ಸೋಮವಾರ, ಆಗಸ್ಟ್ 19, 2019
28 °C
ಮಳೆಯ ಅಬ್ಬರದ ನಲುಗಿದ ನಾಗರಿಕರು

ಶಿರಸಿ | ಮೇಘನ ನರ್ತನ: ಜನರ ಆಕ್ರಂದನ

Published:
Updated:
Prajavani

ಶಿರಸಿ: ತಾಲ್ಲೂಕಿನಲ್ಲಿ ಮಳೆಯ ಅಬ್ಬರ ಕೊಂಚ ತಗ್ಗಿದ್ದರೂ, ಗಾಳಿಯ ಆರ್ಭಟ ಹೆಚ್ಚಾಗಿದೆ. ಗುರುವಾರ ದಿನವಿಡೀ ದಟ್ಟ ಮೋಡ ಕವಿದ ವಾತಾವರಣವಿದ್ದರೂ, ನಡುವೆ ಕೊಂಚ ಬಿಡುವು ನೀಡಿ ಮಳೆ ಸುರಿಯಿತು.

ಗಾಳಿ ಜೋರಾಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಮರಗಳು ಮುರಿದು ಬೀಳುತ್ತಿವೆ. ಗ್ರಾಮೀಣ ಜನರು ವಿದ್ಯುತ್, ಇಂಟರ್‌ನೆಟ್, ಮೊಬೈಲ್ ಸಿಗ್ನಲ್ ಇಲ್ಲದೇ ತೊಂದರೆಗೊಳಗಾಗಿದ್ದಾರೆ. ಹಳ್ಳ–ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನಿರಂತರ ಮಳೆಯಿಂದ ಮಣ್ಣಿನ ಗೋಡೆಯ ಮನೆಗಳು ತೇವ ಹೀರಿಕೊಂಡು ದುರ್ಬಲವಾಗಿ ಕುಸಿದು ಬೀಳುತ್ತಿವೆ. ತಾಲ್ಲೂಕಿನಲ್ಲಿ ಎರಡು ದಿನಗಳಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಬದನಗೋಡಿನಲ್ಲಿ ನಾಗರಾಜ ಎಂಬುವವರ ಮನೆ ಸಂಪೂರ್ಣ ಕುಸಿದು ಬಿದ್ದು ₹ 2.5 ಲಕ್ಷದಷ್ಟು ಹಾನಿಯಾಗಿದೆ. ಈವರೆಗೆ 57 ಮನೆಗಳು ಬಿದ್ದಿದ್ದು, 47 ಮನೆಗಳಿಗೆ ₹ 4.02 ಲಕ್ಷ ಪರಿಹಾರ ವಿತರಿಸಲಾಗಿದೆ. ಕೃಷಿ ಹಾಗೂ ಕಟ್ಟಡ ಸೇರಿ ತಾಲ್ಲೂಕಿನಲ್ಲಿ ₹ 31.28 ಲಕ್ಷ ನಷ್ಟವಾಗಿದೆ ಎಂಬುದು ಕಂದಾಯ ಇಲಾಖೆ ನೀಡುವ ಮಾಹಿತಿ.

ಬನವಾಸಿ ಹೋಬಳಿಯ ಅಂಡಗಿ ಹಾಗೂ ಬದನಗೋಡ ಪಂಚಾಯ್ತಿಗಳಲ್ಲಿ ಶುಂಠಿ ಬೆಳೆಗೆ ತೀವ್ರ ಹಾನಿಯಾಗಿದೆ. ಹೆಬ್ಬತ್ತಿ ಗ್ರಾಮದ ಹರಿಜನ ಕಾಲೊನಿಯ ಮನೆಗಳಿಗೆ ನೀರು ನುಗ್ಗಿದೆ.

ವರದಾ ನದಿಯ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗಿದೆ. 2000ಕ್ಕೂ ಅಧಿಕ ಎಕರೆ ಕೃಷಿ ಭೂಮಿ ನೀರಿನಲ್ಲಿ ಮುಳುಗಿದೆ. ಮುಳುಗಿರುವ ಅಜ್ಜರಣಿ ಸೇತುವೆಯ ಮೇಲೆ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಹುಳಗೋಳ, ಮತ್ತಿಗಾರ, ಕೊಪ್ಪಲತೋಟ, ಶಿರಸಿಮಕ್ಕಿ, ಸವಣೂರು ಮೊದಲಾದ ಕಡೆಗಳಲ್ಲಿ ಮನೆಗಳು, ಸಾರ್ವಜನಿಕ ಆಸ್ತಿಗೆ ಧಕ್ಕೆಯಾಗಿದೆ.

ನಗರದಲ್ಲಿ ಹುಬ್ಬಳ್ಳಿ ರಸ್ತೆಯ ಗಾಳಿಮಾಸ್ತಿ ಗುಡಿಯ ಸಮೀಪ, ಬಸವೇಶ್ವರ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶದ ಬಡಾವಣೆಗಳು ಜಲಾವೃತಗೊಂಡಿವೆ. ತಾಲ್ಲೂಕು ಪಂಚಾಯ್ತಿ ಹಿಂಭಾಗದಲ್ಲಿ ನೀರು ನಿಂತು ಸಿಬ್ಬಂದಿ ತೊಂದರೆ ಅನುಭವಿಸಿದರು. ಅಶ್ವಿನಿ ವೃತ್ತದಲ್ಲಿ ನಿಂತಿದ್ದ ಎರಡು ಅಡಿ ನೀರಿನಲ್ಲಿ ಸವಾರರು ವಾಹನ ಚಲಾಯಿಸಿದರು. ಹಗಲಿನಲ್ಲಿಯೂ ಲೈಟ್ ಹಾಕಿಕೊಂಡು ವಾಹನ ಚಲಾಯಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

 

Post Comments (+)