ಶುಕ್ರವಾರ, ಅಕ್ಟೋಬರ್ 22, 2021
22 °C
1971ರ ಯುದ್ಧದಲ್ಲಿ ಪಾಕಿಸ್ತಾನ ವಿರುದ್ಧದ ಗೆಲುವಿಗೆ ಸುವರ್ಣ ಮಹೋತ್ಸವದ ಸಂಭ್ರಮ

ಕಾರವಾರ: ನೌಕಾನೆಲೆಯಲ್ಲಿ ‘ವಿಜಯ ಜ್ಯೋತಿ’ಗೆ ಗೌರವದ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಪಾಕಿಸ್ತಾನದ ವಿರುದ್ಧ 1971ರಲ್ಲಿ ನಡೆದ ಯುದ್ಧದಲ್ಲಿ ಪಡೆದುಕೊಂಡ ಗೆಲುವಿನ 50ನೇ ವರ್ಷಾಚರಣೆಯ ಅಂಗವಾಗಿ ದೇಶದಾದ್ಯಂತ ಸಂಚರಿಸುತ್ತಿರುವ ಜ್ಯೋತಿಯಾತ್ರೆಯು (ಸ್ವರ್ಣಿಂ ವಿಜಯ್ ವರ್ಷ್), ಶುಕ್ರವಾರ ಕಾರವಾರ ತಲುಪಿತು. ಕದಂಬ ನೌಕಾನೆಲೆಯಲ್ಲಿ ಜ್ಯೋತಿಯನ್ನು ಕರ್ನಾಟಕ ನೌಕಾವಲಯದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ವಿಜಯ ಜ್ಯೋತಿಯನ್ನು ಸ್ವಾಗತಿಸಲು ಅವಕಾಶ ಸಿಕ್ಕಿದ್ದು ನಮ್ಮ ಅದೃಷ್ಟವಾಗಿದೆ. ದೇಶದಾದ್ಯಂತ ಸಂಚರಿಸುತ್ತಿರುವ ಇದು, ಸೆ.24ರ ತನಕ ಕಾರವಾರದಲ್ಲಿ ಇರಲಿದೆ. ಈ ಅವಧಿಯಲ್ಲಿ ನೌಕಾನೆಲೆಯ ನೌಕೆಗಳು, ಕಾರವಾರದ ವಿವಿಧ ಶಾಲೆಗಳಿಗೂ ತಲುಪಲಿದೆ’ ಎಂದು ತಿಳಿಸಿದರು.

‘ಜ್ಯೋತಿಯು ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿರುವ ಐ.ಎನ್.ಎಸ್ ಚಾಪೆಲ್ ಯುದ್ಧನೌಕಾ ವಸ್ತು ಸಂಗ್ರಹಾಲಯ ಆವರಣಕ್ಕೆ ಸೆ.22ರಂದು ಸಾಗಲಿದೆ. ಅಲ್ಲಿರುವ ದಿ.ಮೇಜರ್ ರಾಘೋಬ ರಾಣೆ ಅವರ ಪ್ರತಿಮೆಗೆ ಗೌರವ ಸಲ್ಲಿಸಲಾಗುವುದು. ಅವರ ಪತ್ನಿ ಮತ್ತು ಪುತ್ರರು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಬಳಿಕ ಜ್ಯೋತಿಯಾತ್ರೆಯು ದೇಶದ ಬೇರೆಡೆ ಮುಂದುವರಿಯಲಿದೆ’ ಎಂದು ಮಾಹಿತಿ ನೀಡಿದರು.

ಗೌರವ ವಂದನೆ: ಕದಂಬ ನೌಕಾನೆಲೆಯ ಬಿಣಗಾ ಗೇಟ್‌ ಮೂಲಕ ವಿಜಯ ಜ್ಯೋತಿಯು ಪ್ರವೇಶಿಸುತ್ತಿದ್ದಂತೆ ನೌಕಾದಳದ ಅಧಿಕಾರಿಗಳು ಗೌರವ ಸಲ್ಲಿಸಿದರು. ಜ್ಯೋತಿಯನ್ನು ಪರೇಡ್‌ನಲ್ಲಿ ತೆಗೆದುಕೊಂಡು ಬಂದು, ಯುದ್ಧ ಸ್ಮಾರಕ ‘ವಿಜಯ್ ಚೌಕ್’ನಲ್ಲಿ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಅವರಿಗೆ ಹಸ್ತಾಂತರಿಸಿದರು. ಅವರು ಸ್ಮಾರಕದಲ್ಲಿ ಜ್ಯೋತಿಯನ್ನು ಪ್ರತಿಷ್ಠಾಪಿಸಿ ಗೌರವ ವಂದನೆ ಸಲ್ಲಿಸಿದರು. ಬಳಿಕ ಜ್ಯೋತಿಯನ್ನು ಯುದ್ಧ ವಿಮಾನ ವಾಹಕ ನೌಕೆ ಐ.ಎನ್.ಎಸ್ ವಿಕ್ರಮಾದಿತ್ಯಕ್ಕೆ ಕಳುಹಿಸಲಾಯಿತು.

ಬಾಂಗ್ಲಾದೇಶಕ್ಕೆ ಮುಕ್ತಿ: ‘1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಭಾರತೀಯ ನೌಕಾದಳವು ನಿರ್ಣಾಯಕ ಪಾತ್ರ ವಹಿಸಿತ್ತು. ಪೂರ್ವ ಪಾಕಿಸ್ತಾನ್ ಎಂದು ಕರೆಯಲಾಗುತ್ತಿದ್ದ ಇಂದಿನ ಬಾಂಗ್ಲಾದೇಶದಿಂದ ಪಾಕಿಸ್ತಾನಿ ಪಡೆಗಳನ್ನು ಭಾರತೀಯ ಸಶಸ್ತ್ರ ಪಡೆಗಳು ಬಗ್ಗು ಬಡಿದಿದ್ದವು’ ಎಂದು ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಹೇಳಿದರು.

‘ಆ ಯುದ್ಧದಲ್ಲಿ ಭಾರತೀಯ ನೌಕಾದಳದ ವಿವಿಧ ನೌಕೆಗಳು, ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಲಾಗಿತ್ತು. ನೌಕಾದಳದ ಸಾವಿರಾರು ಕಮಾಂಡೋಗಳು, ಮುಳುಗು ತಜ್ಞರು ಪಾಲ್ಗೊಂಡಿದ್ದರು. ಬಾಂಗ್ಲಾದೇಶದ ವಿಮೋಚನೆಗೆ ಹೋರಾಡುತ್ತಿದ್ದ ‘ಮುಕ್ತಿಬಾಹಿನಿ’‍ ಚಳವಳಿಕಾರರಿಗೆ ನೆರವಾಗಿದ್ದರು. ಆ ಮೂಲಕ ಪೂರ್ವ ಪಾಕಿಸ್ತಾನವನ್ನು ಪ್ರತ್ಯೇಕಿಸಿ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದರು’ ಎಂದು ಸ್ಮರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು