ಗುರುವಾರ , ನವೆಂಬರ್ 26, 2020
19 °C
ಹರೂರಿನಲ್ಲಿ ಚರಂಡಿಗೆ ಸೇರಿದ್ದ ಮಣ್ಣು ತೆರವು ಮಾಡದೇ ಸಮಸ್ಯೆ: ಸ್ಥಳೀಯರ ಆರೋಪ

ಹರೂರು: ರಸ್ತೆಗೆ ಕುತ್ತು ತಂದ ಕೇಬಲ್ ಅಳವಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಮಲ್ಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರೂರು ಸಮೀಪ ರಸ್ತೆ ಬದಿಯಲ್ಲಿ ಅವೈಜ್ಞಾನಿಕವಾಗಿ ಆಪ್ಟಿಕಲ್ ಫೈಬರ್ ಕೇಬಲ್‌ (ಒಎಫ್ಸಿ) ಅಳವಡಿಸಲಾಗಿದೆ. ಇದರಿಂದಲೇ ರಸ್ತೆಯಲ್ಲಿ ಭಾರಿ ಬಿರುಕು ಮೂಡಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೇಬಲ್ ಅಳವಡಿಸಲು ರಸ್ತೆಯಂಚನ್ನು ಸುಮಾರು ಐದು ಅಡಿಗಳಷ್ಟು ಆಳಕ್ಕೆ ಅಗೆಯಲಾಗಿತ್ತು. ಕೇಬಲ್ ಅಳವಡಿಸಿದ ಬಳಿಕ ಮಣ್ಣನ್ನು ಸರಿಯಾಗಿ ಮುಚ್ಚಿಲ್ಲ. ಅಲ್ಲದೇ ಚರಂಡಿಗೆ ಬಿದ್ದ ಮಣ್ಣನ್ನೂ ಸಂಪೂರ್ಣವಾಗಿ ತೆರವು ಮಾಡಲಿಲ್ಲ. ಇದರಿಂದ ಮಳೆ ನೀರು ಮಣ್ಣಿಗೆ ಸೇರಿಕೊಂಡು ಗುಡ್ಡ ಬಿರುಕು ಬಿಟ್ಟಿದೆ ಎನ್ನುವುದು ಸ್ಥಳೀಯರ ವಾದವಾಗಿದೆ.

ಗುಡ್ಡದ ಮೇಲಿಂದ ರಭಸವಾಗಿ ಹರಿಯುವ ಮಳೆ ನೀರು, ಚರಂಡಿಯಲ್ಲಿ ಜಾಗವಿಲ್ಲದೇ ರಸ್ತೆಯ ಮೇಲೆ ಹರಿದಿದೆ. ಇದರಿಂದ ರಸ್ತೆಯಲ್ಲಿ ಡಾಂಬರ್ ಅಲ್ಲಲ್ಲಿ ಕೊಚ್ಚಿಹೋಗಿದೆ ಎನ್ನುತ್ತಾರೆ ಮಲ್ಲಾಪುರ ಗ್ರಾಮ ಪಂಚಾಯ್ತಿಯ ಮಾಜಿ ಸದಸ್ಯ ರಾಜೇಶ ಕೆ.ಗಾಂವಕಾರ.

‘ಈಗ ಯಲ್ಲಾಪುರದಿಂದ ಹರೂರು ಮಾರ್ಗವಾಗಿ ಮಲ್ಲಾಪುರವನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಕೃಷಿ, ಹೈನುಗಾರಿಕೆಗೆ ಇಲ್ಲಿನ ಜನರು ಯಲ್ಲಾಪುರವನ್ನೇ ನೆಚ್ಚಿಕೊಂಡಿದ್ದಾರೆ. ಅಣಶಿ ಮೂಲಕ ಅಥವಾ ಕಾರವಾರ– ಅಂಕೋಲಾ ಮೂಲಕ ಯಲ್ಲಾಪುರಕ್ಕೆ ಸಾಗಲು ನೂರಾರು ಕಿಲೋಮೀಟರ್ ಸುತ್ತಿ ಬಳಸಿ ಸಂಚರಿಸಬೇಕಾಗಿದೆ. ಕೃಷಿ ಉತ್ಪನ್ನ ಮಾರಾಟ ಮಾಡಿ ಸಿಗುವ ಆದಾಯಕ್ಕಿಂತ ವಾಹನದ ಇಂಧನಕ್ಕೇ ಹೆಚ್ಚು ಖರ್ಚು ಮಾಡಬೇಕಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

‘ಬಾರೆ ಕ್ರಾಸ್‌ನಿಂದ ಇಡಗುಂದಿ ಯವರೆಗೆ ರಸ್ತೆ ವಿಸ್ತರಣೆಯಾಗಬೇಕು. ಆಗ ತುರ್ತು ವಿಪತ್ತು ನಿರ್ವಹಣೆಗೆ ಅನುಕೂಲವಾಗಲಿದೆ. ಅಲ್ಲದೇ ಈ ಭಾಗದ ಜನರ ಬಹುದಿನಗಳ ಕನಸು ನನಸಾಗಲಿದೆ. ಆದರೆ, ಇದಕ್ಕೆ ಅರಣ್ಯ ಮತ್ತು ಪರಿಸರ ಸಚಿವಾಲಯದ ಕಾನೂನುಗಳು ಅಡ್ಡಿಯಾಗಿವೆ. ಕೆಲವು ಪರಿಸರವಾದಿಗಳೂ ಈ ರಸ್ತೆಯ ವಿಸ್ತರ ಣೆಗೆ ಅಡ್ಡಿಪಡಿಸುತ್ತಿದ್ದಾರೆ. ಹಾಗಾಗಿ ಸುಮಾರು ಮೂರು ದಶಕ ಗಳಿಂದ ಈ ರಸ್ತೆಯ ಅಭಿವೃದ್ಧಿ ನನೆಗುದಿಗೆ ಬಿದ್ದಿದೆ’ ಎಂದು ಅವರು ಆರೋಪಿಸಿದ್ದಾರೆ.

‘ದುರಸ್ತಿ ಕಾರ್ಯ ಆರಂಭ’: ‘ಹರೂರು ರಸ್ತೆಯ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆಯಂಚಿನಲ್ಲಿರುವ ಚರಂಡಿಯನ್ನು ಸಿದ್ಧಪಡಿಸಿಕೊಂಡು, ಸ್ಥಳೀಯವಾಗಿ ಇರುವ ಪರಿಸ್ಥಿತಿ ನೋಡಿಕೊಂಡು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು’ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸತೀಶ ಜಹಗೀರದಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಆಗಾಗ ಬರುತ್ತಿರುವ ಮಳೆಯೂ ಕಾಮಗಾರಿಗೆ ಅಡ್ಡಿಯಾಗಿದೆ. ಜೊತೆಗೇ, ಈ ರಸ್ತೆಯ ಒಂದು ಬದಿ ಕಲ್ಲಿನ ಗುಡ್ಡವಿದೆ. ಕಾಮಗಾರಿ ಸಂದರ್ಭದಲ್ಲಿ ಎಚ್ಚರಿಕೆ ವಹಿಸದಿದ್ದರೆ ಇಡೀ ಗುಡ್ಡವೇ ಕುಸಿದು ರಸ್ತೆಗೆ ಬೀಳಬಹುದು. ಹಾಗಾಗಿ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು