ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಮುಖ್ಯ ಶಿಕ್ಷಕರಿಗೆ ಮಕ್ಕಳ ಸುರಕ್ಷೆಯ ಹೊಣೆ

ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ ಕುರಿತು ಚರ್ಚೆ
Last Updated 11 ಜೂನ್ 2020, 13:40 IST
ಅಕ್ಷರ ಗಾತ್ರ

ಶಿರಸಿ: ಜೂನ್ 25ರಿಂದ ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಕ್ಕಳಿಗೆ ತೊಂದರೆಯಾಗದಂತೆ ಎಚ್ಚರಿಕೆವಹಿಸಲು ಆಯಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರಿಗೆ ಹೊಣೆವಹಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ ಹೇಳಿದರು.

ಗುರುವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ತಾಲ್ಲೂಕಿನಲ್ಲಿ 3097 ವಿದ್ಯಾರ್ಥಿಗಳು 10 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಬದಲಿ ವ್ಯವಸ್ಥೆಯಾಗಿ ಎರಡು ಹೆಚ್ಚುವರಿ ಕೇಂದ್ರಗಳನ್ನು ಗುರುತಿಸಲಾಗಿದೆ. ವಿದ್ಯಾರ್ಥಿಗಳಿಗೆ ವಿತರಿಸಲು 6200 ಮುಖಗವಸು ಸಂಗ್ರಹಿಸಲಾಗಿದೆ. 200 ವಿದ್ಯಾರ್ಥಿಗಳಿಗೆ ಒಂದರಂತೆ ಒಟ್ಟು 15 ಥರ್ಮಲ್ ಸ್ಕ್ಯಾನರ್ ಬಳಸಿ, ವಿದ್ಯಾರ್ಥಿಗಳ ದೇಹದ ತಾಪಮಾನ ಪರೀಕ್ಷಿಸಲಾಗುತ್ತದೆ. 75 ಸಿಬ್ಬಂದಿ ಪರೀಕ್ಷಾ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಅವರಿಗೆ ವಿಶೇಷ ತರಬೇತಿ ನೀಡಲಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್‌ನವರು ಸ್ವಯಂ ಸೇವಕರಾಗಿ ಕೆಲಸ ಮಾಡಲಿದ್ದಾರೆ ಎಂದರು.

ಶಾಲೆ ಪ್ರಾರಂಭಕ್ಕೆ ಶೇ 90ರಷ್ಟು ಪಾಲಕರ ವಿರೋಧವಿದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ ಮಾತನಾಡಿ, ‘ಕೊರೊನಾ ವೈರಸ್‌ ಬಂದ ಮೇಲೆ ಇಡೀ ಸಮಾಜ ಬದಲಾಗಿದೆ. ಇನ್ನೂ ಕೆಲವು ತಿಂಗಳು ಅದರ ಜೊತೆಗೆ ಬದುಕಬೇಕಾದ ಅನಿವಾರ್ಯತೆ ಇದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಲಾಕ್‌ಡೌನ್ ಇದ್ದ ಕಾರಣ ಮಕ್ಕಳಿಗೆ ಚುಚ್ಚುಮದ್ದು, ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆಯಂತಹ ಕೆಲವು ಕಾರ್ಯಕ್ರಮಗಳ ಪ್ರಗತಿ ಕುಂಠಿತವಾಗಿದೆ. ಬರುವ ದಿನಗಳಲ್ಲಿ ಇವಕ್ಕೆ ಒತ್ತು ನೀಡಲಾಗುವುದು’ ಎಂದರು.

ಕೃಷಿ ಅಧಿಕಾರಿ ಮಧುಕರ ನಾಯ್ಕ ಮಾಹಿತಿ ನೀಡಿ, ‘ತಾಲ್ಲೂಕಿನಲ್ಲಿ ಈವರೆಗೆ 235 ಮಿ.ಮೀ ಮಳೆಯಾಗಿದೆ. ಇದು ವಾಡಿಕೆ ಮಳೆಗಿಂತ ಶೇ 66ರಷ್ಟು ಹೆಚ್ಚಾಗಿದೆ’ ಎಂದರು. ಹೆಸ್ಕಾಂ ಅಧಿಕಾರಿ ಧರ್ಮ ಮಾಹಿತಿ ನೀಡಿ, ‘ಮಳೆಯಿಂದ ತಾಲ್ಲೂಕಿನಲ್ಲಿ 322 ವಿದ್ಯುತ್ ಕಂಬಗಳು, ಆರು ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿತ್ತು’ ಎಂದರು.

ಶಿಥಿಲಗೊಂಡಿದ್ದ ತಾಲ್ಲೂಕು ಪಂಚಾಯ್ತಿ ಕಟ್ಟಡ ಪುನರ್ ನಿರ್ಮಾಣಕ್ಕೆ ಸ್ಥಳೀಯ ಶಾಸಕರ ಪ್ರಯತ್ನದಿಂದ ₹ 2 ಕೋಟಿ ಮಂಜೂರು ಆಗಿದೆ. ಸದ್ಯದಲ್ಲಿ ಇದರ ನೀಲನಕ್ಷೆ ಸಿದ್ಧವಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ ಹೇಳಿದರು.

₹ 96.74 ಕೋಟಿ ಬಜೆಟ್ ಮಂಡನೆ

ಶಿರಸಿ ತಾಲ್ಲೂಕಿನ ವಿವಿಧ ಇಲಾಖೆಗಳ ವೇತನ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗಾಗಿ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಒಟ್ಟು ₹ 96.74 ಕೋಟಿ ಮೊತ್ತದ ಬಜೆಟ್ ಅನ್ನು ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಗುರುವಾರ ಮಂಡಿಸಿದರು.

ಈ ಮೂಲಕ ಕಳೆದ ಸಾಲಿಗಿಂತ ₹ 10.22 ಕೋಟಿ ಹೆಚ್ಚುವರಿ ಅನುದಾನ ದೊರೆತಂತಾಗಿದೆ. ಶಿಕ್ಷಣ ಹಾಗೂ ಆರೋಗ್ಯ ಇಲಾಖೆಗೆ ಹೆಚ್ಚು ಅನುದಾನ ಮೀಸಲಿಡಲಾಗಿದೆ. ಶಿಕ್ಷಣ ಇಲಾಖೆಯ ₹ 74.60 ಕೋಟಿ ಅನುದಾನದಲ್ಲಿ ₹ 74.57 ಕೋಟಿ ಮೊತ್ತವು ಶಿಕ್ಷಕರು, ಸಿಬ್ಬಂದಿ ವೇತನಕ್ಕೆ ನಿಗದಿಯಾಗಿದೆ. ಆರೋಗ್ಯ ಇಲಾಖೆಯು ಒಟ್ಟು ₹ 40.32 ಲಕ್ಷ ಅನುದಾನದಲ್ಲಿ ₹ 28.99 ಲಕ್ಷ ವೇತನಕ್ಕೆ, ₹ 3.53 ಲಕ್ಷ ಹೊರಗುತ್ತಿಗೆ ಸಿಬ್ಬಂದಿ ವೇತನ, ₹ 7.80 ಲಕ್ಷ ಕಚೇರಿ ವೆಚ್ಚ ಹಾಗೂ ಆಯುರ್ವೇದ ಆಸ್ಪತ್ರೆ ಕಟ್ಟಡ ಸುಧಾರಣೆಗೆ ಕಾಯ್ದಿಡಲಾಗಿದೆ ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉನ್ನತಿಗೆ ₹ 1.83 ಕೋಟಿ ಅನುದಾನ, ಅಂಗನವಾಡಿ ಕಟ್ಟಡ ದುರಸ್ತಿಗೆ ₹ 8 ಲಕ್ಷ ಮೀಸಲಿಡಲಾಗಿದೆ. ಬಜೆಟ್‌ನ ಒಟ್ಟು ಮೊತ್ತದ ಬಹುಪಾಲು ವೇತನಕ್ಕೆ ಹಂಚಿಕೆಯಾಗಿದೆ.

ಉಪಾಧ್ಯಕ್ಷ ಚಂದ್ರು ದೇವಾಡಿಗ, ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣನವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT