ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಕುಗ್ರಾಮದ ಸಾಕ್ಷರತೆ ಹೆಚ್ಚಿಸಿದ ಗುರು

ಪಾಲಕರಿಗೂ ಪಾಠ ಬೋಧಿಸಿದ ಶಿಕ್ಷಕ ಬಾಲಚಂದ್ರ
Last Updated 4 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಶಿರಸಿ: ವಿದ್ಯಾರ್ಥಿಗಳಿಗೆ ಪಾಠ ಮಾಡುವುದಷ್ಟೆ ಕರ್ತವ್ಯ ಎಂದು ಭಾವಿಸಿ ಕೆಲಸ ಮಾಡುವ ಶಿಕ್ಷಕರ ನಡುವೆ ಮುಂಡಗೋಡ ತಾಲ್ಲೂಕಿನ ಬಡ್ಡಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಾಲಚಂದ್ರ ಹೆಗಡೆ ವಿಭಿನ್ನ ಎನಿಸುತ್ತಾರೆ.

ತೀರಾ ಹಿಂದುಳಿದ ಪ್ರದೇಶಗಳಲ್ಲೇ 23 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅವರನ್ನು ‘ಕುಗ್ರಾಮದ ಜನರ ಗುರು’ ಎಂದೇ ಹಲವರು ಗುರುತಿಸುತ್ತಾರೆ. ಮುಂಡಗೋಡ ತಾಲ್ಲೂಕಿನ ಅತಿ ಹಿಂದುಳಿದ ಪ್ರದೇಶಗಳಾದ ಬಸವನಕೊಪ್ಪ, ಚೌಡಳ್ಳಿ, ಬಡ್ಡಿಗೇರಿ ಶಾಲೆಗಳಲ್ಲಿ ಕೆಲಸ ಮಾಡಿ, ಗ್ರಾಮಸ್ಥರಲ್ಲಿ ಸಾಕ್ಷರತೆಯ ಬೀಜ ಬಿತ್ತಿರುವುದು ಇದಕ್ಕೆ ಕಾರಣ.

ಬಾಲಚಂದ್ರ ಹೆಗಡೆ ಮೂಲತಃ ಶಿರಸಿ ತಾಲ್ಲೂಕು ಬಿಸಲಕೊಪ್ಪ ಗ್ರಾಮದವರು. ಅಂಗವಿಕಲ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ, ನೂರಾರು ಮಕ್ಕಳ ಬಾಳಿಗೆ ಬೆಳಕು ನೀಡಿದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

ಬಡ ಮಕ್ಕಳಿಗೆ ಮನೆಯಲ್ಲಿಯೇ ಆಶ್ರಯ:ಗೌಳಿಗರು ಹೆಚ್ಚಿರುವ ಬಡ್ಡಿಗೇರಿ ಶಾಲೆಯಲ್ಲಿ ಆರು ವರ್ಷಗಳಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಶಿಕ್ಷಣ ಒದಗಿಸಲು ಮಕ್ಕಳ ಪಾಲಕರನ್ನು ಪ್ರೇರೇಪಿಸುತ್ತಿದ್ದಾರೆ. ಕಡು ಬಡತನದ ಕುಟುಂಬದ ಮಕ್ಕಳಿದ್ದರೆ ಅವರಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿ ಶಿಕ್ಷಣ ಒದಗಿಸುತ್ತಿದ್ದಾರೆ.

ಬಸವನಕೊಪ್ಪ ಗ್ರಾಮದಲ್ಲಿ 1999–2002ರಲ್ಲಿ ಶಾಲೆ ಅವಧಿ ಮುಗಿದ ನಂತರ ಪಾಲಕರಿಗೆ ಓದು, ಬರಹ ಕಲಿಸಿ ಅಲ್ಲಿನ ಹತ್ತಾರು ಕುಟುಂಬಗಳನ್ನು ಸಾಕ್ಷರರನ್ನಾಗಿಸಿದ್ದರು. ಈ ಕಾರ್ಯ ಈಗಲೂ ಮುಂದುವರೆದಿದ್ದು ಬಡ್ಡಿಗೇರಿಯಲ್ಲಿ ಅಕ್ಷರ ಪಾಠ ಮುಂದುವರೆದಿದೆ. ಕವಿಯಾಗಿ, ಭಾಷಣಕಾರರಾಗಿಯೂ ಅವರು ಹೆಸರು ಮಾಡಿದ್ದಾರೆ.

‘ಬಡತನದಲ್ಲಿ ಬೆಳೆದ ನನಗೆ ಶಿಕ್ಷಕನಾಗಬೇಕು ಎಂಬ ಗುರಿ ಇತ್ತು. ಈಗ ಬಡ ಮಕ್ಕಳು ಶಿಕ್ಷಣ ವಂಚಿತ ಆಗಬಾರದು ಎಂಬುದೇ ಗುರಿಯಾಗಿದೆ. ಅದನ್ನು ಸಾಧಿಸುವುದಷ್ಟೆ ನನ್ನ ಕೆಲಸ’ ಎನ್ನುತ್ತಾರೆ ಬಾಲಚಂದ್ರ ಹೆಗಡೆ.

*

ಪ್ರಶಸ್ತಿಗೆ ಅರ್ಜಿ ಸಲ್ಲಿಸುವಂತೆ ನೀಡುವ ಸಲಹೆಯನ್ನು ನಯವಾಗಿಯೇ ನಿರಾಕರಿಸುತ್ತೇನೆ. ಯಾವ ಮಕ್ಕಳು ಶಿಕ್ಷಣ ವಂಚಿತರಾಗದಂತೆ ನೋಡಿಕೊಳ್ಳುವುದೇ ನನ್ನ ಪಾಲಿಗೆ ದೊಡ್ಡ ಪ್ರಶಸ್ತಿ.
-ಬಾಲಚಂದ್ರ ಹೆಗಡೆ,ಬಡ್ಡಿಗೇರಿ ಶಾಲೆ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT