ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಹೆಸರಿಗಷ್ಟೇ ಜಿಲ್ಲಾ ಕ್ರೀಡಾಂಗಣ

ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಬಲವಾದ ಆಗ್ರಹ
Last Updated 2 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಶಿರಸಿ: ಮಳೆಗಾಲ ಹೊರತುಪಡಿಸಿ ವರ್ಷವಿಡೀ ವೈವಿಧ್ಯ ಕ್ರೀಡೆಗಳಿಗೆ ಸಾಕ್ಷಿಯಾಗುವ ಇಲ್ಲಿನ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ ಮೂಲ ಸೌಕರ್ಯಗಳ ಕೊರತೆಯಿಂದ ಬಡವಾಗಿದೆ.

ಶಾಲಾ ಮಕ್ಕಳ ಕ್ಲಸ್ಟರ್, ತಾಲ್ಲೂಕು, ಜಿಲ್ಲಾ ಮಟ್ಟದ ಕ್ರೀಡಾಕೂಟಗಳು ಇದೇ ಮೈದಾನದಲ್ಲಿ ನಡೆಯುತ್ತವೆ. ದಸರಾ ಕ್ರೀಡಾಕೂಟ, ಪೊಲೀಸ್ ನೇಮಕಾತಿ, ಅರಣ್ಯ ಸಿಬ್ಬಂದಿ ನೇಮಕಾತಿ, ವಿವಿಧ ಸಂಘಟನೆಗಳು ಆಯೋಜಿಸುವ ರಾಜ್ಯ ಮಟ್ಟದ ಟೂರ್ನಿಗಳು ಇಲ್ಲಿ ಜರುಗುತ್ತವೆ. ಕ್ರೀಡಾಪಟುಗಳು ಪ್ರತಿ ದಿನ ನಸುಕಿನಲ್ಲಿ ಓಟ, ಎತ್ತರ ಜಿಗಿತ, ಉದ್ದ ಜಿಗಿತ ತರಬೇತಿಗೆ ಇಲ್ಲಿ ಬರುತ್ತಾರೆ. ವಾಲಿಪಂದ್ಯ, ಕ್ರಿಕೆಟ್ ಆಟಕ್ಕೆ ಇದೇ ಮೈದಾನ ಕೇಂದ್ರಬಿಂದು. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವದ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮಕ್ಕೆ ಈ ಕ್ರೀಡಾಂಗಣವೇ ಆಸರೆ. ಬೆಳಗಿನ ಹಾಗೂ ಸಂಜೆಯ ವಾಕಿಂಗ್‌ಗೆ ಹಿರಿಯರು ಹಾಗೂ ಹೆಂಗಸರು ಹೆಚ್ಚು ನೆಚ್ಚಿಕೊಳ್ಳುವುದು ಇದೇ ಕ್ರೀಡಾಂಗಣವನ್ನು.

ಕ್ರೀಡಾ ಚಟುವಟಿಕೆಗೆ ಸೆಲೆಯಾಗಿರುವ ಈ ಕ್ರೀಡಾಂಗಣ ನಿರ್ಲಕ್ಷ್ಯಕ್ಕೊಳಗಾಗಿದೆ. ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಪ್ರತಿ ಮಳೆಗಾಲದಲ್ಲಿ ಕ್ರೀಡಾಂಗಣ ಕೆಸರು ಗದ್ದೆಯಂತಾಗುತ್ತದೆ. ಶಾಲಾ ಕ್ರೀಡಾಕೂಟಗಳು ಜುಲೈನಲ್ಲಿ ಆರಂಭವಾಗುತ್ತವೆ. ಮಲೆನಾಡಿನಲ್ಲಿ ಅಕ್ಟೋಬರ್ ತನಕ ಮಳೆ ಇರುವುದರಿಂದ, ಕೆಸರಿನ ಕ್ರೀಡಾಂಗಣದಲ್ಲೇ ಕ್ರೀಡಾ ಸ್ಪರ್ಧೆಗಳು ನಡೆಯುತ್ತವೆ. ಮಕ್ಕಳು ಏಳುತ್ತ ಬೀಳುತ್ತ ಇಲ್ಲಿಯೇ ಆಟವಾಡುತ್ತಾರೆ. ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂಬ ಕ್ರೀಡಾಪ್ರೇಮಿಗಳ ಬೇಡಿಕೆ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

16 ಎಕರೆ ವಿಶಾಲ ಜಾಗದಲ್ಲಿ ಕ್ರೀಡಾಂಗಣವಿದೆ. 1908ರ ದಶಕದಲ್ಲಿ ನಿರ್ಮಾಣವಾದ ಈ ಕ್ರೀಡಾಂಗಣದಲ್ಲಿ 1990ರ ಜನೆವರಿಯಲ್ಲಿ ಇಲ್ಲಿ ಕರ್ನಾಟಕ ಮತ್ತು ಗೋವಾ ತಂಡಗಳ ನಡುವಿನ ರಣಜಿ ಕ್ರಿಕೆಟ್ ಪಂದ್ಯ ನಡೆದಿತ್ತು. ಆ ನಂತರದಲ್ಲಿ ಇದನ್ನು ಜಿಲ್ಲಾ ಕ್ರೀಡಾಂಗಣವಾಗಿ ಪರಿವರ್ತಿಸಿ, 2002ರಲ್ಲಿ ಪೆವಿಲಿಯನ್ ಹಾಗೂ ವ್ಯಾಯಾಮ ಶಾಲೆಯ ಸೌಲಭ್ಯ ಒದಗಿಸಲಾಗಿಯಿತು. ನಂತರದ ವರ್ಷಗಳಲ್ಲಿ ಸಣ್ಣಪುಟ್ಟ ದುರಸ್ತಿ ಹೊರತುಪಡಿಸಿದರೆ, ವ್ಯವಸ್ಥೆ ಸುಧಾರಣೆಗೆ ದೊಡ್ಡ ಯಾವ ಕಾಮಗಾರಿಗಳೂ ನಡೆದಿಲ್ಲ ಎನ್ನುತ್ತಾರೆ ನಿತ್ಯ ಇಲ್ಲಿ ಆಟಕ್ಕೆ ಬರುವ ಕ್ರೀಡಾಪಟುಗಳು.

‘ಇಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆಗಳಿದ್ದಾರೆ. 14 ವರ್ಷದೊಳಗಿನ ಮಕ್ಕಳ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಇಲ್ಲಿನ ಪ್ರೇರಣಾ ಶೇಟ್ ರಾಷ್ಟ್ರ ಮಟ್ಟದಲ್ಲಿ ಬಂಗಾರದ ಪದಕ ಪಡೆದಿದ್ದಾಳೆ. ರಾಜ್ಯ ಮಟ್ಟದ ಓಟ, ಉದ್ದ ಜಿಗಿತ, ಹರ್ಡಲ್ಸ್‌ನಲ್ಲಿ ಅನೇಕ ಮಕ್ಕಳು ಮಿಂಚಿದ್ದಾರೆ. ಆದರೆ, ಮೈದಾನದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಇಲ್ಲ. ಇರುವ ಎಂಟು ಮಡ್ ಟ್ರ್ಯಾಕ್‌ಗಳು ಮಳೆಗೆ ಹಾಳಾಗಿವೆ. ಮಳೆಗಾಲದಲ್ಲಿ ಕ್ರೀಡಾಪಟುಗಳಿಗೆ ತರಬೇತಿ ನೀಡುವುದು ಕಷ್ಟ. ಹೀಗಾಗಿ ಇಲ್ಲಿಗೆ ಒಂದು ಒಳಾಂಗಣ ಕ್ರೀಡಾಂಗಣ ಬೇಕು’ ಎನ್ನುತ್ತಾರೆ ಕ್ರೀಡಾಪಟುವಿನ ಪಾಲಕರೊಬ್ಬರು.

ಏನೇನು ಅಗತ್ಯ?

ಮಗುವಿನ ದೈಹಿಕ ಸಾಮರ್ಥ್ಯ ವೃದ್ಧಿಸುವ ಆಧುನಿಕ ಜಿಮ್ ಸಾಮಗ್ರಿ ಬೇಕು. ಹೊರ ಜಿಲ್ಲೆಗಳಲ್ಲಿ ಇರುವಂತೆ ಇಲ್ಲಿಯೂ ಹೈಟೆಕ್ ಕ್ರೀಡಾ ಸಾಮಗ್ರಿಗಳು ಬೇಕು. ಉತ್ತಮ ಕೋಚ್, ಕ್ರೀಡಾ ಹಾಸ್ಟೆಲ್ ಬೇಕು. ವಿದ್ಯುತ್ ದೀಪ ಸುವ್ಯವಸ್ಥಿತಗೊಳ್ಳಬೇಕು. ಈಗ ಇರುವ ವೈರಿಂಗ್ ಹಳೆಯದಾಗಿದ್ದು, ಅಲ್ಲಲ್ಲಿ ಹರಿದು ಬೀಳುತ್ತಿದೆ.

ಒಬ್ಬ ಕೆಲಸಗಾರ ಕ್ರೀಡಾಂಗಣದ ನಿರ್ವಹಣೆ ನೋಡಿಕೊಳ್ಳುತ್ತಿದ್ದರೂ, ಅವರಿಗೆ 10 ತಿಂಗಳುಗಳಿಂದ ಗೌರವಧನ ದೊರೆತಿಲ್ಲ. ಕಾಯಂ ಒಬ್ಬರು ಯುವಜನ ಸೇವಾ ಕ್ರೀಡಾಧಿಕಾರಿ ಇರಬೇಕು. ಪ್ರಸ್ತುತ ಇರುವವರು ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನೇಕ ‘ಇಲ್ಲ’ಗಳಿಂದ ಬಳಲುತ್ತಿರುವ ಕ್ರೀಡಾಂಗಣ ಹೆಸರಿಗಷ್ಟೇ ಜಿಲ್ಲಾ ಕ್ರೀಡಾಂಗಣವಾಗಿದೆ.

‘ಕ್ರೀಡಾಪಟುಗಳಿಗೆ ಕೋಚ್ ಕೊರತೆ’

ಕ್ರೀಡಾಂಗಣದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಟ್ರ್ಯಾಕ್ ಮೇಲೆ ಹುಲ್ಲು ಬೆಳೆಯುತ್ತದೆ. ಈ ಭಾಗದಲ್ಲಿ ಬುಡಕಟ್ಟು ಜನಾಂಗದ ಸದೃಢ ಕ್ರೀಡಾಪಟುಗಳು ಇದ್ದಾರೆ. ಆದರೆ, ಸೌಲಭ್ಯಗಳ ಕೊರತೆಯಿಂದ ಅವರ ಪ್ರತಿಭೆ ಹೊರಹೊಮ್ಮುತ್ತಿಲ್ಲ. ಒಬ್ಬರು ಕೋಚ್, ವೈಜ್ಞಾನಿಕ ಕ್ರೀಡಾ ಸಾಮಗ್ರಿಗಳು ಇದ್ದರೆ, ಪ್ರತಿವರ್ಷ ಒಂದಿಬ್ಬರಾದರೂ ರಾಷ್ಟ್ರ ಮಟ್ಟದಲ್ಲಿ ಬೆಳಗುವಷ್ಟು ಸಾಮರ್ಥ್ಯದ ಕ್ರೀಡಾಪ್ರತಿಭೆಗಳು ಇಲ್ಲಿದ್ದಾರೆ.

– ರವೀಂದ್ರ ನಾಯ್ಕ, ಕ್ರೀಡಾಪಟುವಿನ ಪಾಲಕ

***

‘ಸಿಂಥೆಟಿಕ್ ಟ್ರ್ಯಾಕ್ ತೀರಾ ಅವಶ್ಯ’

ಮಾರಿಕಾಂಬಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ತೀರಾ ಅವಶ್ಯ. ಇದಿಲ್ಲದಿದ್ದರೆ, ಬೇರೆ ಜಿಲ್ಲೆಗಳ ಜೊತೆ ಸ್ಪರ್ಧಿಸಲು ಇಲ್ಲಿನ ಅಥ್ಲೆಟಿಕ್‌ಗಳಿಗೆ ಕಷ್ಟವಾಗುತ್ತದೆ. ಅಲ್ಲದೇ ರಾಜ್ಯ ಮಟ್ಟದ ಪಂದ್ಯಗಳನ್ನು ಇಲ್ಲಿ ಆಯೋಜಿಸಲು ಸಾಧ್ಯವಾಗುವುದಿಲ್ಲ. ಒಳ್ಳೆಯ ಆಟಗಾರರು ಇಲ್ಲಿ ಬರಲು ಹಿಂದೇಟು ಹಾಕುತ್ತಾರೆ. ನಮ್ಮ ಮಕ್ಕಳು ಅಂತಹವರ ಮಾರ್ಗದರ್ಶನದಿಂದ ವಂಚಿತರಾಗುತ್ತಾರೆ, ಜೊತೆಗೆ ಅವರಲ್ಲಿ ಕ್ರೀಡಾ ಮನೋಭಾವ ಬೆಳೆಯುವುದಿಲ್ಲ. ನಮ್ಮ ಜಿಲ್ಲೆಯ ಹೊರತುಪಡಿಸಿ, ಇನ್ನುಳಿದ ಎಲ್ಲ ಜಿಲ್ಲೆಗಳಲ್ಲಿ ಒಳಾಂಗಣ ಕ್ರೀಡಾಂಗಣಗಳಿವೆ. ಒಳಾಂಗಣ ಕ್ರೀಡಾಂಗಣ ಇದ್ದರೆ, ವಾಲಿಬಾಲ್, ಕಬಡ್ಡಿ, ಶಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಕ್ರೀಡೆಗಳಿಗೆ ಸಹಕಾರಿ.

–ಡಾ. ದಿನೇಶ ಹೆಗಡೆ, ಕ್ರೀಡಾಪಟು

***

‘ನಮ್ಮಲ್ಲಿ ಮಾತ್ರ ಒಳಾಂಗಣ ಕ್ರೀಡಾಂಗಣವಿಲ್ಲ’

ನನ್ನ ಮಗಳು ಶಟಲ್ ಬ್ಯಾಡ್ಮಿಂಟನ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಬಂಗಾರ ಪದಕ ಪಡೆದಳು. ಕರ್ನಾಟಕ ತಂಡದ ಕ್ಯಾಪ್ಟನ್ ಆಗಿ ಅವಳು ಆಟವಾಡಿದಳು. ವ್ಯವಸ್ಥೆ ಇಲ್ಲದಿದ್ದರೂ ಹೇಗೆ ಇಷ್ಟು ಸಾಧನೆ ಸಾಧ್ಯವೆಂದು ಎಲ್ಲರೂ ಅಚ್ಚರಿಪಟ್ಟರು. ಆಕೆ ಕೋಚಿಂಗ್‌ಗೆ ಹೊರಜಿಲ್ಲೆಗಳನ್ನು ಅವಲಂಬಿಸಬೇಕಾಗಿದೆ. ಇಲ್ಲಿ ಒಳಾಂಗಣ ಕ್ರೀಡಾಂಗಣದ ಕೊರತೆಯಿದೆ. ಹೀಗಾಗಿ, ಪಂದ್ಯ ಸಮೀಪಿಸಿದಾಗ ಹೊರ ಜಿಲ್ಲೆಗೆ ಹೋಗಿ, ವಾರಗಟ್ಟಲೇ ಅಲ್ಲಿ ಉಳಿದು ತರಬೇತಿ ಕೊಡಿಸುತ್ತೇವೆ. ಇದಕ್ಕಾಗಿ ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಹಲವಾರು ಪಾಲಕರು ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ.

–ನಂದಕುಮಾರ್ ಶೇಟ್, ಕ್ರೀಡಾಪಟುವಿನ ತಂದೆ

***

‘₹ 1 ಕೋಟಿ ಮಂಜೂರು’

ಕ್ರೀಡಾಂಗಣದಲ್ಲಿ ಟ್ರ್ಯಾಕ್ ಮತ್ತು ಚರಂಡಿ ನಿರ್ಮಾಣ, ಇನ್ನಿತರ ಅಭಿವೃದ್ಧಿಗೆ ₹ 1 ಕೋಟಿ ಮಂಜೂರು ಆಗಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇದರ ಗುದ್ದಲಿಪೂಜೆ ಮಾಡಿದ್ದು, ನಿರ್ಮಿತಿ ಕೇಂದ್ರ ಕಾಮಗಾರಿ ಪ್ರಾರಂಭಿಸಿದೆ. ಒಳಾಂಗಣ ಕ್ರೀಡಾಂಗಣದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.

–ಜಿ.ಗಾಯತ್ರಿ, ಯುವಜನ ಸೇವಾ ಕ್ರೀಡಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT