ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕಾಪಡೆ ಬಲಗೊಳಿಸುವುದು ಯಾವುದೇ ದೇಶದ ವಿರುದ್ಧವಲ್ಲ: ರಾಜನಾಥ ಸಿಂಗ್

ಕಾರವಾರದಲ್ಲಿ ಜಲಾಂತರ್ಗಾಮಿ ನೌಕೆಯಲ್ಲಿ ಸಂಚರಿಸಿದ ರಕ್ಷಣಾ ಸಚಿವ
Last Updated 27 ಮೇ 2022, 11:25 IST
ಅಕ್ಷರ ಗಾತ್ರ

ಕಾರವಾರ: ‘ದೇಶದ ಕರಾವಳಿಯಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಭಾರತೀಯ ನೌಕಾ‍ಪಡೆಯನ್ನು ಬಲಗೊಳಿಸಲಾಗುತ್ತಿದೆ. ಇದು ಯಾವುದೇ ದೇಶದ ವಿರುದ್ಧವೂ ಅಲ್ಲ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಸ್ಪಷ್ಟಪಡಿಸಿದರು.

ಇಲ್ಲಿನ ಐ.ಎನ್.ಎಸ್ ಕದಂಬ ನೌಕಾನೆಲೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಸ್ವದೇಶಿ ನಿರ್ಮಾಣದ ಯುದ್ಧ ವಿಮಾನ ವಾಹಕ ನೌಕೆ ‘ಐ.ಎನ್.ಎಸ್ ವಿಕ್ರಾಂತ್’ ಅನ್ನು ಈ ವರ್ಷ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನೌಕಾಪಡೆಗೆ ಸೇರ್ಪಡೆಗೊಳಿಸಲು ಸಿದ್ಧತೆಗಳು ನಡೆದಿವೆ. ಇದರೊಂದಿಗೆ ‘ಐ.ಎನ್.ಎಸ್ ವಿಕ್ರಮಾದಿತ್ಯ’ ನೌಕೆಯಿದ್ದು, ದೇಶದ ಕರಾವಳಿಯಲ್ಲಿ ಭದ್ರತೆಗೆ ಮತ್ತಷ್ಟು ಬಲ ಬರಲಿದೆ’ ಎಂದು ಹೇಳಿದರು.

ಇದಕ್ಕೂ ಮೊದಲು ಅವರು ಜಲಾಂತರ್ಗಾಮಿ ನೌಕೆ ‘ಐ.ಎನ್.ಎಸ್ ಖಂಡೇರಿ’ಯಲ್ಲಿ ನಾಲ್ಕು ತಾಸು ಸಮುದ್ರಯಾನ ಮಾಡಿದರು. ಬೆಳಿಗ್ಗೆ 9.30ರ ಸುಮಾರಿಗೆ ಜಲಾಂತರ್ಗಾಮಿಯ ಒಳ ಹೋದ ಅವರು, ಮಧ್ಯಾಹ್ನ 1.30ಕ್ಕೆ ನೌಕಾನೆಲೆಗೆ ವಾಪಸಾದರು. ಸಮುದ್ರದಲ್ಲಿ ನಡೆಯುವ ಸಶಸ್ತ್ರ ಕಾರ್ಯಾಚರಣೆ, ನೌಕಾ ಸಿಬ್ಬಂದಿಯ ಕರ್ತವ್ಯದ ರೀತಿಯನ್ನು ಅವರಿಗೆ ‍ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಲಾಯಿತು.

‘ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಕ್ಷಣಾ ಕ್ಷೇತ್ರದಲ್ಲೂ ಆತ್ಮನಿರ್ಭರ ಭಾರತಕ್ಕೆ ಒತ್ತು ನೀಡುತ್ತಿದೆ. ನೌಕಾಪಡೆಗೆ ಸೇರ್ಪಡೆ ಮಾಡಲಾಗುತ್ತಿರುವ 41 ನೌಕೆಗಳು ಮತ್ತು ಜಲಾಂತರ್ಗಾಮಿಗಳ ಪೈಕಿ, 39ನ್ನು ಭಾರತದಲ್ಲೇ ನಿರ್ಮಿಸಲಾಗುತ್ತಿದೆ. ಅದರ ಭಾಗವಾಗಿ 2019ರ ಸೆಪ್ಟೆಂಬರ್‌ನಲ್ಲಿ ಎರಡು ಜಲಾಂತರ್ಗಾಮಿಗಳನ್ನು ನೌಕಾಪಡೆಗೆ ಸೇರಿಸಿಕೊಳ್ಳುವ ಕಾರ್ಯಕ್ರಮಕ್ಕೆ ನಾನೇ ಚಾಲನೆ ನೀಡಿದ್ದೆ. ಈಗ ಕಾರವಾರದಲ್ಲಿ ಅದರಲ್ಲಿ ಸಂಚರಿಸಿ ಕಾರ್ಯಾಚರಣೆಯನ್ನು ವೀಕ್ಷಿಸಿದ್ದು ಹೆಮ್ಮೆಯ ಕ್ಷಣಗಳಾಗಿವೆ’ ಎಂದು ಹೇಳಿದರು.

ಇದಕ್ಕೂ ಮೊದಲು ಸಚಿವರು, ಕಾರವಾರದ ನೌಕಾನೆಲೆಯಲ್ಲಿ ನಡೆಯುತ್ತಿರುವ ಪ್ರಾಜೆಕ್ಟ್ ಸೀಬರ್ಡ್‌ನ ಎರಡನೇ ಹಂತದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ಮಾಡಿದರು. ಆಗಿರುವ ಕೆಲಸಗಳು ಮತ್ತು ಕಾಮಗಾರಿಗಳು ಸಾಗುತ್ತಿರುವ ವೇಗದ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು.

ಕಡಲತೀರದಲ್ಲಿ ಯೋಗಾಸನ:

ಕಾರವಾರದ ಕದಂಬ ನೌಕಾನೆಲೆಗೆ ಗುರುವಾರ ಸಂಜೆ ಆಗಮಿಸಿದ ರಕ್ಷಣಾ ಸಚಿವ ರಾಜನಾಥ ಸಿಂಗ್, ನೌಕಾನೆಲೆಯಲ್ಲಿ ರಾತ್ರಿ ವಾಸ್ತವ್ಯ ಮಾಡಿದರು. ಶುಕ್ರವಾರ ಬೆಳಿಗ್ಗೆ ಸೂರ್ಯೋದಯದ ಸಮಯಕ್ಕೆ ಸರಿಯಾಗಿ ನೌಕಾನೆಲೆ ವ್ಯಾಪ್ತಿಯ ಕಾಮತ್ ಬೀಚ್‌ ಕಡಲತೀರದಲ್ಲಿ ಯೋಗಾಸನ ಮಾಡಿದರು. ನೌಕಾಪಡೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಕೂಡ ಭಾಗವಹಿಸಿದ್ದರು.

ಸಚಿವರ ಎರಡು ದಿನಗಳ ಕಾರ್ಯಕ್ರಮದಲ್ಲಿ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್, ಪಶ್ಚಿಮ ವಲಯ ಮುಖ್ಯಸ್ಥ ವೈಸ್ ಅಡ್ಮಿರಲ್ ಅಜೇಂದ್ರ ಬಹಾದೂರ್ ಸಿಂಗ್, ಕರ್ನಾಟಕ ನೌಕಾ ವಲಯದ ಮುಖ್ಯಸ್ಥ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಅತುಲ್ ಆನಂದ್ ಜೊತೆಗಿದ್ದರು.

‘ಖಂಡೇರಿ’ ವೈಶಿಷ್ಟ್ಯ:

‘ಐ.ಎನ್.ಎಸ್ ಖಂಡೇರಿ’ ಜಲಾಂತರ್ಗಾಮಿ ನೌಕೆಯು ಸ್ವದೇಶಿಯಾಗಿದ್ದು, ಮುಂಬೈನ ಮಜಗಾಂ ನೌಕೆ ನಿರ್ಮಾಣ ಯಾರ್ಡ್‌ನಲ್ಲಿ ನಿರ್ಮಿಸಲಾಗಿದೆ. ಡೀಸೆಲ್– ಎಲೆಕ್ಟ್ರಿಕ್ ಮಾದರಿಯ, ದಾಳಿ ಮಾಡುವ ಸಾಮರ್ಥ್ಯವಿರುವ ನೌಕೆಯಾಗಿದೆ. ‘ಕಲ್ವರಿ’ ದರ್ಜೆಯ ಆರು ಜಲಾಂತರ್ಗಾಮಿಗಳಲ್ಲಿ ಇದು ಎರಡನೆಯದ್ದಾಗಿದೆ.

––––

ಭಾರತದ ನೌಕಾಪಡೆಯೊಂದಿಗೆ ವಿಶ್ವದ ದೊಡ್ಡ ನೌಕಾ ಶಕ್ತಿಗಳು ಸಹಯೋಗ ಹೊಂದಲು ಆಸಕ್ತಿ ತೋರುತ್ತಿವೆ. ಹಲವು ದೇಶಗಳು ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿವೆ.

– ರಾಜನಾಥ ಸಿಂಗ್, ರಕ್ಷಣಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT