ಬುಧವಾರ, ಜುಲೈ 6, 2022
22 °C

ಬಿಸಿಲ ಬೇಗೆ, ಬೇಸಿಗೆ ರಜೆ: ಈಜುಪಟುಗಳ ಮನಸೆಳೆದ ಈಜುಕೊಳ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಬೇಸಿಗೆ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಈಜುಕೊಳ ಈ ಬಾರಿ ಜನರನ್ನು ಆಕರ್ಷಿಸುತ್ತಿದೆ.

ಬಿಸಿಲ ಬೇಗೆ ಹೆಚ್ಚುತ್ತಿರುವ ಜತೆಗೆ ಬೇಸಿಗೆ ರಜಾ ಅವಧಿಯೂ ಇರುವ ಕಾರಣ ಈಜುಕೊಳಕ್ಕೆ ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪ್ರತಿನಿತ್ಯಸ ರಾಸರಿ 50 ರಿಂದ 70 ಜನ ಈಜುಕೊಳಕ್ಕೆ ಭೇಟಿ ನೀಡುತ್ತಿದ್ದಾರೆ.

ನಗರಸಭೆಗೆ ಸೇರಿದ ಈಜುಕೊಳವನ್ನು ಬೆಂಗಳೂರಿನ ಖಾಸಗಿ ಸಂಸ್ಥೆ ನಿರ್ವಹಣೆ ಗುತ್ತಿಗೆ ಪಡೆದುಕೊಂಡಿದೆ. ಕೋವಿಡ್ ಕಾರಣಕ್ಕೆ ಹಿಂದಿನ ಎರಡು ವರ್ಷ ಬಹುತೇಕ ದಿನಗಳ ಕಾಲ ಈಜುಕೊಳ ಮುಚ್ಚಲ್ಪಟ್ಟಿತ್ತು. ಈ ಬಾರಿ ಚೇತರಿಕೆ ಕಾಣುತ್ತಿದೆ.

ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಎಂಟು ಬ್ಯಾಚುಗಳಿಗೆ ಈಜಲು ಅವಕಾಶ ಮಾಡಿಕೊಡಲಾಗುತ್ತಿದೆ. ಈ ಪೈಕಿ ಹತ್ತಾರು ಜನರು ಈಜು ಕಲಿಯಲು ಬರತೊಡಗಿದ್ದಾರೆ. ಮಕ್ಕಳು, ಯುವಕರು, ಮಧ್ಯ ವಯಸ್ಕರು, ಮಹಿಳೆಯರು ಈಜು ಕಲಿಯಲು ಆಸಕ್ತಿ ತೋರುತ್ತಿದ್ದಾರೆ.

‘ಈಜು ಕಲಿಯಲು ಬರುವವರಿಗೆ ಬೇಸಿಗೆ ರಜಾ ಅವಧಿ ಸೂಕ್ತವಾಗಿದೆ. ಕೋವಿಡ್ ಕಾರಣಕ್ಕೆ ಎರಡು ವರ್ಷ ಈ ಅವಕಾಶ ಸಿಕ್ಕಿರಲಿಲ್ಲ. ಲಾಕ್‍ಡೌನ್, ಕಠಿಣ ನಿಯಮಗಳ ಕಾರಣಕ್ಕೆ ಈಜುಕೊಳ ಮುಚ್ಚಿದ್ದವು. ಹೀಗಾಗಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಈಜು ಕಲಿಯಲು, ಈಜುಪಟುಗಳು ಭೇಟಿ ನೀಡುತ್ತಿದ್ದಾರೆ’ ಎನ್ನುತ್ತಾರೆ ಈಜು ತರಬೇತುದಾರ ಮಾರುತಿ ತುಮಕೂರು.

‘ನಿರ್ವಹಣೆ ಅವಧಿಯ ಮೂರು ವರ್ಷದ ಪೈಕಿ ಎರಡು ವರ್ಷಗಳ ಕಾಲ ಬಹುತೇಕ ಈಜುಕೊಳ ಸ್ಥಗಿತಗೊಂಡಿತ್ತು. ಅಲ್ಪ ದಿನಗಳ ಕಾಲ ಈಜುಕೊಳ ಆರಂಭಿಸಿದ್ದರೂ ಜನರು ಬರದ ಕಾರಣ ಆದಾಯವೂ ಇರಲಿಲ್ಲ. ಸ್ವಚ್ಛತೆ, ವಿದ್ಯುತ್ ಬಿಲ್ ವೆಚ್ಚ, ಸಿಬ್ಬಂದಿ ವೇತನ ನೀಡಲು ಪರದಾಡುವ ಸ್ಥಿತಿ ಉಂಟಾಗಿತ್ತು’ ಎಂದು ಹಿಂದಿನ ಸಮಸ್ಯೆ ವಿವರಿಸುತ್ತಾರೆ ಈಜುಕೊಳ ಗುತ್ತಿಗೆ ಪಡೆದ ಸಂಸ್ಥೆಯ ಪ್ರಮುಖರೊಬ್ಬರು.

‘ಮಾರ್ಚ್ ಮಧ್ಯಂತರದ ಬಳಿಕದಿಂದ ಈಜಲು ಬರುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಬೇಸಿಗೆ ಶಿಬಿರದ ಮೂಲಕ ಮಕ್ಕಳಿಗೆ ಈಜು ಕಲಿಸಲು ಆದ್ಯತೆ ನೀಡಲಾಗಿದೆ’ ಎಂದರು.

ಈಜು ಕಲಿಕೆಗೆ ಅವಕಾಶ ಸಿಕ್ಕಿದೆ:

‘ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಈಜು ಕಲಿಸುವ ಹಂಬಕ್ಕೆ ಕೋವಿಡ್ ತಣ್ಣೀರು ಎರಚಿತ್ತು. ಆದರೆ ಈ ಬಾರಿ ರಜಾ ಅವಧಿ ಕಡಿಮೆ ಇದ್ದರೂ ಉಳಿದ ಚಟುವಟಿಕೆಗಿಂತ ಈಜು ಕಲಿಸಲು ನಿರ್ಧರಿಸಿದ್ದೇವೆ. ನಗರಸಭೆಯ ಈಜುಕೊಳದಲ್ಲಿ ತರಬೇತಿಯೂ ಸಿಗುತ್ತಿರುವುದು ಅನುಕೂಲವಾಗಿದೆ’ ಎನ್ನುತ್ತಾರೆ ಪಾಲಕ ಆದರ್ಶ ನಗರದ ಮಂಜುನಾಥ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು