ಶನಿವಾರ, ಮೇ 21, 2022
28 °C
ಬೆಳೆಗಾರರು, ವರ್ತಕರ ಬೇಸರ

ಮಾರಾಟವಾಗದೇ ಕೊಳೆತ ಸಿಹಿ ಈರುಳ್ಳಿ; ಹೂಡಿದ ಬಂಡವಾಳವೂ ಕೈತಪ್ಪುವ ಆತಂಕ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯ ‍ಹೆಗ್ಗುರುತುಗಳಲ್ಲಿ ಒಂದಾಗಿರುವ ಕುಮಟಾದ ಅಳ್ವೆಕೋಡಿ ಮತ್ತು ಗೋಕರ್ಣದ ಸಿಹಿ ಈರುಳ್ಳಿ ಬೆಳೆಗಾರರು ಈ ವರ್ಷ ಕಂಗಾಲಾಗಿದ್ದಾರೆ. ಸಂಕಷ್ಟದ ನಡುವೆ ಫಸಲು ಕೈಸೇರಿದ್ದರೂ ಮಾರಾಟವಾಗದೇ ಈರುಳ್ಳಿ ಕೊಳೆಯುತ್ತಿದೆ.

ಪ್ರತಿ ವರ್ಷ ಅಳ್ವೆಕೋಡಿ ಈರುಳ್ಳಿಯು ಏಪ್ರಿಲ್– ಮೇ ತಿಂಗಳಿಗೆ ಮಾರುಕಟ್ಟೆಗೆ ಬಂದು, ದೇಶದ ಬೇರೆ ಬೇರೆ ಭಾಗಗಳಿಗೆ ರವಾನೆಯಾಗುತ್ತಿತ್ತು. ಆದರೆ, ಈ ಬಾರಿ ಬೆಳೆಗಾರರಿಗೆ ಮೊದಲ ಆಘಾತವಾಗಿ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಯ ಮುಷ್ಕರ ಕಾಡಿತು. ಬೆಂಗಳೂರು, ಮುಂಬೈ, ಹುಬ್ಬಳ್ಳಿ ಮುಂತಾದ ನಗರಗಳಿಗೆ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಬಸ್‌ಗಳ ಮೂಲಕ ಈರುಳ್ಳಿ ಸಾಗಿಸಲಾಗುತ್ತಿತ್ತು. ಆದರೆ, ಬಸ್‌ಗಳು ರಸ್ತೆಗಿಳಿಯದ ಕಾರಣ ಈರುಳ್ಳಿ ಗೊಂಚಲನ್ನು ಕಾಯಂ ಗ್ರಾಹಕರಿಗೆ ಕಳುಹಿಸಲು ಸಾಧ್ಯವಾಗಲಿಲ್ಲ.

ಕೋವಿಡ್ ನಿಯಂತ್ರಣಕ್ಕಾಗಿ ಜಾರಿಯಾದ ಲಾಕ್‌ಡೌನ್‌ನ ಜೊತೆಗೇ ಅಪ್ಪಳಿಸಿದ ‘ತೌತೆ’ ಚಂಡಮಾರುತವೂ ಕಣ್ಣೀರು ಹಾಕುವಂತೆ ಮಾಡಿದೆ ಎನ್ನುತ್ತಾರೆ ಈರುಳ್ಳಿ ಬೆಳೆಗಾರ ಹಾಗೂ ವರ್ತಕರಾಗಿರುವ ರಾಮಚಂದ್ರ ಪಟಗಾರ.

‘ನಮ್ಮ ಜಮೀನಿನಲ್ಲಿ ಪ್ರತಿ ವರ್ಷ 30ರಿಂದ 40 ಕ್ವಿಂಟಲ್ ಈರುಳ್ಳಿ ಬೆಳೆಯುತ್ತಿದ್ದೆವು. ಈ ಬಾರಿ ಕೆ.ಜಿಗೆ ₹ 80ರಂತೆ ದರವಿತ್ತು. ದ್ವಿತೀಯ ದರ್ಜೆಯ ಬೆಳೆಗೆ ₹ 50ರಂತೆ ಮಾರಾಟ ಮಾಡಲಾಗಿತ್ತು. ಅಷ್ಟರಲ್ಲಿ ಎದುರಾದ ಸಂಕಷ್ಟಗಳು ವ್ಯಾಪಾರವನ್ನೇ ನಿಲ್ಲಿಸಿವೆ. ಪಟ್ಟಣಕ್ಕೆ ಹೊರ ದೇಶದ, ರಾಜ್ಯಗಳ ಪ್ರವಾಸಿಗರು ಬರುತ್ತಿಲ್ಲ. ವಾಹನಗಳ ಸಂಚಾರವಿಲ್ಲದೇ ವ್ಯಾಪಾರವಾಗುತ್ತಿಲ್ಲ. ಹಾಗಾಗಿ ಈರುಳ್ಳಿ ಗೊಂಚಲಿನಲ್ಲೇ ಕೊಳೆಯುತ್ತಿದೆ’ ಎಂದು ಬೇಸರಿಸುತ್ತಾರೆ.

ಗೋಕರ್ಣ, ಮುರುಡೇಶ್ವರಕ್ಕೆ ಬರುವ ಪ್ರವಾಸಿಗರು ಕುಮಟಾದಲ್ಲಿ ಈರುಳ್ಳಿ ಖರೀದಿಸಿ ಸಾಗುತ್ತಿದ್ದರು. ಸಿಹಿ ಮತ್ತು ಖಾರ ಇರುವ ಈ ವಿಶೇಷ ಬೆಳೆ, ಔಷಧೀಯ ಗುಣಗಳನ್ನೂ ಹೊಂದಿದೆ. ಹಾಗಾಗಿ ಆಯುರ್ವೇದೀಯ ಚಿಕಿತ್ಸೆಗೂ ಬಳಕೆಯಾಗುತ್ತವೆ. ಆದರೆ, ಮೇಲಿನಿಂದ ಮೇಲೆ ಎದುರಾಗುತ್ತಿರುವ ಕಷ್ಟಗಳ ನಡುವೆ ಫಸಲು ಪಡೆಯುವುದು ಕಷ್ಟವಾಗುತ್ತಿದೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ಈರುಳ್ಳಿ ಬೆಳೆಗಾರರ ಸಂಖ್ಯೆ ಕುಸಿಯುತ್ತಿದೆ ಎಂದು ಹೇಳುತ್ತಾರೆ.

ಸುರುಳಿ ರೋಗದ ಕಾಟ
ಸಿಹಿ ಈರುಳ್ಳಿ ಸಸಿಗೆ ಎರಡು ವರ್ಷಗಳಿಂದ ಸುರುಳಿ ರೋಗ ಕಾಡುತ್ತಿದೆ. ಹೀಗಾಗಿ ಬೆಳೆ ನಾಶವಾಗುತ್ತಿದ್ದು, ಹಲವರು ಇದರಿಂದ ಹಿಂದೆ ಸರಿಯುತ್ತಿದ್ದಾರೆ.

‘ನಾವು ಈರುಳ್ಳಿ ಬೆಳೆದು, ವ್ಯಾಪಾರ ಮಾಡುತ್ತಿದ್ದೆವು. ಆದರೆ, ಸುರುಳಿ ರೋಗದಿಂದ ತುಂಬ ನಷ್ಟವಾಗುತ್ತಿದೆ. ಹಾಗಾಗಿ ಈಗ ಬೆಳೆಯುತ್ತಿಲ್ಲ. ಅಪರೂಪದ ಬೆಳೆಯನ್ನು ಉಳಿಸಿ ಬೆಳೆಸಲು ತೋಟಗಾರಿಕೆ ಇಲಾಖೆ ನೆರವು ನೀಡಬೇಕು’ ಎನ್ನುತ್ತಾರೆ ಕುಮಟಾದ ನಾಗವೇಣಿ ಕೃಷ್ಣ ಪಟಗಾರ.

‘ಮೊದಲು ಗುಂಟೆಗೆ ಎಂಟು ಕ್ವಿಂಟಲ್‌ಗಳಷ್ಟು ಈರುಳ್ಳಿ ಸಿಗುತ್ತಿತ್ತು. ಆದರೆ, ಈಗ ಎರಡು ಕ್ವಿಂಟಲ್‌ ಕೂಡ ಸಿಗುವುದು ಕಷ್ಟವಾಗಿದೆ. ಇದಕ್ಕೆ ಬೀಜವನ್ನು ಪರೀಕ್ಷಿಸದೇ ಹಾಗೂ ಮಣ್ಣು ಪರೀಕ್ಷೆ ಮಾಡದೇ ಬಿತ್ತನೆ ಮಾಡುವುದು ಕಾರಣ. ರೋಗ ಕಾಣಿಸಿಕೊಂಡಾಗ ಕ್ರಿಮಿನಾಶಕ ಸಿಂಪಡಿಸುವ ಬದಲು, ಬಿತ್ತನೆಯ ಸಂದರ್ಭದಲ್ಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ’ ಎನ್ನುತ್ತಾರೆ ಸ್ಥಳೀಯ ವಿನಾಯಕ ನಾಯ್ಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು