ಭಾನುವಾರ, ಸೆಪ್ಟೆಂಬರ್ 19, 2021
29 °C
ನಟರಾಜ್ ಮುರುಗನ್‌ಗೆ ‘ಅತ್ಯುತ್ತಮ ಪೌರಕಾರ್ಮಿಕ’ ಪ್ರಶಸ್ತಿಯ ಗರಿ

ಕಸ ವಿಲೇವಾರಿ: ಕುಮಟಾಕ್ಕೆ ರಾಜ್ಯ ಪ್ರಶಸ್ತಿ

ಎಂ.ಜಿ.ನಾಯ್ಕ Updated:

ಅಕ್ಷರ ಗಾತ್ರ : | |

Prajavani

ಕುಮಟಾ: ಅವರದ್ದು ನಿತ್ಯವೂ ಪಟ್ಟಣದ ಕಸ ವಿಲೇವಾರಿ ಮಾಡುವ ಕಾಯಕ. ಅದನ್ನು ನಿಷ್ಠೆಯಿಂದ ಮಾಡುತ್ತ ಜನರ ಪ್ರೀತಿ, ಗೌರವಕ್ಕೆ ಪಾತ್ರರಾದರು. ಅವರ ಸೇವೆಯನ್ನು ಪೌರಾಡಳಿತ ಇಲಾಖೆಯೂ ಗುರುತಿಸಿ ರಾಜ್ಯಮಟ್ಟದ ‘ಅತ್ಯುತ್ತಮ ಪೌರ ಕಾರ್ಮಿಕ’ ಪ್ರಶಸ್ತಿ ಪ್ರದಾನ ಮಾಡಿತು.

ಇಂತಹ ಅಪರೂಪದ ಸಾಧನೆಯಿಂದ ನಟರಾಜ್ ಮುರುಗನ್ ಈಗ ಕುಮಟಾದಲ್ಲಿ ಮನೆ ಮಾತಾಗಿದ್ದಾರೆ. ಅವರು ಪಟ್ಟಣದ ವಿವೇಕನಗರ, ಗಾಂಧಿನಗರ, ಸಿದ್ದನಬಾವಿ ಬಡಾವಣೆಗೆ ನಿತ್ಯ ಬೆಳಿಗ್ಗೆ ಕಸ ತುಂಬುವ ಗಾಡಿ ಒಯ್ಯುತ್ತಾರೆ. ಹಸಿ ಕಸ, ಒಣ ಕಸವನ್ನು ಹೇಗೆ ವಿಂಗಡಣೆ ಮಾಡಬೇಕು ಎಂದು ಜನರಿಗೆ ತೋರಿಸಿಕೊಟ್ಟಿದ್ದಾರೆ. ಮನೆ ಮನೆಗೆ ಕಸ ಸಂಗ್ರಹಿಸಲು ಹೋದಾಗ ಬುಟ್ಟಿಯಲ್ಲಿ ತರುವ ಕಸವನ್ನು ಜನರಿಂದಲೇ ವಿಂಗಡಣೆ ಮಾಡಿಸಿ ಗಾಡಿಯಲ್ಲಿ ಹಾಕಿಸಿಕೊಳ್ಳುತ್ತಾರೆ. ಮನೆಯ ಅಕ್ಕಪಕ್ಕ ಬಿದ್ದ ಕಸವನ್ನೂ ಅವರೇ ಆರಿಸಿಕೊಂಡು ಒಯ್ಯುತ್ತಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರಾದ ಅವರು, 1997ರಲ್ಲಿ ದಿನಗೂಲಿ ನೌಕರರಾಗಿ ಕುಮಟಾ ಪುರಸಭೆ ಸೇರಿದ್ದರು. 2015ರಲ್ಲಿಯೇ ಕಸ ವಿಲೇವಾರಿ ಬಗ್ಗೆ ನಾಗರಿಕರಿಗೆ ಜಾಗೃತಿ ಕಾರ್ಯಕ್ರಮ ಆರಂಭವಾಯಿತು. ಆಗ ಪುರಸಭೆಯ ನಾಲ್ಕು ಲಗೇಜು ರಿಕ್ಷಾಗಳಿಂದ ಕಸ ಸಂಗ್ರಹಿಸಲಾಗುತ್ತಿತ್ತು. ಕಸವನ್ನು ಕಂಡ ಕಂಡಲ್ಲಿ ಎಸೆಯುತ್ತಿದ್ದ ಜನರ ಮನವೊಲಿಸುವುದು ಕಷ್ಟಕರವಾಗಿತ್ತು.

ಆಗ ಕುಮಟಾ ಪುರಸಭೆಗೆ ಪರಿಸರ ಎಂಜಿನಿಯರ್ ಆಗಿ ವರ್ಗವಾಗಿ ಬಂದ ನಾಗೇಂದ್ರ ಗಾಂವ್ಕರ್ ಇದನ್ನು ಸವಾಲಾಗಿ ಸ್ವೀಕರಿಸಿದರು. ಪೌರ ಕಾರ್ಮಿಕರ ತಂಡ ಕಟ್ಟಿ ಕೆಲಸ ಮಾಡಿದರು. ಕಸವನ್ನು ಗೊಬ್ಬರವಾಗಿಸಿ ಮಾರಾಟ ಮಾಡಿ ಪುರಸಭೆಗೆ ಆದಾಯ ತಂದುಕೊಟ್ಟರು. ಪೌರ ಕಾರ್ಮಿಕರಿಗೆ ಭವಿಷ್ಯ ನಿಧಿ, ಇ.ಎಸ್.ಐ ಸೌಲಭ್ಯ ಎಲ್ಲ ದೊರೆಯುವಂತೆ ಮಾಡಿದರು.

‘ಈಗ ಕಸದ ಗಾಡಿಯನ್ನು ಮನೆ ಮನೆಗೆ ಒಯ್ದಾಗ ಜನರು ನಮ್ಮನ್ನು ಬಂಧುಗಳಂತೆ ಕಾಣುತ್ತಾರೆ. ತಿಂಡಿ, ಚಹಾ ನೀಡಿ ಉಪಚರಿಸುತ್ತಾರೆ. ಇಲ್ಲಾ ಸಾರ್ ಕೆಲಸ ಇದೆ ಎಂದರೆ, ನಮ್ಮ ಗಾಡಿಯ ಬಳಿಯೇ ಚಹ, ತಿಂಡಿ ತಂದುಕೊಟ್ಟು ಆತ್ಮೀಯತೆ ತೋರಿಸುತ್ತಾರೆ. ಇದು ನಾವು ಕೆಲಸ ಮಾಡಲು ಹುಮ್ಮಸ್ಸು ನೀಡುತ್ತಿದೆ’ ಎಂದು ನಟರಾಜ್ ಮುರುಗನ್ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.

‘ಕುಮಟಾದಿಂದ ಸಾಧ್ಯವಾಯಿತು’: ಕುಮಟಾ ಪುರಸಭೆಯು ಕಸ ವಿಲೇವಾರಿಯಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಇಲ್ಲಿ ಐದು ವರ್ಷ ಕೆಲಸ ಮಾಡಿದ್ದ ಪರಿಸರ ಎಂಜಿನಿಯರ್ ನಾಗೇಂದ್ರ ಗಾಂವ್ಕರ್ ಕೂಡ ಕಾರಣ.

ಇಲ್ಲಿ ಮುಖ್ಯಾಧಿಕಾರಿ ಆಗಿದ್ದಾಗ ಕಸ ಸಾಗಣೆಗೆ 10 ಸುಸಜ್ಜಿತ ವಾಹನಗಳನ್ನು ತರಿಸಿದರು. ಆರು ತಿಂಗಳ ಹಿಂದೆ ಮಂಡ್ಯ ಜಿಲ್ಲೆಯ ಮದ್ದೂರು ಪುರಸಭೆಗೆ ವರ್ಗವಾಗಿರುವ ನಾಗೇಂದ್ರ ಗಾಂವ್ಕರ್ ಅವರಿಗೂ ‘ರಾಜ್ಯಮಟ್ಟದ ಅತ್ಯುತ್ತಮ ಪರಿಸರ ಎಂಜಿನಿಯರ್’ ಪ್ರಶಸ್ತಿ ಪ್ರದಾನವಾಗಿದೆ.

‘ನನಗೆ ಪ್ರಶಸ್ತಿ ಬರಲು ಕುಮಟಾದಲ್ಲಿ ಮಾಡಿದ ಐದು ವರ್ಷಗಳ ಕೆಲಸ ಕಾರಣ. ಪ್ಲಾಸ್ಟಿಕ್ ಚೀಲ ಬಳಕೆ ವಿರುದ್ಧ ಕ್ರಮ, ಕಸ ವಿಲೇವಾರಿ ಮಾಡದ ಮಾಡದ ಉದ್ಯಮಿಗಳಿಗೆ ದಂಡ, ಪುರಸಭೆ ನೌಕರರಿಗೆ ತರಬೇತಿ, ಆರೋಗ್ಯ ತಪಾಸಣೆ, ತ್ಯಾಜ್ಯವನ್ನು ಗೊಬ್ಬರವಾಗಿಸುವ ಘಟಕವನ್ನು ಅಲ್ಲಿ ಸ್ಥಾಪಿಸಲು ಸಾಧ್ಯವಾಯಿತು. ಕುಮಟಾ ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಸುರೇಶ ಹಾಗೂ ಸಿಬ್ಬಂದಿ ಆಡಳಿತ ಮಂಡಳಿ ಸದಸ್ಯರು ಬೆನ್ನೆಲುಬಾಗಿ ನಿಂತಿದ್ದರು’ ಎಂದು ಅವರು ನೆನಪಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು