ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಬಿಸಿಲ ಝಳಕ್ಕೆ ಕೃಷಿ ಕ್ಷೇತ್ರ ತತ್ತರ

ಬೆಳೆಗಳಿಗೆ ನೀರು ಹಾಯಿಸಲು ರೈತರ ಹರಸಾಹಸ: ಇಳಿಕೆಯಾದ ಬಿತ್ತನೆ ಪ್ರದೇಶ
Published 1 ಏಪ್ರಿಲ್ 2024, 4:58 IST
Last Updated 1 ಏಪ್ರಿಲ್ 2024, 4:58 IST
ಅಕ್ಷರ ಗಾತ್ರ

ಕಾರವಾರ: ಮಳೆಯ ಕೊರತೆ, ಬಿಸಿಲಿನ ಝಳದಿಂದ ಕೃಷಿ ಕ್ಷೇತ್ರ ಕಳೆಗುಂದುವಂತಾಗಿದೆ. ಮುಂಗಾರು ಹಂಗಾಮಿನಲ್ಲಿ ಬರದಿಂದ ನಷ್ಟ ಅನುಭವಿಸಿದ್ದ ರೈತ, ಹಿಂಗಾರು ಹಂಗಾಮಿನಲ್ಲಿ ನೀರಿಲ್ಲದೇ ಬೆಳೆ ಬೆಳೆಯದೆ ಕೈಚೆಲ್ಲಿ ಕುಳಿತಿದ್ದಾರೆ.

ಕೃಷಿ ಪ್ರಧಾನವಾಗಿರುವ ಜಿಲ್ಲೆಯಲ್ಲಿ ಹಿಂಗಾರು ಬೇಸಿಗೆ ಅವಧಿಯಲ್ಲಿ 5,103 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಜೋಳ, ಶೇಂಗಾ ಹಾಗೂ ಇನ್ನಿತರ ಬೆಳೆ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ 4,300 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಶೇಂಗಾ, ಗೋವಿನ ಜೋಳ ಬೆಳೆಯುತ್ತಿದ್ದ ನೂರಾರು ರೈತರು ಗದ್ದೆಗಳನ್ನು ಖಾಲಿ ಬಿಟ್ಟಿದ್ದಾರೆ.

ಕರಾವಳಿ ಭಾಗದಲ್ಲಿ ಕಲ್ಲಂಗಡಿ ಬೆಳೆಯಲಾಗುತ್ತಿದ್ದ ಗದ್ದೆಗಳು ಖಾಲಿ ಉಳಿದಿವೆ. ನೀರಾವರಿ ಸೌಲಭ್ಯ ಕಲ್ಪಿಸಿಕೊಂಡಿದ್ದ ಜಮೀನಿನಲ್ಲಿಯೂ ನೀರಿನ ಲಭ್ಯತೆ ಕಡಿಮೆಯಾಗಿದ್ದರಿಂದ ಮೂರನೇ ಅವಧಿಯ ಕಲ್ಲಂಗಡಿ ಬೆಳೆ ತೆಗೆಯುವ ರೈತರ ನಿರೀಕ್ಷೆ ಹುಸಿಯಾಗಿದೆ. ಫೆಬ್ರವರಿ ಬಳಿಕ ಬೆಳೆಯಲಾಗುತ್ತಿದ್ದ ಕಲ್ಲಂಗಡಿ ಬೆಳೆ ಪ್ರದೇಶ ಸುಮಾರು 80 ಹೆಕ್ಟೇರ್‌ಗೂ ಹೆಚ್ಚು ಇಳಿಕೆಯಾಗಿದೆ.

ಘಟ್ಟದ ಮೇಲಿನ ತಾಲ್ಲೂಕುಗಳ ಪೈಕಿ ಮುಂಡಗೋಡ, ಹಳಿಯಾಳ, ಬನವಾಸಿ ಹೋಬಳಿಯಲ್ಲಿ ಬೆಳೆಯುತ್ತಿದ್ದ ಗೋವಿನ ಜೋಳ ಪ್ರದೇಶವೂ ಈ ಬಾರಿ ಇಳಿಕೆಯಾಗಿದೆ. ಮುಂಗಾರು ಮತ್ತು ಹಿಂಗಾರು ಮಳೆಯ ಕೊರತೆಯಿಂದಾಗಿ ನೀರಿನ ಮೂಲಗಳಾಗಿದ್ದ ಕೆರೆಗಳು ಬತ್ತಿರುವ ಪರಿಣಾಮ ಬನವಾಸಿ ಹೋಬಳಿಯೊಂದರಲ್ಲೇ ಸುಮಾರು ನೂರು ಹೆಕ್ಟೇರ್ ಗೋವಿನ ಜೋಳ ಬೆಳೆ ಪ್ರದೇಶ ಇಳಿಕೆಯಾಗಿದೆ. ಅಲ್ಲಲ್ಲಿ ಮಾತ್ರ ಜೋಳ ಬಿತ್ತನೆ ಮಾಡಿದ ಗದ್ದೆಗಳು ಕಾಣಸಿಗುತ್ತಿದ್ದು, ಗಿಡಗಳಿಗೆ ನೀರುಣಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ತೆನೆಗಳು ಮೂಡುವಷ್ಟರಲ್ಲಿಯೇ ಗಿಡಗಳು ಒಣಗುತ್ತಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ.

ಅರೆಮಲೆನಾಡು ಪ್ರದೇಶದಲ್ಲಿ ಅಡಿಕೆ ತೋಟಗಳಿಗೂ ನೀರಿಲ್ಲದೇ ಒಣಗುವ ಹಂತ ತಲುಪಿವೆ. ಬನವಾಸಿ, ಮುಂಡಗೋಡ ಭಾಗದಲ್ಲಿ ಹೊಸದಾಗಿ ನಿರ್ಮಿಸಿದ ಅಡಿಕೆ ತೋಟ ನೀರಿಲ್ಲದೇ ಒಣಗುತ್ತಿದ್ದರೆ, ಬನವಾಸಿ ಹೋಬಳಿಯಲ್ಲಿ 15 ವರ್ಷಗಳಷ್ಟು ಹಳೆಯ ತೋಟಗಳು ಹಿಡಿಮುಂಡಿಗೆ ರೋಗಕ್ಕೆ ತುತ್ತಾಗಿ ಸಾಯಲಾರಂಭಿಸಿವೆ.

‘ಮಳೆಯ ಕೊರತೆಯಿಂದ ನೀರಿನ ಮೂಲಗಳು ಬತ್ತಿಹೋಗಿವೆ. ತೋಟದ ಪಕ್ಕದಲ್ಲಿದ್ದ ಕೆರೆ, ಹಳ್ಳಗಳಲ್ಲಿಯೂ ನೀರು ಇಂಗಿದ್ದು ಬಿಸಿಲ ಝಳದಿಂದ ತೋಟ ಒಣಗುತ್ತಿದೆ. ಅಡಿಕೆ ಸಸಿಗಳನ್ನು ರಕ್ಷಿಸಲು ಟ್ಯಾಂಕರ್ ಮೂಲಕ ನೀರು ತಂದು ಗಿಡಗಳಿಗೆ ಒದಗಿಸುವ ಪ್ರಯತ್ನ ಸಾಗಿದೆ. ಆದರೆ ಅಗತ್ಯದಷ್ಟು ನೀರು ಪೂರೈಸುವುದೇ ದೊಡ್ಡ ಸವಾಲಿನ ಕೆಲಸವಾಗಿದೆ’ ಎನ್ನುತ್ತಾರೆ ಮುಂಡಗೋಡ ತಾಲ್ಲೂಕಿನ ಇಂದೂರ ಗ್ರಾಮದ ರೈತ ಪಿ.ಜಿ. ತಂಗಚ್ಚನ್.

ಮುಂಡಗೋಡ ತಾಲ್ಲೂಕಿನ ಇಂದೂರ ಗ್ರಾಮದಲ್ಲಿ ರೈತರೊಬ್ಬರು ಟ್ಯಾಂಕರ್ ಮೂಲಕ ಅಡಿಕೆ ಗಿಡಗಳಿಗೆ ನೀರುಣಿಸಿದರು
ಮುಂಡಗೋಡ ತಾಲ್ಲೂಕಿನ ಇಂದೂರ ಗ್ರಾಮದಲ್ಲಿ ರೈತರೊಬ್ಬರು ಟ್ಯಾಂಕರ್ ಮೂಲಕ ಅಡಿಕೆ ಗಿಡಗಳಿಗೆ ನೀರುಣಿಸಿದರು
ಶಿರಸಿ ತಾಲ್ಲೂಕಿನ ಕಿರವತ್ತಿ ಗ್ರಾಮದಲ್ಲಿ ನೀರಿನ ಕೊರತೆ ಬಿಸಿಲ ಝಳಕ್ಕೆ ಗೋವಿನ ಜೋಳದ ಸಸಿಗಳು ಒಣಗಿವೆ
ಶಿರಸಿ ತಾಲ್ಲೂಕಿನ ಕಿರವತ್ತಿ ಗ್ರಾಮದಲ್ಲಿ ನೀರಿನ ಕೊರತೆ ಬಿಸಿಲ ಝಳಕ್ಕೆ ಗೋವಿನ ಜೋಳದ ಸಸಿಗಳು ಒಣಗಿವೆ

‘ಕೆರೆಗಳು ಬತ್ತಿದ್ದರಿಂದ ನೀರಿಗೆ ತೋಟದ ಪಕ್ಕದಲ್ಲೇ ಕೊಳವೆ ಬಾವಿ ಕೊರೆಯಿಸಿದ್ದರೂ ಅಲ್ಲಿಂದ ನೀರು ಹಾಯಿಸಲು ವಿದ್ಯುತ್ ವೋಲ್ಟೇಜ್ ಸಮಸ್ಯೆ ಎದುರಾಗಿದೆ. ಕಡಿಮೆ ವೋಲ್ಟೇಜ್ ಸಮಸ್ಯೆ ಒಂದೆಡೆಯಾದರೆ, ಪದೇ ಪದೇ ವಿದ್ಯುತ್ ಕಡಿತದಿಂದ ನೀರು ಹಾಯಿಸಲೂ ಆಗದೇ ತೋಟ ಸಂಪೂರ್ಣ ಒಣಗುವ ಹಂತಕ್ಕೆ ಬಂದಿದೆ’ ಎಂದು ಶಿರಸಿ ತಾಲ್ಲೂಕು ಅಂಡಗಿ ಗ್ರಾಮದ ಸತೀಶ ನಾಯ್ಕ ದೂರಿದರು.

‘ಬನವಾಸಿ ಭಾಗದಲ್ಲಿ ವಿದ್ಯುತ್ ಗ್ರಿಡ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳದೇ ತೊಂದರೆ ಎದುರಾಗಿದೆ. ಬೇಸಿಗೆಯಲ್ಲಿ ಈ ಭಾಗದ ರೈತರು ವಿದ್ಯುತ್ ವೋಲ್ಟೇಜ್‍ನ ದೊಡ್ಡ ಸಮಸ್ಯೆ ಎದುರಿಸಬೇಕಾಗಿದೆ. ನೀರಿನ ಕೊರತೆ ಒಂದೆಡೆಯಾದರೆ, ಲಕ್ಷಾಂತರ ರೂಪಾಯಿ ವ್ಯಯಿಸಿ ಕೊಳವೆ ಬಾವಿ ಕೊರೆಯಿಸಿದರೂ ನೀರು ಒದಗಿಸಲಾಗದ ಅಸಹಾಯಕ ಸ್ಥಿತಿ ನಮ್ಮದು’ ಎಂದು ರೈತ ಸಂತೋಷ ನಾಯ್ಕ ಅಳಲು ಹೇಳಿಕೊಳ್ಳುತ್ತಾರೆ.

ಕಾರವಾರ ತಾಲ್ಲೂಕಿನ ಮುಡಗೇರಿ ಅಣೆಕಟ್ಟೆ ಅವಲಂಬಿಸಿ ಅಣೆಕಟ್ಟೆಯ ಕೆಳಭಾಗದಲ್ಲಿನ ಹತ್ತಾರು ಎಕರೆ ಭೂಮಿಯಲ್ಲಿ ಬೆಳೆಯುತ್ತಿದ್ದ ಕಲ್ಲಂಗಡಿ ಬೆಳೆ ಪ್ರದೇಶವೂ ಈ ಬಾರಿ ಒಣಗಿದೆ. ನೀರಿನ ಕೊರತೆಯ ಕಾರಣಕ್ಕೆ ರೈತರು ಹಿಂಗಾರು ಬೇಸಿಗೆ ಅವಧಿಯ ಬೆಳೆ ಬೆಳೆಯದಿರಲು ನಿರ್ಧರಿಸಿದ್ದಾರೆ. 

ಪರಿಹಾರವೂ ಬರಲಿಲ್ಲ

ಮಳೆ ಕೊರತೆಯ ಪರಿಣಾಮದಿಂದ ಹೊನ್ನಾವರ ಹೊರತುಪಡಿಸಿ ಉಳಿದ ಎಲ್ಲ 11 ತಾಲ್ಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಜಿಲ್ಲೆಯಲ್ಲಿ ಈ ಬಾರಿ 58345 ಹೆಕ್ಟೇರ್ ಪ್ರದೇಶದಲ್ಲಿ ಬರದ ಸ್ಥಿತಿಯಿಂದ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆಯು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ಮಾರ್ಗಸೂಚಿ ಆಧರಿಸಿ ₹ 59.60 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿತ್ತು. ಈವರೆಗೂ ರೈತರಿಗೆ ಕೇಂದ್ರದಿಂದ ಪಾವತಿಯಾಗಬೇಕಿದ್ದ ಪರಿಹಾರದಲ್ಲಿ ಬಿಡಿಗಾಸೂ ಪಾವತಿಯಾಗಿಲ್ಲ. ರೈತರ ಅಸಮಾಧಾನ ಶಮನಗೊಳಿಸುವ ಪ್ರಯತ್ನದ ಭಾಗವಾಗಿ ರಾಜ್ಯ ಸರ್ಕಾರವು ಪ್ರತಿ ರೈತರ ಖಾತೆಗೆ ತಲಾ ₹ 2 ಸಾವಿರ ಮೊತ್ತ ಜಮಾ ಮಾಡಿದೆ. ಜಿಲ್ಲೆಯಲ್ಲಿ ಒಟ್ಟು ಐದು ಹಂತದಲ್ಲಿ 71803 ರೈತರ ಖಾತೆಗೆ ₹ 11.31 ಕೋಟಿ ಮೊತ್ತ ಪಾವತಿಯಾಗಿದೆ.

ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದ ಹೆಚ್ಚು ನಷ್ಟ ಉಂಟಾಗಿತ್ತು. ಹಿಂಗಾರು ಹಂಗಾಮಿನಲ್ಲಿ ಕೃಷಿ ಕ್ಷೇತ್ರದ ಪ್ರಮಾಣ ಗುರಿಗಿಂತ ಇಳಿಕೆಯಾಗಿದೆ - ಹೊನ್ನಪ್ಪ ಗೌಡ ಕೃಷಿ ಇಲಾಖೆ ಜಂಟಿ ನಿರ್ದೇಶಕ

ಬರಗಾಲದ ಸ್ಥಿತಿ ಉಂಟಾಗಿದ್ದರಿಂದ ನೀರು ಮೇವಿನ ಕೊರತೆಯಿಂದ ರೈತರು ಕಷ್ಟದ ಜೀವನ ಸಾಗಿಸುವ ಸ್ಥಿತಿ ಎದುರಾಗಿದೆ. ಆದರೆ ರೈತರಿಗೆ ಸಿಗಬೇಕಾದ ಪರಿಹಾರ ಮೇವು ಮತ್ತು ನೀರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಆಡಳಿತ ವಿಫಲವಾಗುತ್ತಿದೆ - ರಾಘವೇಂದ್ರ ನಾಯ್ಕ ರೈತ ಸಂಘ ಹಸಿರು ಸೇನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ

ಜಿಲ್ಲೆಯ 11 ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸಲ್ಪಟ್ಟಿದ್ದರೂ ರೈತರಿಗೆ ಸಿಗಬೇಕಿರುವ ಸೌಲಭ್ಯ ನೀಡುತ್ತಿಲ್ಲ. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕಿತ್ತು. ರೈತರಿಗೆ ಪರಿಹಾರ ಬೇಗನೆ ಸಿಗುವಂತಾಗಲಿ - ಶಾಂತಾರಾಮ ನಾಯಕ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ಅಂತರ್ಜಲ ಮಟ್ಟ ಕುಸಿತದಿಂದ ಕೊಳವೆ ಬಾವಿಗಳು ಬತ್ತಿವೆ. ಬೆಳೆಗಳಿಗೆ ನೀರುಣಿಸಲು ಹರಸಾಹಸ ಪಡಬೇಕಾಗಿದೆ - ಶಿವಕುಮಾರ ಪಾಟೀಲ ಮುಂಡಗೋಡ ಪ್ರಗತಿಪರ ರೈತ

ಮುಂಗಾರು ಅವಧಿಯ ಬೆಳೆ ಹಾನಿ ಪ್ರಮಾಣ (ತಾಲ್ಲೂಕು;ಬೆಳೆ ಹಾನಿ ಕ್ಷೇತ್ರ (ಹೆಕ್ಟೇರ್‌ಗಳಲ್ಲಿ);ಹಾನಿ ಮೊತ್ತ (₹ ಲಕ್ಷಗಳಲ್ಲಿ ಎನ್‌ಡಿಆರ್‌ಎಫ್‌ ಪ್ರಕಾರ))

ಅಂಕೋಲಾ;3693;313.91

ಭಟ್ಕಳ;1565.96;13311

ಹಳಿಯಾಳ;20058.03;2615.84

ಜೊಯಿಡಾ;3356.98;285.34

ಕಾರವಾರ;489.20;41.33

ಕುಮಟಾ;2587.93;220.82

ಮುಂಡಗೋಡ;10400;963.90

ಶಿರಸಿ;7677;615.30

ಯಲ್ಲಾಪುರ;2544.61;239.36

ಸಿದ್ದಾಪುರ;5362.12;449.64

ದಾಂಡೇಲಿ;600.81;82.33

ಒಟ್ಟು;58345.64;5960.88

ಹಿಂಗಾರು ಬೇಸಿಗೆ ಹಂಗಾಮಿನ ಬೆಳೆ ಪ್ರಮಾಣ(ತಾಲ್ಲೂಕು;ಗುರಿ;ಸಾಧನೆ (ಬಿತ್ತನೆ ಪ್ರದೇಶ ಹೆಕ್ಟೇರ್‌ಗಳಲ್ಲಿ))

ಕಾರವಾರ;20;08

ಅಂಕೋಲಾ;645;609

ಕುಮಟಾ;641;559

ಹೊನ್ನಾವರ;584;513

ಭಟ್ಕಳ;553;451

ಶಿರಸಿ;135;92

ಸಿದ್ದಾಪುರ;50;27

ಮುಂಡಗೋಡ;875;698

ಹಳಿಯಾಳ;1550;1331

ದಾಂಡೇಲಿ;50;15

ಒಟ್ಟು;5103;4303

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT