ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಅನಾಥವಾದ ಜ್ಞಾನ ದಾನ ಕೇಂದ್ರ

ಭೂ ಕುಸಿತ: ಕಳಚೆಯಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪರ್ಯಾಯ ವ್ಯವಸ್ಥೆಯ ಅನಿವಾರ್ಯತೆ
Last Updated 2 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಕಾರವಾರ: ಅತ್ಯಂತ ಕುಗ್ರಾಮವಾಗಿದ್ದರೂ ಕಳಚೆಯು ಶತಮಾನಗಳ ಹಿಂದಿನಿಂದಲೂ ಜ್ಞಾನ ದಾನ ಕೇಂದ್ರವಾಗಿ ಪ್ರಸಿದ್ಧವಾಗಿದೆ. 1885ರಲ್ಲೇ ಇಲ್ಲಿ ಅಡಿಕೆ ಸೋಗೆಯ ಮಾಡಿನ ಕೆಳಗೆ ಪ್ರಥಮ ಸರ್ಕಾರಿ ಶಾಲೆ ಆರಂಭವಾಗಿತ್ತು. ಅದಕ್ಕೂ ಮೊದಲೇ ಗುರುಕುಲ ಪದ್ಧತಿಯಲ್ಲಿ ಅಕ್ಷರ ದಾಸೋಹ ನಡೆಯುತ್ತಿದ್ದ ಉಲ್ಲೇಖಗಳಿವೆ.

136 ವರ್ಷಗಳ ಹಿಂದೆಯೇ ಈ ಊರಿನ ಹಿರಿಯರಿಗೆ ವಿದ್ಯಾಭ್ಯಾಸದ ಮಹತ್ವದ ಅರಿವಿತ್ತು. ಅಂದು ಇಡೀ ಯಲ್ಲಾಪುರ ತಾಲ್ಲೂಕಿನಲ್ಲಿ ಕೇವಲ ಎರಡು ಕನ್ನಡ ಮಾಧ್ಯಮ ಶಾಲೆಗಳಿದ್ದವು. ಅವುಗಳಲ್ಲಿ ಒಂದು ಕಳಚೆಯಲ್ಲಿತ್ತು ಎಂಬುದನ್ನು ಗ್ರಾಮಸ್ಥರು ಇಂದಿಗೂ ಹೆಮ್ಮೆಯಿಂದ ಹೇಳುತ್ತಾರೆ.

ಕಾಳಿ ನದಿಗೆ ಅಡ್ಡಲಾಗಿ ಕೊಡಸಳ್ಳಿಯಲ್ಲಿ ಜಲಾಶಯ ಕಟ್ಟುವ ಮೊದಲು ಕಳಚೆಯುಕೊಡಸಳ್ಳಿ, ಬರಬಳ್ಳಿ, ಸಾತೊಡ್ಡಿ, ಕಳಚೆ ಮತ್ತು ಈರಾಪುರ ಗ್ರಾಮಗಳಿಗೆ ಕೇಂದ್ರವಾಗಿತ್ತು. ಹಾಗಾಗಿಯೇ ಇಲ್ಲಿ ಶಾಲೆ ಸ್ಥಾಪನೆಯಾಯಿತು. ಜಲಾಶಯದ ನೀರು ಕೊಡಸಳ್ಳಿ ಮತ್ತು ಬರಬಳ್ಳಿಯನ್ನು ಸಂಪೂರ್ಣವಾಗಿ ಮುಳುಗಿಸಿತು. ಸಾತೊಡ್ಡಿಯ ಬಹುಪಾಲು ಹಾಗೂ ಕಳಚೆಯ ಅರ್ಧ ಭಾಗ ಜಲಾವೃತವಾಯಿತು. ಈಗ ಕಳಚೆಯ ಅರ್ಧ ಮತ್ತು ಈರಾಪುರ ಗ್ರಾಮಗಳು ಉಳಿದಿವೆ. ಹಾಗಾಗಿ ವಿದ್ಯಾರ್ಥಿಗಳ ಸಂಖ್ಯೆ ಬರಬರುತ್ತ ಕಡಿಮೆಯಾಯಿತು.

‘ಕಳೆದ ವರ್ಷ 12 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ಈರಾಪುರದವರು ವಜ್ರಳ್ಳಿ ಶಾಲೆ ಹತ್ತಿರವಾಗುತ್ತದೆ ಎಂದು ಅಲ್ಲಿಗೆ ಹೋಗುತ್ತಿದ್ದರು. ಇದ್ದೊಂದು ದಾರಿಯಲ್ಲೂ ಭೂ ಕುಸಿತದ ಬಳಿಕ ಸಂಪರ್ಕ ಕಡಿತಗೊಂಡಿದೆ. ಜನ ವಾಸ್ತವ್ಯ ಬದಲಿಸಿದ್ದಾರೆ’ ಎನ್ನುತ್ತಾರೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ದಿವಾಕರ ಶೆಟ್ಟಿ.

ಶಾಲೆ ಸುಟ್ಟಿದ್ದ ದಿಬ್ಬಣದ ಪಂಜು!
ಕಳಚೆಯ ಹಳೆಯ ಶಾಲೆಯ ಆವರಣವು, ಸ್ವಾತಂತ್ರ್ಯ ಚಳವಳಿಯಲ್ಲೂ ಮಹತ್ವದ ಪಾತ್ರ ವಹಿಸಿದೆ. ಬ್ರಿಟಿಷರು ಈ ಶಾಲೆಯನ್ನೇ ಕೇಂದ್ರೀಕರಿಸಿ ಬಂದು ಠಿಕಾಣಿ ಹೂಡುತ್ತಿದ್ದರಂತೆ. ಸ್ವಾತಂತ್ರದ ಚಳವಳಿಯನ್ನು ನಡೆಸುವವರ ವಿರುದ್ಧ ಆದೇಶಗಳನ್ನು ಸಾರುವ ಸ್ಥಳವೂ ಇದಾಗಿತ್ತು ಎಂದು ಗ್ರಾಮದ ಸಾಮಾಜಿಕ ಕಾರ್ಯಕರ್ತ ವೆಂಕಟ್ರಮಣ ಬೆಳ್ಳಿ ಹೇಳುತ್ತಾರೆ.

ಅಂದಿನ ದಿನಗಳಲ್ಲಿ ಮದುವೆ ದಿಬ್ಬಣವು ಈ ಶಾಲೆಯ ಅಂಗಳದಲ್ಲಿಯೇ ನಡಿಗೆಯಲ್ಲಿ ಸಾಗುತ್ತಿತ್ತು. ಅದೊಂದು ದಿನ ನಸುಕಿನಲ್ಲಿ ಸಾಗುತ್ತಿದ್ದ ದಿಬ್ಬಣವೊಂದರ ಪಂಜಿನ ಬೆಂಕಿಯು, ಅಡಿಕೆ ಸೋಗೆಯ ಮಾಡಿಗೆ ತಾಗಿ ಇಡೀ ಶಾಲೆ ಸುಟ್ಟು ಹೋಯಿತು.‌ ನಂತರ ನಾಲ್ಕು ಕೋಣೆಗಳ, ಹೆಂಚಿನ ಮಾಡಿನ ತರಗತಿಗಳನ್ನು ನಿರ್ಮಿಸಲಾಯಿತು.ಅಂದು ಘಟ್ಟದ ಕೆಳಗಿನ ಕುಮಟಾ, ಗೋಕರ್ಣದಿಂದ ಬರುತ್ತಿದ್ದ ಶಿಕ್ಷಕರು, ಊರಿನವರ ಮನೆಗಳಲ್ಲಿ ಆಶ್ರಯ ಪಡೆದಿದ್ದರು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಈ ಗ್ರಾಮವು ಕೈಗಾದ ಅಣುವಿದ್ಯುತ್ ಸ್ಥಾವರದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ವ್ಯಾಪ್ತಿಯಲ್ಲಿದೆ. ನಾಲ್ಕು ವರ್ಷಗಳ ಹಿಂದೆ, ಆಧುನಿಕ ಸೌಲಭ್ಯಗಳಿರುವ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು ಎನ್.ಪಿ.ಸಿ. ನಿರ್ಮಿಸಿದೆ. ಊರಿನ ಕಿರಿಯ ಪ್ರಾಥಮಿಕ ಶಾಲೆಯು ಕಳಚೆಯ ಕೊನೆಯ ಭಾಗದಲ್ಲಿದೆ. ಮೂರು ದಶಕಗಳ ಹಿಂದೆ ಆರಂಭವಾದ ಸರ್ಕಾರಿ ಪ್ರೌಢಶಾಲೆಯು ಪ್ರತಿವರ್ಷ ಶೇ 100 ಫಲಿತಾಂಶ ದಾಖಲಿಸುತ್ತಿದೆ. ಶಾಲೆಗೆ ಸ್ವತಂತ್ರವಾದ ಕಟ್ಟಡವಿದೆ.

ಪ್ರಭಾಕರ ರಾಣೆ ಅವರು ವಯಸ್ಕರ ಶಿಕ್ಷಣ ಇಲಾಖೆಯ ಸಚಿವರಿದ್ದಾಗ, 1994ರಲ್ಲಿ ಕಳಚೆ ಗ್ರಾಮ ಪಂಚಾಯಿತಿಗೆ ಗ್ರಂಥಾಲಯ ಮಂಜೂರು ಮಾಡಿದ್ದರು. ಅದರಲ್ಲೀಗ ಸುಮಾರು 5 ಸಾವಿರ ಪುಸ್ತಕಗಳ ಸಂಗ್ರಹವಿದೆ.

‘ಕಳಚೆಯೇ ನಮ್ಮ ಜಗತ್ತು ಎಂದು ನಂಬಿದ್ದೆವು. ಆದರೆ, ಹೊರಜಗತ್ತನ್ನು ಶತಮಾನಗಳ ಹಿಂದೆಯೇ ನಮಗೆ ಕಾಣಿಸಿ ಬುದ್ಧಿವಂತ ಸಮಾಜ ನೀಡುವಲ್ಲಿ ಇಲ್ಲಿನ ಶಾಲೆಯ ಪಾತ್ರ ಹಿರಿದು’ ಎಂದು ಸ್ಥಳೀಯ ನಿವಾಸಿ ಆರ್.ಪಿ.ಹೆಗಡೆ ಹೇಳುತ್ತಾರೆ.

ಸಾವಿರ ಸಂಖ್ಯೆಯಲ್ಲಿ ಪದವೀಧರರು, ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ಪಡೆದವರು, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಲೆಕ್ಕ ಪರಿಶೋಧಕರು, ವೈದ್ಯರು... ಹೀಗೆ ವಿವಿಧ ಉನ್ನತ ಹುದ್ದೆಗಳಲ್ಲಿರುವ ಹಲವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಳಚೆ ಶಾಲೆಯಲ್ಲಿ ಪಡೆದಿದ್ದಾರೆ. ಆದರೆ, ಈಗ ಊರಿಗೇ ಬಂದಿರುವ ದುಃಸ್ಥಿತಿಯಿಂದ ವಿದ್ಯಾ ದೇಗುಲ ಅನಾಥವಾಗಿದೆ.

ಆನ್‌ಲೈನ್ ತರಗತಿಯೂ ದೂರ:ಕಳಚೆಗೆ ಇಂಟರ್‌ನೆಟ್, ದೂರವಾಣಿಗಳ ಮೂಲಕ ಹೊರ ಜಗತ್ತಿನೊಂದಿಗೆ ಸಂಪರ್ಕ ನೀಡಿದ್ದ ಆಪ್ಟಿಕಲ್ ಫೈಬರ್ ಕೇಬಲ್‌ಗಳು, ಭಾರಿ ಭೂ ಕುಸಿತದಿಂದ ತುಂಡಾಗಿವೆ. ವಿದ್ಯುತ್ ಮಾರ್ಗವಂತೂ ಬಹಳಷ್ಟು ಹಾನಿಗೀಡಾಗಿದೆ. ಇದರ ನೇರ ಪರಿಣಾಮ ಇಲ್ಲಿನ ವಿದ್ಯಾರ್ಥಿಗಳ ಮೇಲಾಗಿದ್ದು, ಆನ್‌ಲೈನ್ ತರಗತಿಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.

ವಿದ್ಯುತ್ ವ್ಯವಸ್ಥೆ ಸರಿಯಾಗದೇ ಮೊಬೈಲ್ ಬ್ಯಾಟರಿ ಚಾರ್ಜ್ ಮಾಡಲಾಗುತ್ತಿಲ್ಲ. ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕ ಸಾಧ್ಯವಾಗುತ್ತಿಲ್ಲ.

***
ಕಳಚೆಯ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗೆ ದಾಖಲಾತಿ ಮಾಡಿಸಿ ಅಥವಾ ಸಂಬಂಧಿಕರ ಮನೆಗೆ ಕಳುಹಿಸಿ ವಿದ್ಯಾಭ್ಯಾಸ ಮುಂದುವರಿಸುವುದೊಂದೇ ಸದ್ಯದ ಪರಿಹಾರವಾಗಿದೆ.
– ದಿವಾಕರ ಶೆಟ್ಟಿ, ಉಪ ನಿರ್ದೇಶಕ, ಶಿರಸಿ ಶೈಕ್ಷಣಿಕ ಜಿಲ್ಲೆ

***
ಕಳಚೆಯ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ಅತ್ಯುತ್ತಮವಾಗಿದೆ. ಶಾಲೆ ಎಂದರೆ ದೇವಸ್ಥಾನವೆಂದೇ ಭಾವನೆಯಿದೆ. ಇಲ್ಲಿನ ಶಿಕ್ಷಕರು, ವಿದ್ಯಾರ್ಥಿಗಳ ಬದ್ಧತೆ ಪರಿಪೂರ್ಣವಾಗಿದೆ.
– ಪ್ರೀತಿ, ಸಾಫ್ಟ್‌ವೇರ್ ಎಂಜಿನಿಯರ್, ಕಳಚೆ ಶಾಲೆಯ ಹಿರಿಯ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT