ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರ ಬಂದರು ರಸ್ತೆ ಚತುಷ್ಪಥ: ಯೋಜನಾ ಸ್ಥಳ ಪರಿಶೀಲಿಸಿ ವರದಿಗೆ ನಿರ್ದೇಶನ

Published 5 ಆಗಸ್ಟ್ 2023, 23:30 IST
Last Updated 5 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಹೊನ್ನಾವರ ಬಂದರನ್ನು ಸಂಪರ್ಕಿಸುವ ರಸ್ತೆಯನ್ನು ₹139 ಕೋಟಿ ವೆಚ್ಚದಲ್ಲಿ ಚತುಷ್ಪಥವನ್ನಾಗಿ ಪರಿವರ್ತಿಸುವ ಯೋಜನೆಗೆ ಕರಾವಳಿ ನಿಯಂತ್ರಣ ವಲಯದ (ಸಿಆರ್‌ಜೆಡ್‌) ತಜ್ಞರ ಮೌಲ್ಯಮಾಪನಾ ಸಮಿತಿ ಒಪ್ಪಿಗೆ ಕೊಟ್ಟಿಲ್ಲ. ಉಪಸಮಿತಿಯು ಯೋಜನಾ ಸ್ಥಳದ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.

ಭಾರತಮಾಲಾ ಯೋಜನೆಯಡಿ ಚತುಷ್ಪಥವನ್ನಾಗಿ ಪರಿವರ್ತಿಸಲು ಅನುಮೋದನೆ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿತ್ತು. ಈ ಯೋಜನೆಗೆ ಕರಾವಳಿ ನಿಯಂತ್ರಣ ವಲಯದ ಒಪ್ಪಿಗೆ ನೀಡಬಹುದು ಎಂದು ಕರ್ನಾಟಕ ರಾಜ್ಯ ಕರಾವಳಿ ನಿಯಂತ್ರಣ ಪ್ರಾಧಿಕಾರ ಈಗಾಗಲೇ ಶಿಫಾರಸು ಮಾಡಿದೆ. ತಜ್ಞರ ಮೌಲ್ಯಮಾಪನಾ ಸಮಿತಿಯ 329ನೇ ಸಭೆಯಲ್ಲಿ ಈ ಯೋಜನೆಯ ಕುರಿತು ವಿಸ್ತೃತ ಚರ್ಚೆ ನಡೆಸಿ, ವಿಸ್ತೃತವಾದ ಸಮುದ್ರ ಸಂರಕ್ಷಣಾ ಯೋಜನೆ ರೂಪಿಸುವಂತೆ ಯೋಜನಾ ಪ್ರಾಧಿಕಾರಕ್ಕೆ ಸೂಚಿಸಿದೆ. ಪರ್ಯಾಯ ರಸ್ತೆ ಮಾರ್ಗದ ಬಗ್ಗೆಯೂ ಪರಿಶೀಲಿಸುವಂತೆ ಹೇಳಿದೆ.

ಈ ಯೋಜನೆಯ ಅನುಷ್ಠಾನಕ್ಕೆ 14.9 ಹೆಕ್ಟೇರ್‌ ಪ್ರದೇಶ ಬಳಕೆ ಮಾಡಲಾಗುತ್ತಿದೆ. ರಸ್ತೆ ನಿರ್ಮಾಣಕ್ಕೆ 0.76 ಹೆಕ್ಟೇರ್‌ ಅರಣ್ಯ ಬಳಕೆಗೆ ಕೇಂದ್ರ ಪರಿಸರ ಸಚಿವಾಲಯ ಈಗಾಗಲೇ ಒಪ್ಪಿಗೆ ಕೊಟ್ಟಿದೆ. ಇದು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಕಡಲಾಮೆಗಳು ಮರಿ ಹಾಕುವ ಪ್ರದೇಶವೂ ಹೌದು. ರಸ್ತೆ ವಿಸ್ತರಣೆಗೆ 527 ಮರಗಳನ್ನು ಕಡಿಯಬೇಕಾಗುತ್ತದೆ.

ಈ ಯೋಜನೆಯನ್ನು ವಿರೋಧಿಸಿ ಸ್ಥಳೀಯರಾದ ದಮಯಂತಿ ಸುಬ್ರಾಯ ಮೇಸ್ತ ಎಂಬುವರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಮೆಟ್ಟಿಲೇರಿದ್ದಾರೆ. ಕರಾವಳಿ ನಿಯಂತ್ರಣ ವಲಯದಲ್ಲಿ ನಿಯಮಬಾಹಿರವಾಗಿ ರಸ್ತೆ ವಿಸ್ತರಣೆ ಮಾಡಲಾಗುತ್ತಿದ್ದು, ಇದರಿಂದ ಪರಿಸರದ ಮೇಲೆ ಹಾನಿಯಾಗಲಿದೆ ಎಂದೂ ದೂರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿರುವ ಪೀಠವು ವಿವಿಧ ಇಲಾಖೆಗಳಿಂದ ವರದಿ ಕೇಳಿದೆ. ಕೇಂದ್ರ ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ಹಾಗೂ ಬಂದರು ಇಲಾಖೆ ವರದಿ ಸಲ್ಲಿಸಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT