ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

32 ಶಾಲೆಗಳಿಗೆ ಶೌಚಾಲಯ ಕೊರತೆ

ಶಿರಸಿ ಶೈಕ್ಷಣಿಕ ಜಿಲ್ಲೆ; ಅನುದಾನಕ್ಕೆ ಕಾಯುತ್ತಿರುವ ಇಲಾಖೆ
Last Updated 2 ಆಗಸ್ಟ್ 2019, 4:36 IST
ಅಕ್ಷರ ಗಾತ್ರ

ಶಿರಸಿ: ‘ಶಿರಸಿ ಶೈಕ್ಷಣಿಕ ಜಿಲ್ಲೆಯ 32 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶೌಚಾಲಯ ಕೊರತೆಯಿದೆ. ಅಕ್ಟೋಬರ್ ಒಳಗಾಗಿ ಎಲ್ಲ ಶಾಲೆಗಳು ಕಡ್ಡಾಯವಾಗಿ ಶೌಚಾಲಯ ಹೊಂದಬೇಕು’ ಎಂದು ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿರುವ ಕಾರಣ, ಅನುದಾನಕ್ಕಾಗಿ ಶಾಲೆಗಳು ಕಾಯುತ್ತಿವೆ.

ಶೈಕ್ಷಣಿಕ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ತಾಲ್ಲೂಕುಗಳ 19 ಶಾಲೆಗಳಲ್ಲಿ ಬಾಲಕರು, 13 ಶಾಲೆಗಳಲ್ಲಿ ಬಾಲಕಿಯರು ಶೌಚಾಲಯ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಕಟ್ಟಡ ಹಳೆಯದಾಗಿ ಬಳಕೆಗೆ ಬಾರದಂತಾಗಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ಇಲ್ಲದ ಕಾರಣ, ಶೌಚಕ್ಕೆ ಹೋಗಲು ಮಕ್ಕಳು ಸರದಿಯಲ್ಲಿ ನಿಂತು ಕಾಯಬೇಕಾಗುತ್ತದೆ. ಶೈಕ್ಷಣಿಕ ಜಿಲ್ಲೆಯ ಎಲ್ಲ 74 ಪ್ರೌಢಶಾಲೆಗಳು ಶೌಚಾಲಯ ಸೌಲಭ್ಯ ಹೊಂದಿವೆ.

‘ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಇಡೀ ಉತ್ತರ ಕನ್ನಡ ಜಿಲ್ಲೆಗೆ ಸೇರಿ ಅನುದಾನ ಬಂದಿರುವುದರಿಂದ, ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಗಳ ನಡುವೆ ಹಂಚಿಕೆ ಆಗಬೇಕಾಗಿದೆ. ಅನುದಾನ ದೊರೆತ ತಕ್ಷಣದಲ್ಲಿ ಕಾಮಗಾರಿ ಆರಂಭವಾಗುತ್ತದೆ. ಸಿದ್ದಾಪುರ ತಾಲ್ಲೂಕಿನಲ್ಲಿ ಎರಡು, ಯಲ್ಲಾಪುರದಲ್ಲಿ ಎಂಟು, ಮುಂಡಗೋಡಿನಲ್ಲಿ ಎರಡು, ಹಳಿಯಾಳದಲ್ಲಿ ಮೂರು, ಜೊಯಿಡಾದಲ್ಲಿ 12 ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ’ ಎಂದು ಡಿಡಿಪಿಐ ದಿವಾಕರ ಶೆಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಶಿರಸಿ ತಾಲ್ಲೂಕಿನ 288 ಪ್ರಾಥಮಿಕ ಶಾಲೆಗಳಿವೆ. ಅವುಗಳಲ್ಲಿ ಐದು ಶಾಲೆಗಳಿಗೆ ಬಾಲಕರ ಶೌಚಾಲಯ ಅಗತ್ಯವಿದೆ. ಶೌಚಾಲಯ ಇಲ್ಲದಿರುವ ಶಾಲೆಗಳು ತಾಲ್ಲೂಕಿನಲ್ಲಿ ಇಲ್ಲ. ಆದರೆ, ಹೊಸ ಕಟ್ಟಡ, ಹೆಚ್ಚುವರಿ ಶೌಚಾಲಯ ಅಗತ್ಯವಿರುವ ಶಾಲೆಗಳ ಪಟ್ಟಿ ನೀಡಲಾಗಿದೆ’ ಎಂದು ಬಿಇಒ ಸದಾನಂದ ಸ್ವಾಮಿ ತಿಳಿಸಿದರು.

ಶಿಥಿಲಾವಸ್ಥೆಯ ಕೊಠಡಿಗಳು:ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳ ಅನೇಕ ಕೊಠಡಿಗಳು ಜೀರ್ಣಾವಸ್ಥೆ ತಲುಪಿವೆ. ಚಾವಣಿ ದುರ್ಬಲವಾಗಿರುವ, ಮಳೆಗಾಲದಲ್ಲಿ ಸೋರುವ ಕೊಠಡಿಗಳ ನಡುವೆಯೇ ಮಕ್ಕಳು ಪಾಠ ಕೇಳುತ್ತಿದ್ದಾರೆ. ಇನ್ನು ಕೆಲವು ಶಾಲೆಗಳು ಕೊಠಡಿಯ ಕೊರತೆ ಅನುಭವಿಸುತ್ತಿವೆ. ಆರು ತಾಲ್ಲೂಕುಗಳಿಂದ ಒಟ್ಟು 117 ಕೊಠಡಿಗಳು ಪುನರ್ ನಿರ್ಮಾಣಕ್ಕೆ ಕಾದಿವೆ.

***

ಶೈಕ್ಷಣಿಕ ಜಿಲ್ಲೆಗೆ ಅಗತ್ಯವಿರುವ ಹೆಚ್ಚುವರಿ ಕೊಠಡಿ ಹಾಗೂ ಪುನರ್ ನಿರ್ಮಾಣಕ್ಕೆ ಕಾದಿರುವ ಕೊಠಡಿಗಳ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ

-ದಿವಾಕರ ಶೆಟ್ಟಿ, ಡಿಡಿಪಿಐ

***

ಶಾಲೆಗೆ ಅಗತ್ಯವಿರುವ ಕೊಠಡಿಗಳು

ತಾಲ್ಲೂಕು ಪುನರ್‌ನಿರ್ಮಾಣ ಹೆಚ್ಚುವರಿ ಕೊಠಡಿ

ಶಿರಸಿ 18 24

ಹಳಿಯಾಳ 06 11

ಸಿದ್ದಾಪುರ 21 05

ಮುಂಡಗೋಡ 67 92

ಜೊಯಿಡಾ 05 04

ಯಲ್ಲಾಪುರ 00 21

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT