ಮಂಗಳವಾರ, ಜೂನ್ 2, 2020
27 °C

ಕಾರವಾರ: 'ಗರೀಬ್ ಕಲ್ಯಾಣ' ಯೋಜನೆಯ ಹಣ ವಾಪಸ್ ಹೋಗುವುದಿಲ್ಲ, ಅಧಿಕಾರಿಗಳ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಗರೀಬ್ ಕಲ್ಯಾಣ’ ಯೋಜನೆಯಡಿ ಮಹಿಳೆಯರ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರದ ನೀಡುತ್ತಿರುವ ₹ 500 ಅನ್ನು ಕೂಡಲೇ ಪಡೆದುಕೊಳ್ಳದಿದ್ದರೆ ವಾಪಸಾಗುತ್ತದೆ ಎಂಬ ಸುಳ್ಳು ಸಂದೇಶವೊಂದು, ಜಿಲ್ಲೆಯ ಫಲಾನುಭವಿಗಳನ್ನು ಶುಕ್ರವಾರ ಗೊಂದಲಕ್ಕೆ ದೂಡಿತ್ತು. ಹಣ ಪಡೆದುಕೊಳ್ಳಲು ನೂರಾರು ಮಹಿಳೆಯರು ಬ್ಯಾಂಕ್‌ನತ್ತ ದೌಡಾಯಿಸಿದ್ದರು.

ವಾಟ್ಸ್‌ಆ್ಯಪ್‌ನಲ್ಲಿ ಬಂದ ಸಂದೇಶದಲ್ಲಿ ಈ ತಿಂಗಳು ಹಣ ಪಡೆದುಕೊಳ್ಳದಿದ್ದರೆ ಮುಂದಿನ ತಿಂಗಳೂ ಸಿಗುವುದಿಲ್ಲ ಎಂದೂ ಬರೆಯಲಾಗಿತ್ತು. ಇದನ್ನು ನಂಬಿದ ಗ್ರಾಮೀಣ ಭಾಗದ ನೂರಾರು ಮಹಿಳೆಯರು ತಮ್ಮ ಬ್ಯಾಂಕ್ ಶಾಖೆಗಳ ಮುಂದೆ ಜಮಾಯಿಸಿದ್ದರು. ಅಂಕೋಲಾ ತಾಲ್ಲೂಕಿನ ಅವರ್ಸಾ, ದಾಂಡೇಲಿ, ಕಾತೂರ ಮುಂತಾದೆಡೆ ಫಲಾನುಭವಿಗಳು ಬೆಳಿಗ್ಗೆಯೇ ಸೇರಿದ್ದರು.

ಈ ಬಗ್ಗೆ ಸ್ಪಷ್ಟಪಡಿಸಿದ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿ.ಎಂ.ಪಿಂಜರ್, ‘ಇದೊಂದು ಸುಳ್ಳು ಸುದ್ದಿ. ಲಾಕ್‌ಡೌನ್ ಅವಧಿ ಮುಗಿದ ಬಳಿಕವೂ ಹಣವನ್ನು ಪಡೆದುಕೊಳ್ಳಲು ಅವಕಾಶವಿದೆ. ಹಣಕಾಸಿನ ತೀರಾ ಅಗತ್ಯ ಇರುವವರಿಗೆ ಮಾತ್ರ ಹಣ ನೀಡುವಂತೆ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಲಾಗಿದೆ. ಲಾಕ್‌ಡೌನ್ ಇರುವಾಗ ಜನರು ಗುಂಪುಗೂಡುವುದು ಸರಿಯಲ್ಲ’ ಎಂದು ಹೇಳಿದರು.

‘ಬ್ಯಾಂಕ್ ಖಾತೆಗಳಿಗೆ ಜಮೆಯಾದ ಹಣ ಯಾವುದೇ ಕಾರಣಕ್ಕೂ ವಾಪಸ್ ಹೋಗುವುದಿಲ್ಲ. ಗ್ರಾಹಕರ ಯಾವುದೇ ಸಾಲದ ಖಾತೆಗೂ ಆ ಹಣವನ್ನು ಜಮೆ ಮಾಡಿಕೊಳ್ಳುವುದಿಲ್ಲ. ಲಾಕ್‌ಡೌನ್ ಘೋಷಣೆಯಾದ ಬಳಿಕ ಎಲ್ಲ ಬ್ಯಾಂಕ್‌ಗಳೂ ಸ್ವಯಂ ಚಾಲಿತ ಸಾಲ ಮರಪೂರಣ ವ್ಯವಸ್ಥೆ ಹಾಗೂ ಕನಿಷ್ಠ ಠೇವಣಿ ಶುಲ್ಕ ನಿಯಮಗಳನ್ನು ರದ್ದು ಮಾಡಿವೆ. ಕೆ.ವೈ.ಸಿ ಮಾಹಿತಿ ಬಾಕಿಯಿದ್ದರೂ ಈಗ ₹ 500 ಕೊಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶಿಸಿದೆ. ವಾಟ್ಸ್‌ಆ್ಯ‍ಪ್‌ನಲ್ಲಿ ಬಂದ ಸುಳ್ಳು ಸುದ್ದಿಯನ್ನು ನಂಬಬಾರದು. ತೀರಾ ಹಣಕಾಸಿನ ತೊಂದರೆಯಿದ್ದಾಗ ಈ ಹಣವನ್ನು ಬಳಸಿಕೊಳ್ಳುವುದು ಸೂಕ್ತ’ ಎಂದು ಸಲಹೆ ನೀಡಿದರು.

ಅಂಕಿ ಅಂಶ

2,37,411: ನಮ್ಮ ಜಿಲ್ಲೆಯಲ್ಲಿ ಫಲಾನುಭವಿಗಳು

₹ 11.87 ಕೋಟಿ: ಮಂಜೂರಾದ ಒಟ್ಟು ಮೊತ್ತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು