ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಾಖೆಯ ಸೌಲಭ್ಯ ಪಡೆಯಲು ಕಾರ್ಮಿಕರ ಪರದಾಟ: ಮಂಜೂರಾದರೂ ಜಮೆಯಾಗದ ಸಹಾಯಧನ

ಇಲಾಖೆಯ ಸೌಲಭ್ಯ ಪಡೆಯಲು ಕಾರ್ಮಿಕರ ಪರದಾಟ: ಮಧ್ಯವರ್ತಿಗಳ ಹಾವಳಿಯ ದೂರು
Last Updated 31 ಜನವರಿ 2022, 19:30 IST
ಅಕ್ಷರ ಗಾತ್ರ

ಭಟ್ಕಳ: ಕಾರ್ಮಿಕ ಇಲಾಖೆಯ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿದ್ದ ಕೆಲವು ಕಟ್ಟಡ ಕಾರ್ಮಿಕರಿಗೆ ಸಹಾಯಧನ ಮಂಜೂರಾಗಿ ಒಂದು ವರ್ಷವಾಗಿದೆ. ಆದರೆ, ಕಚೇರಿಗಳಿಗೆ ಅಲೆದಾಡಿದರೂ ಹಣ ಸಿಕ್ಕಿಲ್ಲ.

ಕಾರ್ಮಿಕ ಇಲಾಖೆಯಡಿ ನೋಂದಣಿಯಾದ ಕಾರ್ಮಿಕರು ಆರೋಗ್ಯ ಚಿಕಿತ್ಸೆ, ಮಕ್ಕಳಿಗೆ ಶಿಷ್ಯವೇತನ, ಮದುವೆಗೆ ಪ್ರೋತ್ಸಾಹ ಧನ, ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಬಹುದು. ಇಲಾಖೆಯು ಅರ್ಜಿಯನ್ನು ಸಲ್ಲಿಸಲು ಸೇವಾಸಿಂಧು ಪೋರ್ಟಲ್‌ನಲ್ಲಿ ಅವಕಾಶ ಕಲ್ಪಿಸಿದೆ.

ಪ್ರೋತ್ಸಾಹ ಧನಕ್ಕೆ ಸಲ್ಲಿಸಿದ ಅರ್ಜಿಗಳು ನಿಗದಿತ ಅವಧಿಯಲ್ಲಿ ಮಂಜೂರಾಗುತ್ತಿಲ್ಲ. ಮದುವೆಗೆ ಪ್ರೋತ್ಸಾಹ ಧನ, ವೈದ್ಯಕೀಯ ಚಿಕಿತ್ಸೆ ಸಹಾಯಧನಕ್ಕೆ ಅರ್ಜಿ ಸಲ್ಲಿಸಿ ತಿಂಗಳುಗಳು ಕಳೆದರೂ ವಿಲೇವಾರಿ ಆಗುತ್ತಿಲ್ಲ ಎಂಬುದು ಕಾರ್ಮಿಕರ ಅಳಲಾಗಿದೆ. ಸಹಾಯ ಧನ ಪಡೆಯಲು ಸಾಕಷ್ಟು ದಾಖಲೆಗಳನ್ನು ಹೊಂದಿಸಿಕೊಂಡು ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿಗಳನ್ನು ಚಿಕ್ಕಪುಟ್ಟ ಕಾರಣ ನೀಡಿ ತಿರಸ್ಕರಿಸಲಾಗುತ್ತಿದೆ ಎಂಬುದು ಕಾರ್ಮಿಕರ ಆರೋಪವಾಗಿದೆ. ಆಗ ಪುನಃ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದೂ ಬೇಸರ ವ್ಯಕ್ತಪಡಿಸುತ್ತಾರೆ.

ಮಧ್ಯವರ್ತಿಗಳ ಹಾವಳಿ:

‘ತಾಲ್ಲೂಕಿನಲ್ಲಿ ಹೊಸ ಕಾರ್ಮಿಕ ಚೀಟಿ ಮಾಡಿಸಿಕೊಡುವುದರಿಂದ ಹಿಡಿದು ಸಹಾಯಧನ ಸಿಗುವ ತನಕ ಎಲ್ಲ ಕಡೆ ಮಧ್ಯವರ್ತಿಗಳ ಪಾರುಪತ್ಯವಿದೆ’ ಎಂದು ಹೆಸರು ಹೇಳಲು ಬಯಸದ ಕಾರ್ಮಿಕರೊಬ್ಬರು ದೂರುತ್ತಾರೆ.

