ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ಲಂಚ ಪಡೆದ ನೌಕರನಿಗೆ ಒಂದೂವರೆ ವರ್ಷ ಜೈಲು

Published 9 ಜುಲೈ 2024, 13:53 IST
Last Updated 9 ಜುಲೈ 2024, 13:53 IST
ಅಕ್ಷರ ಗಾತ್ರ

ಕಾರವಾರ: ಮನೆಯ ಉತಾರು ಪತ್ರ ವಿತರಿಸಲು ಲಂಚ ಪಡೆದಿದ್ದ ಯಲ್ಲಾಪುರ ಪಟ್ಟಣ ಪಂಚಾಯಿತಿಯ ತೆರಿಗೆ ವಸೂಲಿ ಸಹಾಯಕ ಪ್ರತಾಪ ಸಿಂಗ್ ಭವಾನಿಸಿಂಗ್ ರಜಪೂತ್ ಎಂಬಾತನಿಗೆ ಒಂದೂವರೆ ವರ್ಷ ಜೈಲು ಮತ್ತು ₹2 ಸಾವಿರ ದಂಡ ವಿಧಿಸಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಯಲ್ಲಾಪುರ ಪಟ್ಟಣದ ಉದ್ಯಮ ನಗರ ನಿವಾಸಿ ಮಂಜುನಾಥ ಹೆಗಡೆ ಎಂಬುವವರು ತಮ್ಮ ತಾಯಿ ಹೆಸರಿನಲ್ಲಿದ್ದ ಮನೆಗೆ ಹೊಸದಾಗಿ ವಿದ್ಯುತ್ ಸಂಪರ್ಕ ಅಳವಡಿಸಿಕೊಳ್ಳುವುದಕ್ಕಾಗಿ ಹೆಸ್ಕಾಂಗೆ ಅರ್ಜಿ ಸಲ್ಲಿಸುವ ಸಲುವಾಗಿ ಅಗತ್ಯವಿರುವ ಉತಾರು ಪತ್ರಕ್ಕೆ ಪಟ್ಟಣ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು.

ಉತಾರು ಪತ್ರ ಒದಗಿಸಲು ತೆರಿಗೆ ವಸೂಲಿ ಸಹಾಯಕ ಪ್ರಕಾಶ ನಾಯ್ಕ ಎಂಬುವವರು ₹6 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ₹4 ಸಾವಿರವನ್ನು ಇನ್ನೋರ್ವ ಸಿಬ್ಬಂದಿ ಪ್ರತಾಪ ಸಿಂಗ್ ಭವಾನಿಸಿಂಗ್ ರಜಪೂತ್‍ಗೆ ನೀಡಲು ಸೂಚಿಸಿದ್ದರು. ಲಂಚ ಪಡೆಯುವ ವೇಳೆ ಪ್ರತಾಪ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ ಅವರು ಶಿಕ್ಷೆ ಪ್ರಮಾಣ ಪ್ರಕಟಿಸಿದರು. ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಆಭಿಯೋಜಕ ಲಕ್ಷ್ಮೀಕಾಂತ ಎಂ.ಪ್ರಭು ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT