ಕಾರವಾರ: ವಾಡಿಕೆಗಿಂತಲೂ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಜಿಲ್ಲೆಯ ತೋಟಗಾರಿಕೆ, ಕೃಷಿ ಕ್ಷೇತ್ರ ನಲುಗಿದೆ. ಅಡಿಕೆ ಬೆಳೆಗೆ ವ್ಯಾಪಕ ಪ್ರಮಾಣದಲ್ಲಿ ಕೊಳೆ ರೋಗ ಆವರಿಸಿದ್ದರೆ, ಭತ್ತ, ಗೋವಿನಜೋಳದ ಬೆಳೆಗೂ ವ್ಯಾಪಕ ಹಾನಿ ಉಂಟಾಗಿದೆ.
ಜೂನ್ ಕೊನೆಯ ವಾರ ಹಾಗೂ ಜುಲೈನಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಭತ್ತದ ಸಸಿ ನಾಟಿ ಮಾಡಿದ್ದ ಗದ್ದೆ, ಬಿತ್ತನೆ ಮಾಡಿದ್ದ ಬೀಜ ನೀರು ಪಾಲಾದವು. ಗೋವಿನಜೋಳದ ಗದ್ದೆಯಲ್ಲೂ ನೀರು ನಿಂತು ಸಸಿಗಳು ಕೊಳೆಯತೊಡಗಿದವು. ಪ್ರಾಥಮಿಕ ಸಮೀಕ್ಷೆ ಪ್ರಕಾರ 431 ಹೆಕ್ಟೇರ್ ಭತ್ತ ಬೆಳೆ ಪ್ರದೇಶ, 231 ಹೆಕ್ಟೇರ್ ಜೋಳ ಬೆಳೆ ಪ್ರದೇಶ ನಷ್ಟಕ್ಕೆ ತುತ್ತಾಗಿವೆ.
ಜಿಲ್ಲೆಯ ಪ್ರಧಾನ ಬೆಳೆಯಾಗಿರುವ ಅಡಿಕೆ ಕ್ಷೇತ್ರ ಈ ಬಾರಿ ಕೊಳೆರೋಗಕ್ಕೆ ನಲುಗಿದೆ. 36,450 ಹೆಕ್ಟೇರ್ ಒಟ್ಟು ಅಡಿಕೆ ಬೆಳೆ ಕ್ಷೇತ್ರದ ಪೈಕಿ 15,300 ಹೆಕ್ಟೇರ್ ಪ್ರದೇಶ ಕೊಳೆರೋಗಕ್ಕೆ ತುತ್ತಾಗಿದೆ. ಕೊಳೆರೋಗಕ್ಕೆ ಪರಿಹಾರ ನೀಡಲು ನಿಯಮಾವಳಿಯಲ್ಲಿ ಅವಕಾಶ ಇಲ್ಲದ ಪರಿಣಾಮ ರೈತರು ತೀವೃ ನಷ್ಟ ಎದುರಿಸುವಂತಾಗಿದೆ.
ಶಿರಸಿ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಡಿಕೆ, ಕಾಳುಮೆಣಸು ಬೆಳೆಗೆ ಕೊಳೆ ರೋಗ ಬಾಧಿಸಿದೆ. ತಾಲ್ಲೂಕಿನಲ್ಲಿ 10,573 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ಇದ್ದು, 4,676 ಹೆಕ್ಟೇರ್ ವ್ಯಾಪ್ತಿಯಲ್ಲಿ ಕೊಳೆ ವ್ಯಾಪಿಸಿದೆ. 150 ಹೆಕ್ಟೇರ್ ವ್ಯಾಪ್ತಿಯಲ್ಲಿ ಕಾಳುಮೆಣಸು ಬಳ್ಳಿಗೆ ಕೊಳೆ ರೋಗ ಆವರಿಸಿದ್ದು, 200 ಹೆಕ್ಟೇರ್ ಪ್ರದೇಶದಲ್ಲಿನ ಮೆಕ್ಕೆಜೋಳ ಬೆಳೆ ಕೂಡ ಹಾಳಾಗಿದೆ.
ಮುಂಡಗೋಡ ತಾಲ್ಲೂಕಿನಲ್ಲಿ ಜುಲೈ ತಿಂಗಳಲ್ಲಿ ಸುರಿದ ನಿರಂತರ ಮಳೆಯಿಂದ ಗೋವಿನಜೋಳ ಬೆಳೆ ಶೇ 50ರಷ್ಟು ಹಾನಿಯಾಗಿದೆ. ಅಡಿಕೆ ಬೆಳೆಗೂ ಕೊಳೆ ರೋಗ ತಗುಲಿ, ಅಡಿಕೆಯು ಉದುರಿ ನೆಲಕ್ಕೆ ಬಿದ್ದು ಹಾನಿಯಾಗಿದೆ.
ಹಳಿಯಾಳ ತಾಲ್ಲೂಕಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಗೋವಿನಜೋಳದ ಬೆಳೆ ಹಾನಿಯಾಗಿದೆ. ತಾಲ್ಲೂಕಿನಲ್ಲಿ ಸುಮಾರು 200 ಹೆಕ್ಟೇರ್‌ನಷ್ಟು ಬೆಳೆಗೆ ಹಾನಿಯಾಗಿದೆ. 9 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾದ ತರಕಾರಿ, 1 ಹೆಕ್ಟೇರ್ ಪಪ್ಪಾಯಿ ಬೆಳೆಗೂ ಹಾನಿಯಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎ.ಆರ್.ಹೇರಿಯಾಳ ಹೇಳಿದರು.
ಭಟ್ಕಳ ತಾಲ್ಲೂಕಿನಲ್ಲಿ ಮಳೆಗೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಭತ್ತದ ಕೃಷಿಗೆ ಭೂಮಿಗೆ ಕರಾವಳಿ ಅಂಚಿನ ಪ್ರದೇಶದಲ್ಲಿ ಉಪ್ಪು ನೀರು ನುಗ್ಗಿ ಹಾನಿ ಸಂಭವಿಸಿದರೆ, ಗ್ರಾಮೀಣ ಭಾಗದಲ್ಲಿ ಹರಿಯುವ ನೀರಿನಲ್ಲಿ ಮಣ್ಣು ಗದ್ದೆಯಲ್ಲಿ ನೆಲೆ ನಿಂತು ಅಲ್ಲಲ್ಲಿ ಭತ್ತದ ಸಸಿಗಳಿಗೆ ಹಾನಿ ಸಂಭವಿಸಿದೆ. ಅಡಿಕೆ ಬೆಳೆಗೆ ಕೊಳೆರೋಗ ಬಂದಿದ್ದು ರೈತರು ಆತಂಕಕ್ಕಿಡಾಗಿದ್ದಾರೆ.
‘ಅಡಿಕೆ ಬೆಳವಣಿಗೆ ಕಾಣುವ ಪೂರ್ವದಲ್ಲಿಯೇ ಉದುರಿ ಬೀಳುತಿದ್ದು ಔಷಧಿ ಹೊಡೆದರೂ ಪ್ರಯೋಜನವಾಗುತ್ತಿಲ್ಲ’ ಎನ್ನುತ್ತಾರೆ ರೈತ ಶಂಕರ ನಾಯ್ಕ.
ಅಂಕೋಲಾ ತಾಲ್ಲೂಕಿನಲ್ಲಿ ಹಲವಡೆ ಸುರಿದ ಬಾರಿ ಮಳೆಗೆ ರೈತರು ಕಂಗಾಲಾಗಿದ್ದಾರೆ. ಬೆಳಸೆ, ಶಿರೂರು, ಉಳುವರೆ, ಸಗಡಗೇರಿ, ಪೂಜಗೇರಿ, ನದಿಬಾಗ್, ಕೇಣಿ ಮುಂತಾದೆಡೆ ಗದ್ದೆಯಲ್ಲಿ ನೀರು ತುಂಬಿ ರೈತರು ಕೃಷಿ ಮಾಡಲಾಗದೆ ಕಂಗೆಟ್ಟಿದ್ದಾರೆ.
ಯಲ್ಲಾಪುರ ತಾಲ್ಲೂಕಿನ ಹುತ್ಕಂಡ-ಅಮಚಿಮನೆ, ಸಾಸ್ಮೆಗದ್ದೆ, ಲಿಂಬೇಸರ, ಗೋಳಿಗದ್ದೆ, ಕುಂಟೆಜಡ್ಡಿ ಭಾಗದ ನೂರಾರು ಎಕರೆ ತೋಟ ಜಲಾವೃತವಾಗಿದೆ.
ಹೊನ್ನಾವರ ತಾಲ್ಲೂಕಿನಲ್ಲಿ ಶೇ 30ರಷ್ಟು ಅಡಿಕೆ ತೋಟ ಕೊಳೆರೋಗ ಬಾಧೆಗೆ ತುತ್ತಾಗಿದೆ. ಸುಮಾರು 50 ಹೆಕ್ಟೇರ್ ಪ್ರದೇಶದಷ್ಟು ಭತ್ತದ ಬೆಳೆ ಹಾನಿಗೊಳಗಾಗಿದೆ. ಹಳದೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಹಾನಿ ಸಂಭವಿಸಿದೆ.
ಕುಮಟಾ ತಾಲ್ಲೂಕಿನಲ್ಲಿ ಜುಲೈ ತಿಂಗಳಲ್ಲಿ ಸುರಿದ ವಿಪರೀತ ಮಳೆಗೆ ಅಡಿಕೆ ಕೊಳೆ ರೋಗ, ಅಡಿಕೆ, ತೆಂಗು ಮರಗಳು ಮುರಿದು ಬಿದ್ದು ಸುಮಾರು ₹30 ಕೋಟಿಗೂ ಹೆಚ್ಚು ಹಾನಿ ಸಂಭವಿಸಿದೆ.
‘1,400 ಹೆಕ್ಟೇರ್ ಪ್ರದೇಶಕ್ಕೆ ಕೊಳೆ ರೋಗ ಆವರಿಸಿದೆ. 800ಕ್ಕೂ ಹೆಚ್ಚು ರೈತರು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ’ ಎಂದು ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಚೇತನ ನಾಯ್ಕ ಹೇಳಿದರು.
ಸಿದ್ದಾಪುರ ತಾಲ್ಲೂಕಿನಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರ ಪರಿಣಾಮ ಅಡಿಕೆ ಬೆಳೆಗಾರರು ತೊಂದರೆ ಅನುಭವಿಸುವಂತಾಗಿದೆ. 5,642 ಹೆಕ್ಟೇರ್ ಅಡಿಕೆ ಬೆಳೆಯುವ ಪ್ರದೇಶವಿದ್ದು 1,313 ಹೆಕ್ಟೇರ್ ಪ್ರದೇಶ ಕೊಳೆ ರೋಗಕ್ಕೆ ತುತ್ತಾಗಿದೆ. ಕೊಳೆ ರೋಗದ ಜೊತೆಗೆ ಕೀಟ ಬಾಧೆ ಮತ್ತು ರಭಸದ ಗಾಳಿಯ ಕಾರಣ ಸುಮಾರು 450 ಹೆಕ್ಟೇರ್ ಪ್ರದೇಶದಲ್ಲಿ ಹಸಿ ಅಡಿಕೆ ನಾಶಗೊಂಡಿದೆ ಎಂದು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಅರುಣ್ ಮಾಹಿತಿ ನೀಡಿದರು.
ಅತಿವೃಷ್ಟಿ ಕಾರಣಕ್ಕೆ ಎಲ್ಲ ಬೆಳೆಗಳಿಗೆ ಕೊಳೆ ರೋಗ ಕಾಡುತ್ತಿದೆ. ಈಗಾಗಲೇ ಅರ್ಧ ಬೆಳೆ ಹಾಳಾಗಿದೆ. ಸರ್ಕಾರ ಹೆಚ್ಚಿನ ಪರಿಹಾರ ನೀಡಲು ಮುಂದಾಗಬೇಕುಗೋಪಾಲಕೃಷ್ಣ ವೈದ್ಯ (ಶಿರಸಿ) ಟಿಎಸ್ಎಸ್ ಅಧ್ಯಕ್ಷ
ರೈತರು ಬೆಳೆದ ಬೆಳೆ ನಷ್ಟಕ್ಕೆ ಅಲ್ಪ ಮೊತ್ತದ ಪರಿಹಾರ ನೀಡಲಾಗುತ್ತಿದೆ. ಅದಕ್ಕೂ ಹಲವು ಷರತ್ತು ವಿಧಿಸಲಾಗುತ್ತಿದೆ. ನಿಯಮ ಸರಳೀಕರಿಸುವ ಜತೆಗೆ ಹೆಚ್ಚು ಮೊತ್ತದ ಪರಿಹಾರ ನೀಡಬೇಕುಹುಲಿಯಾ ಗೌಡ (ಗೋಕರ್ಣ) ಕೇತಕಿ ವಿನಾಯಕ ಕಾರ್ಮಿಕ ಸಂಘದ ಅಧ್ಯಕ್ಷ
ಅಡಿಕೆಗೆ ಕೊಳೆ ರೋಗ ಹರಡಿದ್ದು ಶೇ 40ರಷ್ಟು ಬೆಳೆ ನಾಶಗೊಂಡಿದೆ. ಸರ್ಕಾರದಿಂದ ಸಿಗುವ ಪರಿಹಾರಕ್ಕೂ ಅಡಿಕೆಗೆ ಇರುವ ಬೆಲೆಗೂ ಬಹಳ ವ್ಯತ್ಯಾಸವಿದ್ದು ಸಣ್ಣ ಹಿಡುವಳಿದಾರರಿಗೆ ಆರ್ಥಿಕವಾಗಿ ಪೆಟ್ಟು ಬಿದ್ದಂತಾಗಿದೆಗಜಾನನ ಹೆಗಡೆ ಮದ್ದಿನಕೇರಿ (ಸಿದ್ದಾಪುರ) ಕೃಷಿಕ
ಅತಿವೃಷ್ಟಿಯಿಂದ ಗೋವಿನಜೋಳ ಬೆಳೆಗೆ ತೀವ್ರ ಹಾನಿಯಾಗಿದ್ದು ಗಟ್ಟಿ ಕಾಳಿನ ತೆನೆ ಸಿಗುವುದು ಅನುಮಾನವಿದೆಬಸವರಾಜ ಬೊಮ್ಮನಳ್ಳಿ (ಮುಂಡಗೋಡ) ರೈತ
ಹಳ್ಳದಲ್ಲಿ ಹೂಳು: ರೈತರಿಗೆ ಗೋಳು
ಗೋಕರ್ಣ ಭಾಗದಲ್ಲಿ ಭತ್ತದ ಬೇಸಾಯವನ್ನು ಮಾಡುವ ತಾರಮಕ್ಕಿ ಬೇಲೆಗದ್ದೆ ದಂಡೆಭಾಗ ಬಿಜ್ಜೂರು ಬಾವಿಕೊಡ್ಲ ಮುಂತಾದೆಡೆಗಳಲ್ಲಿನ ಸಾವಿರಾರು ಎಕರೆ ಕೃಷಿಭೂಮಿ ಸಂಪೂರ್ಣವಾಗಿ ಮಳೆ ನೀರಿನಲ್ಲಿ ಮುಳುಗಿದೆ. ಸಮುದ್ರದ ಅಂಚಿನಲ್ಲಿರುವ ಸುತ್ತಲಿರುವ ಒಳ ಭಾಗದ ಆರು ಕಿ.ಮೀ. ವ್ಯಾಪ್ತಿಯಲ್ಲಿನ ಸಾವಿರಾರು ರೈತ ಕುಟುಂಬಗಳು ಭತ್ತ ಮತ್ತು ವಿವಿಧ ತರಕಾರಿ ಬೆಳೆಯುತ್ತಿದ್ದಾರೆ. ಕೆಲ ವರ್ಷಗಳಿಂದ ಗದ್ದೆಗಳು ನೀರಿನಲ್ಲಿ ಮುಳುಗುವ ವಿಪತ್ತಿಗೆ ಸಿಲುಕಿ ಉತ್ತಮ ಫಸಲಿನಿಂದ ವಂಚಿತರಾಗುತ್ತಿದ್ದಾರೆ. ‘ಕೃಷಿ ಭೂಮಿಗಳು ಜಲಾವೃತವಾಗಲು ಮಳೆನೀರನ್ನು ಸಮುದ್ರಕ್ಕೆ ಸಾಗಿಸಲು ಇರುವ ಹಳ್ಳಗಳು ಹೂಳಿನಿಂದ ತುಂಬಿರುವುದು ಪ್ರಮುಖ ಕಾರಣ. ಕೆಲ ವರ್ಷದಿಂದ ಏರುಗತಿಯಲ್ಲಿರುವ ಪ್ರವಾಸೋದ್ಯಮದ ಪರಿಣಾಮದಿಂದ ಹಳ್ಳಗಳಿಗೆ ತ್ಯಾಜ್ಯ ಸೇರುವುದು ಹೆಚ್ಚಿದೆ. ಇದರಿಂದ ನೀರು ಹರಿಯದೆ ಗದ್ದೆಗಳು ಮುಳುಗುತ್ತಿವೆ’ ಎಂದು ಗೋಕರ್ಣ ಭಾಗದ ರೈತರು ದೂರುತ್ತಾರೆ.
ಕೊಳೆ ರೋಗ: ತೋಟಕ್ಕೂ ಹಾನಿ
ಜೊಯಿಡಾ ತಾಲ್ಲೂಕಿನಲ್ಲಿ ಸುಮಾರು 70 ಹೆಕ್ಟೇರ್ ಅಡಿಕೆಗೆ ಕೊಳೆರೋಗ ಬಂದಿದ್ದು ರೈತರು ಪರಿಹಾರಕ್ಕಾಗಿ ತೋಟಗಾರಿಕೆ ಇಲಾಖೆಗೆ ಅಲೆಯುತ್ತಿದ್ದಾರೆ. ಗುಂದ ಶಿವಪುರ ಹುಡಸಾ ಅವುರ್ಲಿ ನಂದಿಗದ್ದೆ ಭಾಗದಲ್ಲಿ ಅಧಿಕ ಪ್ರಮಾಣದಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ಕೆಲವು ಕಡೆಗಳಲ್ಲಿ ಸಂಪೂರ್ಣ ಅಡಿಕೆ ತೋಟದಲ್ಲಿ ಕೊಳೆರೋಗ ಬಾಧಿಸಿದ್ದು ಔಷಧಿ ಸಿಂಪಡಿಸಲು ಮಳೆ ಅವಕಾಶ ನೀಡದೆ ಇರುವುದರಿಂದ ಇಡೀ ತೋಟವೇ ಹಾನಿಯಾಗಿದೆ. ಡೇರಿಯಾ ಚಂದ್ರಾಳಿ ಚಾಂದವಾಡಿ ಆಖೇತಿ ಭಾಗದಲ್ಲಿ ಭತ್ತದ ಗದ್ದೆಗಳಿಗೆ ನೀರು ಹರಿದು ಹಾನಿಯಾಗಿದೆ. ‘ಮಳೆಯಿಂದ ಅಡಿಕೆ ತೋಟಕ್ಕೆ ಅಪಾರ ಪ್ರಮಾಣದ ಹಾನಿಯಾಗಿದ್ದು ಕೊಳೆರೋಗಕ್ಕೆ ಅಡಿಕೆ ಉದುರಿ ಬೀಳುತ್ತಿವೆ. ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು’ ಎನ್ನುತ್ತಾರೆ ಹುಡಸಾದ ಮಾಬಳು ದೇಸಾಯಿ.
ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಎಂ.ಜಿ.ಹೆಗಡೆ, ಎಂ.ಜಿ.ನಾಯ್ಕ, ಶಾಂತೇಶ ಬೆನಕನಕೊಪ್ಪ, ರವಿ ಸೂರಿ, ಜ್ಞಾನೇಶ್ವರ ದೇಸಾಯಿ, ಮೋಹನ ನಾಯ್ಕ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.