‘ಕೆಲವು ಅರ್ಜಿಗಳನ್ನು ಹಿಡಿದುಕೊಂಡು ಹಲವು ಬಾರಿ ಕಚೇರಿ ಅಲೆದಾಗಲೂ, ಸಿಬ್ಬಂದಿ ಮಾಡುತ್ತೇವೆ ಎಂದು ಹೇಳಿ ಕಳುಹಿಸುತ್ತಾರೆ. ಆದರೆ, ಅದೇ ಅರ್ಜಿಯನ್ನು ಮಧ್ಯವರ್ತಿಗಳ ಮೂಲಕ ನೀಡಿದರೆ ಒಂದೇ ದಿನದಲ್ಲಿ ಮಂಜೂರು ಮಾಡುತ್ತಾರೆ’ ಎಂದು ಆರೋಪಿಸುತ್ತಾರೆ.

‘ಏಪ್ರಿಲ್‌ನಿಂದ ಜಮೆಯಾಗಿಲ್ಲ’:

‘ಕಾರ್ಮಿಕ ಇಲಾಖೆಯ ಆರೋಗ್ಯ ಭಾಗ್ಯ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದೆ. 2021ರ ಏಪ್ರಿಲ್‌ನಲ್ಲಿ ನನ್ನ ಅರ್ಜಿಯನ್ನು ಅನುಮೋದಿಸಿದರು. ₹ 47,752 ಮೊತ್ತವನ್ನು ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಿರುವುದಾಗಿ ಆದೇಶ ಪತ್ರ ನೀಡಿದ್ದರು. ಆದರೆ, ಈವರೆಗೆ ನನ್ನ ಖಾತೆಗೆ ಹಣ ಜಮೆಯಾಗಿಲ್ಲ’ ಎಂದು ಕಾರ್ಮಿಕ ಹೊನ್ನಪ್ಪ ನಾರಾಯಣ ನಾಯ್ಕ ಅಳಲು ತೋಡಿಕೊಂಡಿದ್ದಾರೆ.

‘ಈ ಬಗ್ಗೆ ಹಲವು ಬಾರಿ ಕಚೇರಿಗೆ ಅಲೆದಾಡಿದರು ಸ್ಪಂದಿಸುತ್ತಿಲ್ಲ. ಇಲಾಖೆ ಮಂಜೂರಾತಿ ಪತ್ರ ನೀಡಿದ ಮೇಲೆ ಹಣವನ್ನು ಖಾತೆಗೆ ಯಾಕೆ ಜಮೆ ಮಾಡುವುದಿಲ್ಲ? ಶಿಷ್ಯವೇತನ ಮಂಜೂರಾತಿ ಪತ್ರವನ್ನು ಅನೇಕರಿಗೆ ನೀಡಿದ್ದಾರೆ. ಆದರೆ, ಇಲ್ಲೂ ಹಣ ಜಮೆಯಾಗಿಲ್ಲ’ ಎಂದು ದೂರಿದ್ದಾರೆ.

‘ನಿಗದಿತ ಅವಧಿಯಲ್ಲಿ ವಿಲೇವಾರಿ’:

ಕಾರ್ಮಿಕರ ಸಮಸ್ಯೆಯ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಅಕ್ಬರ್ ಮುಲ್ಲಾ, ‘ಈ ಹಿಂದಿ ಸಿಬ್ಬಂದಿ ಕೊರತೆಯಿಂದ ಅರ್ಜಿ ವಿಲೇವಾರಿ ವಿಳಂಬವಾಗುತ್ತಿದ್ದವು. ಆದರೆ, ಈಗ ಹಾಗಿಲ್ಲ. ನಿಗದಿತ ಸಮಯದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ವೈದ್ಯಕೀಯ ಚಿಕಿತ್ಸಾ ವೆಚ್ಚ ಮಂಜೂರಾತಿ ನಂತರ ಖಾತೆಗೆ ಹಣ ಜಮೆಯಾಗಲು ಸಮಯ ತೆಗೆದುಕೊಳ್ಳುತ್ತದೆ. ಉಳಿದ ಸಹಾಯಧನಗಳು ವಿಳಂಬವಾಗುವುದಿಲ್ಲ. ಅಂತಹ ದೂರುಗಳಿದ್ದರೆ ನನ್ನನ್ನು ಸಂಪರ್ಕಿಸಬಹುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT