ನಾಲ್ಕು ದಶಕಗಳಿಂದ ನಿರಂತರವಾಗಿ ಹಲವು ಯೋಜನೆಗಳ ಹೇರಿಕೆಗೆ ಒಳಗಾಗಿರುವ ಉತ್ತರ ಕನ್ನಡ ಜಿಲ್ಲೆಯ ಜನರು ಈಗ ಉದ್ದೇಶಿತ ಬೇಡ್ತಿ–ವರದಾ ಮತ್ತು ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಗಳು ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಪ್ರಬಲ ಧ್ವನಿ ಎತ್ತಿದ್ದಾರೆ. ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಯೋಜನೆ ವ್ಯಾಪ್ತಿ ಪ್ರದೇಶಗಳಲ್ಲಿ ಸರಣಿ ಪ್ರತಿಭಟನೆಗಳು ನಡೆದಿವೆ. ಈಗ ಮತ್ತೊಂದು ಸುತ್ತಿನ ತೀವ್ರ ಹೋರಾಟಕ್ಕೆ ಜನರು ಸಿದ್ಧತೆ ನಡೆಸುತ್ತಿದ್ದಾರೆ
ನದಿ ಜೋಡಣೆ, ಪಂಪ್ಡ್ ಸ್ಟೋರೇಜ್, ವಾಣಿಜ್ಯ ಬಂದರು ಯೋಜನೆಗಳ ಕಾರ್ಯಾನುಷ್ಠಾನದ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುವ ಅಗತ್ಯವಿದೆ. ಯೋಜನೆ ವಿರೋಧಕ್ಕೆ ಸೂಕ್ತ ದತ್ತಾಂಶ ಸಂಗ್ರಹಿಸಲಾಗಿದೆ
ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಸ್ವರ್ಣವಲ್ಲೀ ಮಠ, ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷ
ಉತ್ತರ ಕನ್ನಡ ಜಿಲ್ಲೆಯ ಪರಿಸರ ಧಾರಣಾ ಸಾಮರ್ಥ್ಯ ಮುಗಿದ ಬಗ್ಗೆ ಈ ಹಿಂದೆಯೇ ಸಮಗ್ರ ವರದಿ ಸರ್ಕಾರಕ್ಕೆ ಸಲ್ಲಿಸಿದ್ದರೂ ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗುತ್ತಿರುವುದು ಗೊಂದಲ ಮೂಡಿಸುತ್ತಿದೆ
ಅನಂತ ಹೆಗಡೆ ಅಶೀಸರ, ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ
ಬೇಡ್ತಿ–ವರದಾ ನದಿ ಜೋಡಿಸುವ ಯೋಜನೆ ಪ್ರಸ್ತಾವ ಮೂರು ದಶಕಗಳಿಂದ ಇದೆ. ನೀರಾವರಿ ಬಳಕೆಗೆ ಯೋಜನೆ ಜಾರಿ ಅಗತ್ಯವಿದೆ. ಈಗ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ
ಬಸವರಾಜ ಬೊಮ್ಮಾಯಿ, ಹಾವೇರಿ ಸಂಸದ
ಉತ್ತರ ಕನ್ನಡ ಜಿಲ್ಲೆಯ ಪರಿಸರ ಧಾರಣಾ ಸಾಮರ್ಥ್ಯವನ್ನು ಅಧ್ಯಯನ ಮಾಡದೆ ಯಾವುದೇ ಬೃಹತ್ ಯೋಜನೆ ಜಾರಿಗೆ ತರುವ ಕೆಲಸ ಆಗಬಾರದು. ಈ ಬಗ್ಗೆ ರಾಜ್ಯ ಸರ್ಕಾರ ಜವಾಬ್ದಾರಿ ನಿಭಾಯಿಸಬೇಕು