ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಮಟಾ | ಕುಸಿದ ಶಾಲೆ ಕಟ್ಟಡ: ಆಸ್ಪತ್ರೆಯಲ್ಲಿ ತರಗತಿ

ಕಡಿದಾದ ಏರು ರಸ್ತೆಯಲ್ಲಿ ಸಾಗುವ ಶಿಕ್ಷಕ
Published 4 ಜೂನ್ 2024, 4:17 IST
Last Updated 4 ಜೂನ್ 2024, 4:17 IST
ಅಕ್ಷರ ಗಾತ್ರ

ಕುಮಟಾ (ಉತ್ತರ ಕನ್ನಡ ಜಿಲ್ಲೆ): ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮೇದಿನಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕಳೆದ ಮಳೆಗಾಲದಲ್ಲಿ ಕುಸಿದಿದೆ. ಇದರ ಪರಿಣಾಮ ವಿದ್ಯಾರ್ಥಿಗಳಿಗೆ ಆಯುಷ್ಮಾನ್ ಆರೋಗ್ಯ ಮಂದಿರದ 8 ಅಡಿ ಅಳತೆಯ ಸಮುದಾಯ ಆರೋಗ್ಯಾಧಿಕಾರಿ ಕೊಠಡಿಯಲ್ಲಿ ತರಗತಿ ನಡೆಯುತ್ತಿವೆ.

ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಮೇದಿನಿ ಗ್ರಾಮಕ್ಕೆ ವ್ಯವಸ್ಥಿತ ರಸ್ತೆಯೂ ಇಲ್ಲ. ಗುಡ್ಡದ ಮೇಲಿರುವ ಶಾಲೆಗೆ ಸುಸಜ್ಜಿತ ಕಟ್ಟಡವೂ ಇಲ್ಲದಂತಾಗಿದೆ.

‘ಮೇದಿನಿ ಗ್ರಾಮಕ್ಕೆ ವ್ಯವಸ್ಥಿತ ರಸ್ತೆಯಿಲ್ಲ. 60 ವರ್ಷಗಳಷ್ಟು ಹಳೆಯ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕಳೆದ ಮಳೆಗಾಲದಲ್ಲಿ ಕುಸಿದಿದೆ. 2020ರಲ್ಲಿ ಜಿಲ್ಲಾಧಿಕಾರಿ ಇಲ್ಲಿ ಬಂದು ವಾಸ್ತವ್ಯ ಮಾಡಿದ್ದರು. ಆಗ ಹಳೆಯ ಕಟ್ಟಡದ ಗೋಡೆಗೆ ಬಣ್ಣ, ನೆಲಕ್ಕೆ ಟೈಲ್ಸ್ ಹಾಕಿ ಮೇಲ್ನೋಟಕ್ಕೆ ಅಂದವಾಗಿ ಕಾಣುವಂತೆ ಮಾಡಲಾಗಿತ್ತು. ಕಟ್ಟಡದ ಮಣ್ಣಿನ ನೆಲಗಟ್ಟು ಇಲಿ, ಹೆಗ್ಗಣಗಳ ತಾಣವಾಗಿದೆ. ಕಟ್ಟಡ ಅಪಾಯಕಾರಿಯಾಗಿದ್ದರೂ ಅದೇ ಕಟ್ಟಡದ ಒಂದು ಕೊಠಡಿಯನ್ನು ಸದ್ಯ ಬಿಸಿಯೂಟದ ಕೋಣೆಯಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವರಾಮ ಗೌಡ ಹೇಳಿದರು.

‘ಕುಮಟಾದಿಂದ 50 ಕಿ.ಮೀ ದೂರದಲ್ಲಿರುವ ಮೇದಿನಿ ಶಾಲೆ ತಲುಪಲು 7 ಕಿ.ಮೀ. ಕಡಿದಾದ, ಅಪಾಯಕಾರಿ ಏರು ರಸ್ತೆಯಲ್ಲಿ ಸಾಗಬೇಕು. ಮಳೆಗಾಲದಲ್ಲಿ ಬೈಕ್ ಸವಾರಿ ಅಪಾಯಕಾರಿ. ಶಾಲೆಯ ಕಟ್ಟಡ ಕುಸಿದಿದ್ದರಿಂದ ಸಮುದಾಯ ಆರೋಗ್ಯಾಧಿಕಾರಿ ಅವರ ಕೊಠಡಿಯನ್ನು ತಾತ್ಕಾಲಿಕವಾಗಿ ಬಳಸಲಾಗುತ್ತಿದೆ’ ಎಂದು ಶಿಕ್ಷಕ ರಾಜು ನಾಯ್ಕ ತಿಳಿಸಿದರು.

‘ಶಾಲೆಗೆ 60 ವರ್ಷವಾದ ಹಿನ್ನೆಲೆ ಶಾಲೆ ಎದುರು ಸಾರ್ವಜನಿಕರ ಶ್ರಮದಾನ, ದಾನಿಗಳ ನೆರವಿನಿಂದ ಒಂದು ಪುಟ್ಟ ಕಟ್ಟಡ ನಿರ್ಮಿಸುತ್ತಿದ್ದೇವೆ. ಅದಕ್ಕೆ ಕೆಲ ದಾನಿಗಳು ಸುಮಾರು ₹1.50 ಲಕ್ಷ ನೀಡಿದರೆ ಚಿಕ್ಕಬಳ್ಳಾಪುರ ಶಾಸಕ ನಂಜೇಗೌಡ ₹25 ಸಾವಿರ ನೀಡಿದ್ದಾರೆ. ಈಗ ಶಾಲೆಗೆ 14 ವಿದ್ಯಾರ್ಥಿಗಳು ಬರುತ್ತಿದ್ದಾರೆ. ಹೊಸ ಕಟ್ಟಡ, ಒಬ್ಬ ಅತಿಥಿ ಶಿಕ್ಷಕರ ಅಗತ್ಯವಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದು ಅವರು ತಿಳಿಸಿದರು.

‘ಶಿಕ್ಷಕ ರಾಜು ನಾಯ್ಕ ಅವರು ವಿದ್ಯಾರ್ಥಿಗಳ ಮನೆಗಳಿಗೆ ಹೋಗಿ ಅವರನ್ನು ಶಾಲೆಗೆ ಕರೆ ತಂದಿದ್ದಾರೆ. ಶಾಲೆಗೆ ಬರುವಾಗ ತಮ್ಮ ಸ್ವಂತ ಖರ್ಚಿನಿಂದ ವಿದ್ಯಾರ್ಥಿಗಳಿಗೆ ಹಣ್ಣು, ತಿನಿಸು ತಂದು ಕೊಡುತ್ತಾರೆ. ಇದರಿಂದ ಬೇರೆ ಕಡೆ ಇದ್ದ ಮಕ್ಕಳನ್ನು ಇಲ್ಲಿಗೆ ಕರೆತಂದು ಶಾಲೆಗೆ ಸೇರಿಸಿದ್ದೇವೆ’ ಎಂದು ಗ್ರಾಮಸ್ಥ ಬಾಲಚಂದ್ರ ಗೌಡ ಹೇಳಿದರು.

ಊರಿನ ಆಸ್ಪತ್ರೆಯ ಹೊಸ ಕಟ್ಟಡದಲ್ಲಿ ಶಾಲೆ ತರಗತಿ ನಡೆಯುತ್ತಿರುವುದು
ಊರಿನ ಆಸ್ಪತ್ರೆಯ ಹೊಸ ಕಟ್ಟಡದಲ್ಲಿ ಶಾಲೆ ತರಗತಿ ನಡೆಯುತ್ತಿರುವುದು

ಶಾಲೆ ಕಟ್ಟಡಗಳ ದುರಸ್ತಿಗೆ ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ಲಭಿಸಿದ ಬಳಿಕ ಆದ್ಯತೆ ಮೇಲೆ ಕಟ್ಟಡ ದುರಸ್ತಿ ಮಾಡಲಾಗುತ್ತದೆ.

- ಆರ್.ಎಲ್.ಭಟ್ಟ ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT