ಕಾರವಾರ: ಜೊಯಿಡಾ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಕಾಳಿನದಿಯ ನೀರಿನ ಹರಿವು ಹೆಚ್ಚಳವಾಗಿದೆ. ಇದರಿಂದ ಕಾಳಿನದಿಯಲ್ಲಿರುವ ಜಲಾಶಯಗಳಲ್ಲಿ ನೀರು ಸಂಗ್ರಹಮಟ್ಟವೂ ಏರಿಕೆಯಾಗಿದ್ದು, ಶುಕ್ರವಾರ ಸಂಜೆ ತಾಲ್ಲೂಕಿನ ಕದ್ರಾ ಜಲಾಶಯದಿಂದ ಐದು ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಯಿತು.
ಕದ್ರಾ ಜಲಾಶಯದಲ್ಲಿ ಗರಿಷ್ಠ 34 ಮೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ಇದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ 31 ಮೀ. ನೀರು ಸಂಗ್ರಹಕ್ಕೆ ಮಾತ್ರ ಸೂಚಿಸಿದೆ. ಶುಕ್ರವಾರ ಸಂಜೆಯ ವೇಳೆಗೆ 30.93 ಮೀಟರ್ ನಷ್ಟು ನೀರು ಸಂಗ್ರಹವಾಗಿತ್ತು. ಹೀಗಾಗಿ ಮುನ್ನಚ್ಚರಿಕೆ ಕ್ರಮವಾಗಿ ಜಲಾಶಯದ ಎರಡು ಕ್ರಸ್ಟ್ ಗೇಟ್ ಮೂಲಕ 5 ಸಾವಿರ ಕ್ಯೂಸೆಕ್ ನೀರು ಬಿಡಲಾಯಿತು.
ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಮಳೆ ಸಾಧಾರಣ ಪ್ರಮಾಣದಲ್ಲಿ ಸುರಿಯುತ್ತಿದೆ. ಕಾನೇರಿ ನದಿ ಉಕ್ಕೇರಿದ್ದರಿಂದ ಜೊಯಿಡಾ ತಾಲ್ಲೂಕಿನ ಕುಂಡಲ ಸೇತುವೆ ಮುಳುಗಡೆಯಾಗಿತ್ತು. ಕರಾವಳಿ ಭಾಗದಲ್ಲಿ ಆಗಾಗ ರಭಸದ ಗಾಳಿಯೊಂದಿಗೆ ಮಳೆ ಸುರಿದರೆ, ಹಳಿಯಾಳ, ದಾಂಡೇಲಿ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.