ಸೋಮವಾರ, ಮಾರ್ಚ್ 20, 2023
24 °C

ಸಿಎಂ ಶಿರಸಿ ಭೇಟಿ ವೇಳೆ ಪ್ರತಿಭಟನೆ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಅರಣ್ಯವಾಸಿಗಳ ಸಮಸ್ಯೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರುವ ಸಲುವಾಗಿ ಜ.15 ರಂದು ಮುಖ್ಯಮಂತ್ರಿ ಶಿರಸಿ ನಗರಕ್ಕೆ ಭೇಟಿ ನೀಡುವ ವೇಳೆ ಗಾಂಧಿ ಪ್ರತಿಮೆ ಬಳಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಲಾಗುವುದು. ಹತ್ತು ಬೇಡಿಕೆಗಳನ್ನು ಸಿ.ಎಂ. ಎದುರು ಇಡಲಾಗುವುದು' ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

'ಸಿ.ಎಂ. ಭೇಟಿಗೆ ಅವಕಾಶ ಕಲ್ಪಿಸಲು ಜಿಲ್ಲಾಧಿಕಾರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ. ಭೇಟಿಗೆ ಅವಕಾಶ ಕೊಡದಿದ್ದರೆ ವಿಭಿನ್ನ ರೀತಿ ಪ್ರತಿಭಟನೆ ನಡೆಸುತ್ತೇವೆ' ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿ ಎಚ್ಚರಿಸಿದರು.

'ಸುಪ್ರೀಂ ಕೋರ್ಟ್ ನಲ್ಲಿ ಅರಣ್ಯವಾಸಿಗಳ ಪರ ತಿದ್ದುಪಡಿ ಪ್ರಮಾಣ ಪತ್ರವನ್ನ ಸಲ್ಲಿಸಬೇಕು. 1978 ರ ಪೂರ್ವ ಕೇಂದ್ರ ಸರಕಾರದಿಂದ ಮಂಜೂರಿಗೆ ಶೀಫಾರಸ್ಸು ಆಗಿರುವ 2,513 ಕುಟುಂಬಳಿಗೆ ಹಕ್ಕು ಪತ್ರ ನೀಡಬೇಕು. ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯಿಂದ ಹೆಚ್ಚುವರಿ ಅರಣ್ಯ ಪ್ರದೇಶ ಸೇರಿಸಿರುವದನ್ನು  ಹಿಂಪಡೆಯಬೇಕು ಎಂಬ ಬೇಡಿಕೆಗಳು ಪ್ರಮುಖವಾಗಿದೆ' ಎಂದು ತಿಳಿಸಿದರು.

'ಅರಣ್ಯವಾಸಿಗಳ ಮೇಲೆ ಅರಣ್ಯ ಅಧಿಕಾರಿಗಳಿಂದ ನಡೆಯುತ್ತಿರುವ ದೌರ್ಜನ್ಯ ನಿಯಂತ್ರಿಸಬೇಕು. ಅರಣ್ಯವಾಸಿಗಳನ್ನು  ಒಕ್ಕಲೆಬ್ಬಿಸುವದನ್ನು ನಿಲ್ಲಿಸಬೇಕು‌. ಅರಣ್ಯ ಅತಿಕ್ರಮಣದಾರರ ಒಕ್ಕಲೆಬ್ಬಿಸುವ ವೇಳೆ ದಾಖಲಿಸಿದ್ದ 12ಕ್ಕಿಂತ ಹೆಚ್ಚು ಕ್ರಿಮಿನಲ್ ಪ್ರಕರಣ ಹಿಂಪಡೆಯಬೇಕು. ಅರಣ್ಯ ಅತಿಕ್ರಮಣದಾರರ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ ರಚಿಸಬೇಕು ಎಂಬ ಬೇಡಿಕೆಯನ್ನೂ ಇಡುತ್ತೇವೆ' ಎಂದು ವಿವರಿಸಿದರು.

'ಐದು ವರ್ಷದಲ್ಲಿ ಕಾಮಗಾರಿ ನೆಪದಲ್ಲಿ ಅರಣ್ಯ ಇಲಾಖೆ ಅರಣ್ಯ ಭೂಮಿಯಲ್ಲಿದ್ದ ಒಂದು ಲಕ್ಷಕ್ಕಿಂತ ಹೆಚ್ಚು ಮರ ಕಡಿದಿರುವುದನ್ನೂ ಗಮನಕ್ಕೆ ತರಲಾಗುವುದು' ಎಂದರು.

'ಅರಣ್ಯ ಅತಿಕ್ರಮಣದಾರರ ಸಮಸ್ಯೆ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಸ್ತುವಾಗಿದೆ. ಮುಖ್ಯಮಂತ್ರಿ ಭೇಟಿಗೆ ಜಿಲ್ಲಾಡಳಿತ ಅವಕಾಶ ಕೊಡದಿದ್ದರೆ ವಿಭಿನ್ನ ಹೋರಾಟ ನಡೆಸಲಿದ್ದೇವೆ' ಎಂದು ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು