ಶನಿವಾರ, ಸೆಪ್ಟೆಂಬರ್ 26, 2020
26 °C
ಮರದ ಸುತ್ತಲು ಮಣ್ಣು ತುಂಬುತ್ತಿರುವ ಅರಣ್ಯ ಇಲಾಖೆ

ಬೀಳುವ ಮರಗಳಿಗೆ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ಬೇರು ಸಡಿಲಗೊಂಡು ರಸ್ತೆ ಮೇಲೆ ಮರಗಳು ಬೀಳುತ್ತಿರುವುದರಿಂದ ಎಚ್ಚೆತ್ತ ಅರಣ್ಯ ಇಲಾಖೆ, ಸಡಿಲಗೊಂಡ ಮರಗಳ ಸುತ್ತಲೂ ಮಣ್ಣು ತುಂಬಿಸುವ ಕೆಲಸದಲ್ಲಿ ನಿರತವಾಗಿದೆ.

ಪಟ್ಟಣದ ಅಮ್ಮಾಜಿ ಕೆರೆಯ ಉಬ್ಬು ನೀರು ಹರಿದು ಹೋಗಲು ಈಚೆಗೆ ಚಿಕ್ಕ ನೀರಾವರಿ ಇಲಾಖೆಯವರು ದೊಡ್ಡ ಕಾಲುವೆ ನಿರ್ಮಿಸಿದ್ದರು. ಅವೈಜ್ಞಾನಿಕ ಕಾಮಗಾರಿಯಿಂದ ಟಿಬೆಟನ್ ಕ್ಯಾಂಪ್ ರಸ್ತೆಯ ಮೇಲೆ ಸಣ್ಣ ಗಾಳಿಗೂ ಮರಗಳು ಉರುಳಿ ಬೀಳುತ್ತಿದ್ದವು. ಅಲ್ಲದೇ ಕೆರೆಯ ನೀರು ಸರಾಗವಾಗಿ ಹರಿಯದೇ ರಸ್ತೆ ಮೇಲೆ ಸಂಗ್ರಹಗೊಳ್ಳುತ್ತಿದೆ ಎಂದು ರೈತರು ಪ್ರತಿಭಟನೆ ನಡೆಸಿದ್ದರು.

'ಕಾಲುವೆ ನಿರ್ಮಾಣದಿಂದ ಸುಮಾರು 20ಕ್ಕೂ ಹೆಚ್ಚು ಮರಗಳ ಬೇರು ಸಡಿಲಗೊಂಡಿವೆ. ಈ ಬಗ್ಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗುತ್ತಿದ್ದಂತೆ, ಮರಗಳ ಸುತ್ತಲೂ ಮಣ್ಣನ್ನು ಹಾಕಲಾಗುತ್ತಿದೆ. ಆದರೆ, ಈಗಾಗಲೇ ಬೇರು ಕತ್ತರಿಸಿಕೊಂಡಿವೆ. ಇದರಿಂದ ಮರ ಉಳಿಸಲು ಸಾಧ್ಯವಾಗುವುದಿಲ್ಲ' ಎನ್ನುತ್ತಾರೆ ಸ್ಥಳೀಯ ರೈತರಾದ ಪರುಶುರಾಮ, ಪ್ರವೀಣ, ಉದಯ.

'ಮರಗಳ ಮೂರು ಅಡಿ ಸುತ್ತಳತೆಯಲ್ಲಿ ಯಾವುದೇ ಕಾಮಗಾರಿ ಮಾಡಿರಲಿಲ್ಲ. ಯಾರು ಮಾಡಿದ್ದಾರೋ ಗೊತ್ತಿಲ್ಲ ಎಂದು ಚಿಕ್ಕ ನೀರಾವರಿ ಇಲಾಖೆಯವರು ನೋಟಿಸ್‍ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ ಮರಗಳನ್ನು ರಕ್ಷಿಸಲು ಸುತ್ತಲೂ ಮಣ್ಣು ತುಂಬಲಾಗುತ್ತದೆ. ಕಾಲುವೆ ನೀರು ಎಲ್ಲಿ ಹರಿದು ಹೋಗುತ್ತದೆ ಎನ್ನುವುದು ಮುಖ್ಯವಲ್ಲ. ಆದರೆ ಇಲಾಖೆಯ ಮರಗಳು ಉಳಿಯಬೇಕು' ಎಂದು ಹೆಸರು ಹೇಳಲಿಚ್ಚಿಸದ ಸಿಬ್ಬಂದಿ ಹೇಳಿದರು.

'ಚಿಕ್ಕ ನೀರಾವರಿ, ಲೋಕೋಪಯೋಗಿ ಹಾಗೂ ಅರಣ್ಯ ಇಲಾಖೆಗಳ ಸಮನ್ವಯದ ಕೊರತೆಯಿಂದ, ಪ್ರಯಾಣಿಕರು, ವಾಹನ ಸವಾರರು ಅಲ್ಲದೇ ಸ್ಥಳೀಯ ರೈತರೂ ಆತಂಕ ಎದುರಿಸುವಂತಾಗಿದೆ. ರೈತರಿಗೆ ಅನುಕೂಲವಾಗಬೇಕಿದ್ದ ಕಾಲುವೆ ಕಾಮಗಾರಿ ಮೂರು ಇಲಾಖೆಗಳ ತಿಕ್ಕಾಟಕ್ಕೆ ಕಾರಣವಾಗಿದೆ. ಎರಡು ದಿನಗಳ ಮಳೆಗೆ ಯೋಜನೆಯ ವಿಫಲತೆ ಬಯಲಾಗಿದೆ' ಎಂದು ಪಟ್ಟಣ ಪಂಚಾಯ್ತಿ ಸದಸ್ಯ ರಜಾಖಾನ್ ಪಠಾಣ ದೂರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು