ಶಿರಸಿ: ಕಾರ್ಮಿಕ ಸಚಿವರಾಗಿ ಎರಡನೆ ಬಾರಿಗೆ ಸಂಪುಟ ಸೇರಿದ ಶಿವರಾಮ ಹೆಬ್ಬಾರ ಅವರನ್ನು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಶಿರಸಿಯ ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.
ಸಂಪುಟ ಸೇರ್ಪಡೆ ಬಳಿಕ ಶಿವರಾಮ ಹೆಬ್ಬಾರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ್ದರು. ಕಾಗೇರಿ ಅವರ ಕಚೇರಿಗೆ ತೆರಳಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು. ಈ ವೇಳೆ ವಿಧಾನಸಭಾ ಅಧ್ಯಕ್ಷ ಹಾಗೂ ಸಚಿವರು ಇಬ್ಬರೇ ಇದ್ದರು.
ಮಾತುಕತೆ ಮುಗಿದ ಬಳಿಕ ಕೊಠಡಿಯಿಂದ ಹೊರಬಂದ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಚಿವರಾಗಿ ನೇಮಕವಾದ ಶಿವರಾಮ ಹೆಬ್ಬಾರ ಅವರ ಜತೆ ನಿಂತು ಫೋಟೊ ತೆಗೆಸಿಕೊಂಡರು. ಅಲ್ಲದೆ ಹಾರ ಹಾಕಿ ಉತ್ತಮವಾಗಿ ಹುದ್ದೆ ಜವಾಬ್ದಾರಿ ನಿಭಾಯಿಸಿ ಎಂದು ಹಾರೈಸಿದರು.
'ಕೋವಿಡ್ ಮೂರನೆ ಅಲೆ ನಿಯಂತ್ರಣ, ಅತಿವೃಷ್ಟಿ ಪರಿಹಾರದ ಸಂಬಂಧ ಚರ್ಚಿಸಿದ್ದೇವೆ. ಇದರ ಹೊರತು ಬೇರೆ ಚರ್ಚೆ ನಡೆದಿಲ್ಲ' ಎಂದು ಕಾಗೇರಿ ಪ್ರತಿಕ್ರಿಯಿಸಿದರು.
ಸಿಎಂ ರೇಸ್ ನಲ್ಲಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಕೊನೆ ಗಳಿಗೆಯಲ್ಲಿ ಸಚಿವ ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದರು. ಆದರೆ ಉತ್ತರ ಕನ್ನಡಕ್ಕೆ ನೀಡಬೇಕಿದ್ದ ಪ್ರಾತಿನಿಧ್ಯ ಅವರ ಬದಲು ಶಿವರಾಮ ಹೆಬ್ಬಾರ ಅವರಿಗೆ ಒಲಿದಿದೆ. ಹೀಗಾಗಿ ಅವರಿಬ್ಬರ ಭೇಟಿ ಜಿಲ್ಲೆಯಲ್ಲಿ ಅಚ್ಚರಿ ಮೂಡಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.