ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಇಳಿಮುಖದತ್ತ ಶಿಶು ಮರಣ ಪ್ರಮಾಣ

Published 24 ಫೆಬ್ರುವರಿ 2024, 4:44 IST
Last Updated 24 ಫೆಬ್ರುವರಿ 2024, 4:44 IST
ಅಕ್ಷರ ಗಾತ್ರ

ಕಾರವಾರ: ತಜ್ಞ ವೈದ್ಯರು, ಆರೋಗ್ಯ ಸೌಕರ್ಯಗಳ ಕೊರತೆಯ ನಡುವೆಯೂ ಜಿಲ್ಲೆಯಲ್ಲಿ ಶಿಶುಗಳ ಸಾವಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿರುವುದು ಸಾರ್ವಜನಿಕರಲ್ಲಿ ತುಸು ನೆಮ್ಮದಿ ತಂದಿದೆ.

ಗುಡ್ಡಗಾಡು ಪ್ರದೇಶವನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಕೆಲವು ತಾಲ್ಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ತಜ್ಞರ ಕೊರತೆಯೂ ಇದೆ. ಕುಗ್ರಾಮಗಳ ಜನರು ಆರೋಗ್ಯ ಸೌಲಭ್ಯಕ್ಕೆ ಹತ್ತಾರು ಕಿ.ಮೀ ದೂರ ಕ್ರಮಿಸಿ ಬರಬೇಕಾದ ಅನಿವಾರ್ಯತೆಯೂ ಇದೆ. ಇಂತಹ ಸಮಸ್ಯೆಗಳ ನಡುವೆಯೂ ಆರೋಗ್ಯ ಇಲಾಖೆಯ ಸುಧಾರಿತ ಕ್ರಮಗಳ ಪರಿಣಾಮ ಶಿಶು ಮರಣ ಪ್ರಮಾಣ ತಗ್ಗುತ್ತಿದೆ.

14 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಜಿಲ್ಲೆಯಲ್ಲಿ ವಾರ್ಷಿಕವಾಗಿ ಸರಾಸರಿ 18 ಸಾವಿರ ಹೆರಿಗೆ ಆಗುತ್ತವೆ. ಅವುಗಳ ಪೈಕಿ ಪ್ರತಿ ಸಾವಿರಕ್ಕೆ ಸರಾಸರಿ ಶೇ 8ರಷ್ಟು ಶಿಶುಗಳು ಪ್ರಸಕ್ತ ಸಾಲಿನಲ್ಲಿ ಮೃತಪಟ್ಟಿವೆ. ಹಿಂದಿನ ವರ್ಷಗಳಲ್ಲಿ ಈ ಪ್ರಮಾಣ ಶೇ 9ಕ್ಕಿಂತ ಹೆಚ್ಚಿದ್ದವು. ತಾಯಂದಿರ ಮರಣ ಪ್ರಮಾಣವೂ ಇಳಿಕೆಯಾಗಿದ್ದು ಈ ಬಾರಿ ಶೇ 42ರಷ್ಟಿದ್ದರೆ, ಹಿಂದಿನ ವರ್ಷಗಳಲ್ಲಿ ಶೇ 56ಕ್ಕಿಂತ ಹೆಚ್ಚಿದ್ದವು ಎನ್ನುತ್ತವೆ ಆರೋಗ್ಯ ಇಲಾಖೆ ನೀಡುವ ಮಾಹಿತಿ.

‘ಜಿಲ್ಲೆಯಲ್ಲಿ ಕೆಲ ವರ್ಷಗಳ ಹಿಂದೆ ಮನೆಯಲ್ಲೇ ಹೆರಿಗೆ ಮಾಡಿಸುವ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದವು. ಈಗ ಬಹುತೇಕ ಆಸ್ಪತ್ರೆಗಳಲ್ಲಿಯೇ ಹೆರಿಗೆ ಆಗುವಂತೆ ನೋಡಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಜಾರಿಯಾದ ಬಳಿಕ ತಾಯಿ–ಶಿಶುವಿನ ಆರೋಗ್ಯ ಸುಧಾರಣೆಗೆ ಮಹತ್ತರ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗರ್ಭ ಧರಿಸಿದ ಆರಂಭಿಕ ಹಂತದಲ್ಲಿಯೇ ಹೆಸರು ನೋಂದಾಯಿಸಿಕೊಂಡು ಅವರಿಗೆ ಪೋಷಕಾಂಶಯುಕ್ತ ಆಹಾರ, ಮಾತ್ರೆಗಳನ್ನು ಒದಗಿಸಲಾಗುತ್ತಿದೆ. ಇದರಿಂದ ಗರ್ಭಿಣಿಯರು, ಶಿಶು ಆರೋಗ್ಯವಂತರಾಗುತ್ತಿದ್ದಾರೆ’ ಎನ್ನುತ್ತಾರೆ ಜಿಲ್ಲಾ ಮಕ್ಕಳ ಆರೋಗ್ಯಾಧಿಕಾರಿ ಡಾ.ಕೆ.ನಟರಾಜ್.

‘2023–24ನೇ ಸಾಲಿನಲ್ಲಿ 124 ಶಿಶುಗಳು ವಿವಿಧ ಕಾರಣಕ್ಕೆ ಮೃತಪಟ್ಟಿವೆ. ಹೃದಯ ಸಂಬಂಧಿ ಸಮಸ್ಯೆ, ಅವಧಿಗೆ ಮುನ್ನ ಹೆರಿಗೆ, ಕಡಿಮೆ ತೂಕ ಸೇರಿದಂತೆ ಕೆಲ ಮುಖ್ಯ ಕಾರಣಗಳು ಶಿಶುಗಳನ್ನು ಬಾಧಿಸಿವೆ. ಇಂತಹ ಸಮಸ್ಯೆಗಳು ಪುನಃ ಎದುರಾಗದಂತೆ ಗರ್ಭಿಣಿಯರಿಗೆ ಸೂಕ್ತ ಆರೋಗ್ಯ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುತ್ತಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT