ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟಾ ಮತದಾನದತ್ತ ನಾಗರಿಕರ ಚಿತ್ತ

ಗೋಕರ್ಣದ ಜಲ್ವಂತ ಸಮಸ್ಯೆಗಳಿಗೆ ಜನಪ್ರತಿನಿಧಿಗಳು, ಅಧಿಕಾರಿಗಳ ನಿರುತ್ತರ
Last Updated 27 ಮಾರ್ಚ್ 2019, 13:09 IST
ಅಕ್ಷರ ಗಾತ್ರ

ಗೋಕರ್ಣ: ಪ್ರವಾಸೋದ್ಯಮದಲ್ಲಿ ಪ್ರಸಿದ್ಧವಾಗಿರುವ ಗೋಕರ್ಣ, ಹಲವು ಸಮಸ್ಯೆಗಳಿಂದ ಕಂಗೆಟ್ಟಿದೆ. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಸ್ಪಂದಿಸದಿರುವುದುನಾಗರಿಕರಿಗೆ ಬೇಸರ ತಂದಿದೆ. ಆದ್ದರಿಂದ ಈಚುನಾವಣೆಯಲ್ಲಿ ‘ನೋಟಾ’ ಮತದಾನ ನಡೆಸಲು ಗಂಭೀರ ಚಿಂತನೆ ನಡೆಸಿದ್ದಾರೆ.

ಕ್ಷೇತ್ರಕ್ಕೆ ಅತೀ ಅವಶ್ಯವಾದ ಒಳ ಚರಂಡಿ ವ್ಯವಸ್ಥೆ ಬೇಕಿದ್ದು, ಎರಡು ದಶಕಗಳಿಂದ ಎಲ್ಲಾ ಜನಪ್ರತಿನಿಧಿಗಳಿಗೆ ಅಹವಾಲು ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿಯ ಸಮುದ್ರಕ್ಕೆ ಸೇರುವ ಮುಖ್ಯ ನಾಲಾದಲ್ಲಿ ಕೊಳಚೆ ನೀರು ನಿಂತಿದೆ. ಅದರಿಂದಾಗಿಸುತ್ತಲಿನ ಪರಿಸರ ಗಬ್ಬೆದ್ದು ನಾರುತ್ತಿದೆ.ಅಲ್ಲದೇಸುತ್ತಮುತ್ತಲಿನ 100ಕ್ಕೂ ಹೆಚ್ಚು ಬಾವಿಗಳ ನೀರು ನಿರುಪಯುಕ್ತವಾಗಿದೆ.

‘ಮುಖ್ಯ ದೇವಸ್ಥಾನಗಳ ಬಾವಿಗಳೂ ಉಪಯೋಗಕ್ಕೆ ಬಾರದೇ ದೇವರ ಅಭಿಷೇಕಕ್ಕೂ ಇತರ ಬಾವಿಯನ್ನು ಅವಲಂಬಿಸಬೇಕಾಗಿದೆ. ಈ ಸಮಸ್ಯೆ ಬಹಳ ವರ್ಷಗಳಿಂದ ಇಲ್ಲಿಯ ಜನರನ್ನು ಕಾಡುತ್ತಿದೆ. ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಸಂಸದ ಅನಂತಕುಮಾರ ಹೆಗಡೆ ಸೇರಿದಂತೆ ಹಲವಾರು ಪ್ರಮುಖರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಫಲಿತಾಂಶ ಮಾತ್ರ ಶೂನ್ಯ’ ಎಂದು ಸಾಮಾಜಿಕ ಕಾರ್ಯಕರ್ತ ಸಂತೋಷ ಅಡಿಬೇಸರ ವ್ಯಕ್ತಪಡಿಸುತ್ತಾರೆ.

ಕ್ರಮ ಕೈಗೊಳ್ಳದ ಗ್ರಾಮ ಪಂಚಾಯ್ತಿ: ಗೋಕರ್ಣದ ಹಲವು ಸಮಸ್ಯೆಗಳಿಗೆ ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಉದಾಸೀನವೂಕಾರಣವಾಗಿದೆ. ಇಲ್ಲಿಯ ಮೂಲ ನಿವಾಸಿಗಳಿಗೆ ಒಂದು ನಿಯಮ, ಪರ ಊರಿಂದ ಬಂದವರಿಗೆ ಮತ್ತೊಂದು ಎಂಬಂತೆ ವರ್ತಿಸುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಗಟಾರದ ಮುಂದೆ ಬಂದ ಅಂಗಡಿಗಳನ್ನೆಲ್ಲಾ ತೆರವುಗೊಳಿಸಿದ್ದು, ಆ ಕಾರ್ಯ ಈಗ ಅರ್ಧಕ್ಕೆ ಬಿಟ್ಟಿದ್ದಾರೆ.

ಪರ ಊರಿನಿಂದ ಬಂದು ಇಲ್ಲಿ ವ್ಯಾಪಾರ ನಡೆಸುತ್ತಿರುವ ಮಸಾಲಾಅಂಗಡಿ, ಬಟ್ಟೆ ಅಂಗಡಿಗಳಿಗೆ ತೆರವು ಕಾರ್ಯಾಚರಣೆಯಿಂದ ವಿನಾಯಿತಿ ನೀಡಲಾಗಿದೆ. ಏಕೆಂದರೆ ಅವರು ಪ್ರತಿ ವರ್ಷ ಪಂಚಾಯ್ತಿಗೆ ಹಣ ಭರಿಸುತ್ತಾರೆ ಎಂಬ ಉತ್ತರ ಅಧಿಕಾರಿಗಳಿಂದ ಕೇಳಿ ಬರುತ್ತಿದೆ ಎಂಬುದು ಹೆಸರು ಹೇಳಲು ಇಚ್ಛಿಸದ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರ ದೂರಾಗಿದೆ.

ಈ ಬಗ್ಗೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ನಾಯಕ ಅವರನ್ನು ಕೇಳಿದರೆ, ‘ತೆರವು ಕಾರ್ಯಾಚರಣೆ ನಡೆಸುತ್ತಿರುವಾಗ ಶಿವರಾತ್ರಿ ಬಂತು. ಚುನಾವಣೆ ಘೋಷಣೆಯಾಯಿತು.ಹೀಗಾಗಿ ಸ್ವಲ್ಪ ದಿನ ನಿಲ್ಲಿಸಿದ್ದೇವೆ. ಕೆಲವೇ ದಿನಗಳಲ್ಲಿ ಮತ್ತೆ ಕಾರ್ಯಾಚರಣೆ ನಡೆಸುತ್ತೇವೆ’ ಎಂದು ಹೇಳುತ್ತಾರೆ.

ಪರ ಊರಿನಿಂದ ಬಂದು ಇಲ್ಲಿ ಕಟ್ಟಡ ನಿರ್ಮಿಸಿ ರೆಸಾರ್ಟ್ ನಡೆಸುವವರ ಮೇಲೂ ಸ್ಥಳೀಯ ಗ್ರಾಮ ಪಂಚಾಯ್ತಿಗೆ ಹಿಡಿತವಿಲ್ಲ.ಪ್ರವಾಸೋದ್ಯಮದ ಹೆಸರಿನಲ್ಲಿ ಪ್ರತಿ ವರ್ಷ ಸ್ಥಳೀಯ ಆಡಳಿತಕ್ಕೆ ಹಣ ಸಂದಾಯ ಆಗುತ್ತದೆ. ಹಾಗಾಗಿ ಹೊರಗಿನಿಂದ ಬಂದು ಇಲ್ಲಿ ಉದ್ಯೋಗ ನಡೆಸುವವರಿಗೆ ಯಾವುದೇ ಕಾನೂನು ಅನ್ವಯಿಸುವುದಿಲ್ಲ ಎಂಬಆರೋಪ ಅವರದ್ದಾಗಿದೆ.

ಈ ಎಲ್ಲ ಸಂಗತಿಗಳಿಂದ ಬೇಸತ್ತ ನಾಗರಿಕರು ಚುನಾವಣೆಯಲ್ಲಿ ‘ನೋಟಾ’ ಮತದಾನದತ್ತ ಒಲವು ತೋರಿಸುವ ಬಗ್ಗೆ ಗ್ರಾಮದಲ್ಲಿ ಚರ್ಚೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT