ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಕಾಲದ ಕೋಲ್ಮಿಂಚುಗಳು... | ಕೋವಿಡ್ ಕಲಿಸಿದ ‘ಕೂಡು ಕೃಷಿ’

ಕೂಡಿ ಬಾಳೋಣ; ಸೇರಿ ದುಡಿಯೋಣ ತತ್ವಕ್ಕೆ ಸಾಕಾರಗೊಳಿಸುತ್ತಿರುವ ರೈತರು
Last Updated 11 ಜುಲೈ 2020, 19:33 IST
ಅಕ್ಷರ ಗಾತ್ರ

ಕೋವಿಡ್ ಬಿಕ್ಕಟ್ಟಿನ ಸಂದರ್ಭವನ್ನೇ ಸಕಾರಾತ್ಮಕವಾಗಿ ಬಳಸಿಕೊಂಡು, ಎದುರಾದ ಸವಾಲನ್ನೂ ಮೆಟ್ಟಿ ನಿಂತು ಗೆಲುವಿನ ದಾರಿಯನ್ನು ಕಂಡುಕೊಂಡ ಅಪರೂಪದ ಕಥೆ ಇಲ್ಲಿದೆ...

ಶಿರಸಿ: ‘ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ’, 1970ರ ದಶಕದ ನಟ ರಾಜಕುಮಾರ ಅವರ ಈ ಹಾಡು, ಕೋವಿಡ್ 19 ಕಾಲದಲ್ಲಿ ಅಕ್ಷರಶಃ ಸಾಕಾರಗೊಂಡಿದೆ. ಊರವರೆಲ್ಲ ಸೇರಿ ಕೆಸರು ಗದ್ದೆಯಲ್ಲಿ ಕೂಡಿ ಕೆಲಸ ಮಾಡುವುದನ್ನು ಕೊರೊನಾ ಸೋಂಕು ಕಲಿಸಿದೆ.

ಭತ್ತದ ಕಣಜವೆಂದೇ ಕರೆಯುವ ತಾಲ್ಲೂಕಿನ ಬನವಾಸಿ ಹೋಬಳಿಯಲ್ಲಿ ಕೃಷಿಯೇ ಮುಖ್ಯ ಉದ್ಯೋಗ. ಕೃಷಿಯಿಂದ ಆದಾಯ ಪಡೆಯುವವರು ಕೆಲವರಾದರೆ, ಕೃಷಿ ಕಾರ್ಮಿಕರಾಗಿ ದುಡಿಯುವವರು ಹಲವರು. ಇಲ್ಲಿನ ಕೃಷಿ ಕಾರ್ಮಿಕರು ಶಿರಸಿ ತಾಲ್ಲೂಕಿನ ಪಶ್ಚಿಮ ಭಾಗದ ಅಡಿಕೆ ತೋಟಗಳಿಗೆ ಕೆಲಸಕ್ಕೆ ಹೋಗುತ್ತಿದ್ದರು. ಹಾವೇರಿ ಜಿಲ್ಲೆ ಹಾನಗಲ್‌ನ ಗಡಿ ಭಾಗದವರು, ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನವರು ಬನವಾಸಿ ಭಾಗಕ್ಕೆ ನಿತ್ಯದ ದುಡಿಮೆಗಾಗಿ ಬರುತ್ತಿದ್ದರು. ಆದರೆ, ಈಗ ಕೊರೊನಾ ಸೋಂಕಿನ ಭಯಕ್ಕೆ ಕೆಲಸಗಾರರು ಊರಿನಿಂದ ಹೊರಬೀಳಲು ಹಿಂದೇಟು ಹಾಕುತ್ತಿದ್ದಾರೆ. ಹೊರ ಊರಿನವರನ್ನು ತಮ್ಮ ಊರಿಗೆ ಸೇರಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ.

ಹೀಗಾಗಿ, ಈ ಮುಂಗಾರು ಹಂಗಾಮಿನಲ್ಲಿ ಊರವರೇ ಸೇರಿ ಕೃಷಿ ಮಾಡುತ್ತಿದ್ದಾರೆ. ಮರಗುಂಡಿ, ಮಧುರವಳ್ಳಿ, ಅಂಡಗಿ, ಕಿರವತ್ತಿ, ಸಂತೊಳ್ಳಿ ಮೊದಲಾದ ಹಳ್ಳಿಗಳಲ್ಲಿ ಈ ಪದ್ಧತಿ ಚಾಲ್ತಿಗೆ ಬಂದಿದೆ. ಊರವರೇ ದಿನ ಹೊಂದಾಣಿಕೆ ಮಾಡಿಕೊಂಡು, ಗದ್ದೆಗಳಲ್ಲಿ ಕೂಲಿಯಾಳಾಗಿ ದುಡಿಯುತ್ತಾರೆ.

ತಾಲ್ಲೂಕಿನ ಉತ್ತಮ ಮಳೆಯಾಗುತ್ತಿರುವುದರಿಂದ ಭತ್ತ ನಾಟಿಗೆ ಅಗೆಮಡಿ ಸಿದ್ಧಪಡಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಈಗಾಗಲೇ ಬಿತ್ತನೆಯಾಗಿರುವ ಮೆಕ್ಕೆಜೋಳ, ಶುಂಠಿ, ತೋಟದಲ್ಲಿ ಅಡಿಕೆ, ಬಾಳೆಗೆ ಗೊಬ್ಬರ ಹಾಕುವ, ಅನಾನಸ್‌ಗೆ ಕಳೆನಾಶಕ ಸಿಂಪಡಿಸುವ ಕಾರ್ಯವೂ ಚುರುಕಿನಿಂದ ಸಾಗಿದೆ.

‘ನಮ್ಮ ಊರಿನಿಂದ ನಿತ್ಯವೂ ಮೂರ್ನಾಲ್ಕು ವಾಹನಗಳಲ್ಲಿ ಕೆಲಸಗಾರರು ಬೇರೆ ಊರಿಗೆ ಕೂಲಿಗೆ ಹೋಗುತ್ತಿದ್ದರು. ಈಗ ಕೊರೊನಾಕ್ಕೆ ಹೆದರಿ ಎಲ್ಲರೂ ಮನೆಯಲ್ಲೇ ಇದ್ದಾರೆ. ಅನೇಕರು ಕೆಲಸವಿಲ್ಲದೇ, ಬರಿಗೈಯಾಗಿದ್ದಾರೆ. ಊರಿನಲ್ಲೇ ಕೆಲಸ ಸಿಕ್ಕರೆ ಮಾಡುತ್ತಾರೆ. ಊರವರೇ ಸೇರಿ ಕೃಷಿ ಕೆಲಸ ಮಾಡುತ್ತಾರೆ’ ಎನ್ನುತ್ತಾರೆ ಸಂತೊಳ್ಳಿಯ ಯುವರಾಜ ಗೌಡ.

‘ಕೃಷಿ ಕೆಲಸವನ್ನು ಇಲ್ಲಿನವರೇ ನಿಭಾಯಿಸಿದರೂ, ವ್ಯಾಪಾರ–ವಹಿವಾಟಿಗೆ ಹೊರ ಊರಿನವರು ಬನವಾಸಿ ಭಾಗಕ್ಕೆ ಬರುವುದು ಹೆಚ್ಚಾಗಿದೆ. ಇದು ಬನವಾಸಿಗರಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ’ ಎಂದು ಬಿ.ಶಿವಾಜಿ ಪ್ರತಿಕ್ರಿಯಿಸಿದರು.

ಮಳೆ ವಿವರ (ಜನೆವರಿ 1ರಿಂದ ಜುಲೈ 9ರವರೆಗೆ)

ದಾಖಲಾಗಿರುವ ಮಳೆ – 997 ಮಿ.ಮೀ

ವಾಡಿಕೆ ಮಳೆ – 832 ಮಿ.ಮೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT