ಬುಧವಾರ, ಸೆಪ್ಟೆಂಬರ್ 29, 2021
20 °C

ಭೂ ಕುಸಿತ; ತಿಂಗಳಲ್ಲಿ ಸರ್ಕಾರಕ್ಕೆ ವರದಿ: ವಿಜ್ಞಾನಿ ಕಮಲ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಈ ವರ್ಷ ಆಗಿರುವ ಭೂ ಕುಸಿತಗಳಿಗೆ ಕಾರಣಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಸುಮಾರು ಒಂದು ತಿಂಗಳಲ್ಲಿ ಸರ್ಕಾರಕ್ಕೆ ಪ್ರಾಥಮಿಕ ವರದಿಯನ್ನು ಸಲ್ಲಿಸಲಾಗುವುದು’ ಎಂದು ಭಾರತೀಯ ಭೂವಿಜ್ಞಾನ ಸರ್ವೇಕ್ಷಣೆ (ಜಿ.ಎಸ್.ಐ) ಸಂಸ್ಥೆಯ ವಿಜ್ಞಾನಿ ಕಮಲ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ಕೊಡಸಳ್ಳಿ ಜಲಾಶಯದ ಸಮೀಪದಲ್ಲಿ ಗುಡ್ಡ ಕುಸಿದ ಜಾಗಕ್ಕೆ ತಮ್ಮ ತಂಡದೊಂದಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಜಲಾಶಯದ ಎದುರು ಎಡಭಾಗದಲ್ಲಿ, ಬಲಭಾಗದಲ್ಲಿ ಕೂಡ ಕುಸಿದಿರುವ ಭೂಪ್ರದೇಶವನ್ನು ವೀಕ್ಷಿಸಿದರು.

‘ಜಿಲ್ಲೆಯ ವಿವಿಧೆಡೆಯಿಂದ ಸಂಗ್ರಹಿಸಿದ ಮಣ್ಣು ಹಾಗೂ ಕಲ್ಲಿನ ಮಾದರಿಗಳನ್ನು ಹೈದರಾಬಾದ್‌ ನಲ್ಲಿರುವ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಈ ಪ್ರದೇಶಗಳ ಉಪಗ್ರಹ ಚಿತ್ರಗಳು, ಅಂತರ್ಜಲದ ಸ್ಥಿತಿ, ಜುಲೈ ತಿಂಗಳ ಮಳೆಯ ಮಾಹಿತಿಗಳನ್ನು ವಿವರವಾಗಿ ಪರಿಶೀಲಿಸಲಾಗುತ್ತದೆ. ಅದನ್ನು ಆಧರಿಸಿ ವರದಿ ಸಿದ್ಧಪಡಿಸಲಾಗುತ್ತದೆ’ ಎಂದು ತಿಳಿಸಿದರು.

‘2018– 19ನಲ್ಲಿ ಇಲ್ಲಿ ಸಮೀಕ್ಷೆ ಮಾಡಿದ್ದಾಗ ಕಡಿಮೆ, ಮಧ್ಯಮ ಮತ್ತು ಹೆಚ್ಚು ಭೂಕುಸಿತಕ್ಕೆ ಒಳಗಾಗುವ ಪ್ರದೇಶಗಳೆಂದು ಗುರುತಿಸಲಾಗಿತ್ತು. ಹಾಗಾಗಿ ಅಗತ್ಯವಿದ್ದರೆ ಮತ್ತಷ್ಟು ವಿಸ್ತೃತ ಅಧ್ಯಯನ ಮಾಡಲಾಗುವುದು. ಈ ಬಗ್ಗೆ ಕೇಂದ್ರದ ಗಣಿ ಇಲಾಖೆಗೆ ಮನವಿ ಸಲ್ಲಿಸುವುದಾಗಿ ಜಿಲ್ಲಾಧಿಕಾರಿಯೂ ತಿಳಿಸಿದ್ದಾರೆ’ ಎಂದರು.

ಜಿ.ಎಸ್.ಐ.ನ ಮತ್ತೊಬ್ಬ ಭೂವಿಜ್ಞಾನಿ ಮೋಹನ್ ರಾಜ್ ಇದ್ದರು.

‘ಸಾಮ್ಯತೆ ಗುರುತು ಕಷ್ಟ’
ಎರಡು ವರ್ಷಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ್ದ ಭೂ ಕುಸಿತದ ಬಗ್ಗೆ ಇದೇ ತಂಡವು ಅಧ್ಯಯನ ಮಾಡುತ್ತಿದೆ. ಅಲ್ಲಿ ಮಣ್ಣು ಕುಸಿಯಲು ಕಾರಣಗಳ ಬಗ್ಗೆ ದೊಡ್ಡ ಪ್ರಮಾಣದ ನಾಲ್ಕು ಅಧ್ಯಯನಗಳನ್ನು ಮಾಡಲಾಗಿದೆ. ಅದರ ವರದಿ ಸಿದ್ಧವಾಗುತ್ತಿದೆ. ಅದು ಪ್ರಕಟವಾದ ಬಳಿಕ ಉತ್ತರ ಕನ್ನಡದ ಭೂ ಕುಸಿತದೊಂದಿಗೆ ಹೋಲಿಕೆ ಅಥವಾ ವ್ಯತ್ಯಾಸಗಳನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದು ಕಮಲ್ ಕುಮಾರ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು