ಭಾನುವಾರ, ಜೂನ್ 26, 2022
22 °C

ಕಾರವಾರದಲ್ಲಿ ಒಂದು ನಿಮಿಷ ‘ಶೂನ್ಯ ನೆರಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದಲ್ಲಿ ಶನಿವಾರ ಮಧ್ಯಾಹ್ನ 12.31ಕ್ಕೆ ‘ಶೂನ್ಯ ನೆರಳು’ ಸನ್ನಿವೇಶ ಏರ್ಪಟ್ಟಿತು. ಸೂರ್ಯನು ಶಿರೋಬಿಂದುವಿನ ಮೇಲೆ ಹಾದು ಹೋಗಿದ್ದರಿಂದ ಸುಮಾರು ಒಂದು ನಿಮಿಷದ ಅವಧಿಗೆ ನೆರಳು ಕನಿಷ್ಠ ಪ್ರಮಾಣದಲ್ಲಿತ್ತು.

ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಈ ವಿದ್ಯಮಾನವನ್ನು ವೀಕ್ಷಿಸಲಾಯಿತು. ಸೂರ್ಯ ಪ್ರತಿ ದಿನದ ಮಧ್ಯಾಹ್ನ ಶಿರೋಬಿಂದುವಿನ ಮೇಲೆ ಇರುವುದಿಲ್ಲ. ಯಾವುದೇ ಮಧ್ಯಾಹ್ನ ನೆರಳನ್ನು ನೋಡಿ ಇದನ್ನು ಪರಿಶೀಲಿಸಬಹುದು. ಸೂರ್ಯ ಗರಿಷ್ಠ ಎತ್ತರ ತಲುಪಿದಾಗ ಅದು ಶಿರೋಬಿಂದುವಿನ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಇರುತ್ತದೆ. ಭೂಮಿಯ ಆವರ್ತನೆಯ ಅಕ್ಷವು ಅದರ ಕಕ್ಷಾತಲಕ್ಕೆ 23.5 ಡಿಗ್ರಿ ಓರೆಯಾಗಿರುವುದೇ ಇದಕ್ಕೆ ಕಾರಣ ಎಂದು ಕೇಂದ್ರದ ಅಧಿಕಾರಿಗಳು ವಿವರಿಸಿದ್ದಾರೆ.

‘ಋತುಮಾನಗಳಿಗೂ ಇದೇ ಕಾರಣ. ಡಿ.21ರಂದು ದಕ್ಷಿಣದ ಗರಿಷ್ಠವನ್ನು ತಲುಪಿ ಉತ್ತರಕ್ಕೆ ಹೊರಳುವುದರಿಂದ ಆ ಘಟನೆಗೆ ಉತ್ತರಾಯಣ ಎಂದು ಕರೆಯಲಾಗುತ್ತದೆ. ಆ ಮಧ್ಯಾಹ್ನದ ನೆರಳನ್ನು ಇತರ ದಿನಗಳ ಮಧ್ಯಾಹ್ನದ ನೆರಳಿಗೆ ಹೋಲಿಸಿದರೆ ಗರಿಷ್ಠವಾಗಿರುತ್ತದೆ. ಜೂನ್ 21ರಂದು ಉತ್ತರದ ಗರಿಷ್ಠ ತಲುಪಿ ದಕ್ಷಿಣಕ್ಕೆ ಹೊರಳುವುದರಿಂದ ಆ ಘಟನೆಗೆ ದಕ್ಷಿಣಾಯನ ಎಂದು ಕರೆಯಲಾಗುತ್ತದೆ. ಆ ಮಧ್ಯಾಹ್ನದ ನೆರಳು ಕನಿಷ್ಠವಾಗಿರುತ್ತದೆ’ ಎಂದು ತಿಳಿಸಿದ್ದಾರೆ.

‘ಕರ್ಕಾಟಕ ಹಾಗೂ ಮಕರ ಸಂಕ್ರಾಂತಿ ವೃತ್ತಗಳ ನಡುವೆ ಇರುವ ಸ್ಥಳಗಳಲ್ಲಿ ವರ್ಷದ ಎರಡು ನಿರ್ದಿಷ್ಟ ದಿನಗಳಲ್ಲಿ ಸೂರ್ಯ ಶಿರೋಬಿಂದುವಿನ ಮೇಲೆ ಹಾದು ಹೋಗುತ್ತದೆ. ಆ ದಿನಗಳಲ್ಲಿ ಮಧ್ಯಾಹ್ನದ ನೆರಳು ಇರುವುದಿಲ್ಲ. ಇದೇ ಶೂನ್ಯ ನೆರಳಿನ ದಿನದ ತತ್ವ’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು