳಲ್ಲಿಯೂ ಒಂದು ಬದಿಯಲ್ಲಿ ತರಕಾರಿ ಮಾರಾಟ ಮಾಡುವುದನ್ನು ಸದ್ಯ ಕಾಣಬಹುದಾಗಿದೆ’ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸಂಗನಬಸಯ್ಯ ಅಭಿಪ್ರಾಯಪಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು