ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರ | ಆನಗೋಡ: ಹದಗೆಟ್ಟ ಒಳ ರಸ್ತೆಗಳು

ತ್ಯಾಜ್ಯ ವಿಲೇವಾರಿ ಘಟಕದಿಂದ ದುರ್ನಾತ:ಜನರಿಗೆ ಸಂಕಟ
Last Updated 14 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಯಲ್ಲಾಪುರ: ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಆನಗೋಡು ಗ್ರಾಮ ಪಂಚಾಯ್ತಿ ಅತ್ತ ಪಟ್ಟಣವೂ ಅಲ್ಲ, ಇತ್ತ ಕುಗ್ರಾಮವೂ ಅಲ್ಲದ ಸ್ಥಿತಿಯಲ್ಲಿದೆ. ತೀರಾ ಹಾಳಾಗಿ ಓಡಾಟವೇ ಕಷ್ಟವಾಗಿದ್ದ ಮುಖ್ಯ ಸಂಪರ್ಕ ರಸ್ತೆಯನ್ನು ಇತ್ತೀಚಿಗೆ ಅಭಿವೃದ್ಧಿಪಡಿಸಲಾಗಿದ್ದರೂ ಒಳರಸ್ತೆಗಳ ಸ್ಥಿತಿ ಶೋಚನೀಯವಾಗಿದೆ.

ಸೊಸೈಟಿ, ಹಾಲಿನ ಡೇರಿ, ಗ್ರಾಮ ಪಂಚಾಯ್ತಿ, ಪ್ರೌಢಶಾಲೆ, ಸರ್ಕಾರಿ ಪ್ರಾಥಮಿಕ ಶಾಲೆ, ಅಡಿಕೆ ತೋಟವನ್ನು ಹೊರತುಪಡಿಸಿದರೆ ಇಲ್ಲಿ ಕಾಣುವುದು ದಟ್ಟ ಕಾಡು. ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕವಿದೆ. ಆದರೆ, ವಿದ್ಯುತ್ ಕಡಿತ ಸಾಮಾನ್ಯ. ಮಳೆಗಾಲದಲ್ಲಿ ವಿದ್ಯುತ್ ದೀಪ ಉರಿಯುವುದೇ ಅಪರೂಪ.676 ಕುಟುಂಬಗಳಿರುವ ಇಲ್ಲಿನ ಜನಸಂಖ್ಯೆ ಸುಮಾರು 3 ಸಾವಿರದಷ್ಟು.

ಆನಗೋಡಿಗೆ ಸಂಪರ್ಕಿಸುವ ರಸ್ತೆಯ ಪಕ್ಕದಲ್ಲೇ ಪಟ್ಟಣ ಪಂಚಾಯ್ತಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿದ್ದು ಈ ತ್ಯಾಜ್ಯದ ದುರ್ವಾಸನೆಯಿಂದಾಗಿ ರಸ್ತೆಯಲ್ಲಿ ಓಡಾಡುವಾಗ ಜನ ಮೂಗು ಮುಚ್ಚಿಕೊಂಡೇ ಹೋಗುವ ಸ್ಥಿತಿ ಇದೆ.

‘ಬಿಸಗೋಡದಲ್ಲಿ ಪ್ರೌಢಶಾಲೆ ಇದ್ದು ನಂತರದ ಶಿಕ್ಷಣಕ್ಕೆ ಬೇರೆಡೆಗೆ ಹೋಗುವುದು ಅನಿವಾರ್ಯ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿ ಮಾತ್ರ ಇದ್ದು, ವೈದ್ಯರ ನೇಮಕಾತಿ ನಡೆದಿಲ್ಲ. ದಿನಕ್ಕೆ ನಾಲ್ಕೈದು ಬಸ್ ಮಾತ್ರ ಇದ್ದು ಗ್ರಾಮಸ್ಥರು ಖಾಸಗಿ ವಾಹನ ಅವಲಂಬಿಸಿದ್ದಾರೆ’ ಎನ್ನುತ್ತಾರೆ ಗ್ರಾಮಸ್ಥ ರವಿ ಭಟ್ಟ.

‘ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಊರಿಗೂ ಸರ್ವಋತು ಸಂಪರ್ಕ ರಸ್ತೆ ಒದಗಿಸಬೇಕು ಎಂಬುದು ಜನರ ಮುಖ್ಯ ಬೇಡಿಕೆ. ಊರಿನಲ್ಲಿ ಮತ್ತೆ ತ್ಯಾಜ್ಯ ಘಟಕ ನಿರ್ಮಿಸಬಾರದು ಎಂಬ ಆಗ್ರಹವೂ ಇದೆ. ಸಾತೊಡ್ಡಿ ಜಲಪಾತಕ್ಕೆ ಹೋಗುವ ಪ್ರವಾಸಿಗರು ಆನಗೋಡ ಮೂಲಕವೇ ಸಾಗಬೇಕಿದ್ದು ಪ್ರಸಾಸಕ್ಕೆ ಬರುವ ಪಡ್ಡೆ ಹುಡುಗರ ಹಾವಳಿ ಈ ಭಾಗದಲ್ಲಿ ಹೆಚ್ಚಾಗಿದೆ. ಪೊಲೀಸರು ರಾತ್ರಿ ಗಸ್ತು ತಿರುಗಬೇಕು ಎಂಬ ಬೇಡಿಕೆ ಪ್ರತಿ ಗ್ರಾಮಸಭೆಯಲ್ಲಿಯೂ ಕೇಳಿ ಬರುತ್ತಿದೆ’ ಎಂದರು.

‘ಆನಗೋಡು ಬಿಸಗೋಡು ಭಾಗಕ್ಕೆ ಬಸ್ ವ್ಯವಸ್ಥೆಯಿದೆ ಆದರೆ ತಟಗಾರ-ಹುಟಕಮನೆ ಭಾಗಕ್ಕೆ ಬಸ್ ಇಲ್ಲ. ಸಾವಗದ್ದೆ-ಬರಗದ್ದೆ-ಬಿಸಗೋಡ ಮಾರ್ಗದ ರಸ್ತೆಯನ್ನು ಅಭಿವೃದ್ಧಿಪಡಿಸಿ ಇಲ್ಲಿ ಬಸ್ ಓಡಾಟ ಕಲ್ಪಿಸಿದರೆ ಸುತ್ತಮುತ್ತಲ ಜನರಿಗೆ ಅನುಕೂಲವಾಗಲಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT