ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಸ್ಥಿಕೆ ತೀರ್ಮಾನಗಳಿಗೂ ತೀರ್ಪಿನ ಮಾನ್ಯತೆ: ಜೆ.ಸಿ. ಮಾಧುಸ್ವಾಮಿ ಹೇಳಿಕೆ

Last Updated 10 ಡಿಸೆಂಬರ್ 2022, 18:58 IST
ಅಕ್ಷರ ಗಾತ್ರ

ಕಾರವಾರ: ‘ಹಳ್ಳಿಗಳಲ್ಲಿ ಗೌರವಾನ್ವಿತ, ತಿಳಿವಳಿಕೆಯಿರುವ ವ್ಯಕ್ತಿಗಳ ಸಮಕ್ಷಮದಲ್ಲಿ ಆಗುವ ನ್ಯಾಯ ತೀರ್ಮಾನಗಳಿಗೂ ಕಾನೂನಿನ ಮುದ್ರೆಯೊತ್ತಲು ಉದ್ದೇಶಿಸಲಾಗಿದೆ. ಇದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಚಿಂತಿಸಲಾಗಿದೆ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಅಂಕೋಲಾ ತಾಲ್ಲೂಕಿನ ಶೆಟಗೇರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾದ ನೋಟರಿಗಳ ರಾಜ್ಯಮಟ್ಟದ 13ನೇ ಸಮ್ಮೇಳನದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ದೇಶದ ನ್ಯಾಯಾಲಯಗಳಲ್ಲಿ ಸುಮಾರು 3 ಕೋಟಿ ‍ಪ್ರಕರಣಗಳು ಬಾಕಿಯಿವೆ. ನ್ಯಾಯಾಲಯದ ಸಮಯವನ್ನು ಉಳಿಸಲು ನ್ಯಾಯಾಂಗ ವ್ಯವಸ್ಥೆಯ ಡಿಜಿಟಲೀಕರಣ, ಕಾನೂನು ಮಧ್ಯಸ್ಥಿಕೆ ಬಲಗೊಳಿಸುವುದು, ಕೌನ್ಸೆಲಿಂಗ್ ಕೇಂದ್ರಗಳ ಆರಂಭ ಸೇರಿದಂತೆ ಆಧುನೀಕರಣ ಮಾಡಲಾಗುತ್ತದೆ. ಕೆಲವು ದಿನಗಳ ಹಿಂದೆ ನಡೆದ ಅಖಿಲ ಭಾರತ ಕಾನೂನು ಸಚಿವರ ಸಮಾವೇಶದಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ’ ಎಂದರು.

‘ಲೋಕ ಅದಾಲತ್ ಮೂಲಕ ಸಣ್ಣ ಪುಟ್ಟ ಪ್ರಕರಣಗಳನ್ನು ಆದಷ್ಟೂ ನ್ಯಾಯಾಲಯದ ಹೊರಗೇ ಇತ್ಯರ್ಥಗೊಳಿಸಲು ಆದ್ಯತೆ ನೀಡುವ ಬಗ್ಗೆಯೂ ಚರ್ಚಿಸಲಾಗಿದೆ. ಲೋಕ ಅದಾಲತ್‌ನಲ್ಲಿ ಸಂಧಾನವಾದರೂ ಮತ್ತೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುತ್ತಿದೆ. ಹಾಗಾಗಿ ಅದಾಲತ್‌ನಲ್ಲಿ ಆಗಿರುವ ತೀರ್ಮಾನವನ್ನೇ ನ್ಯಾಯಾಲಯದ ಅಧಿಕೃತ ತೀರ್ಪು ಎಂದು ಘೋಷಿಸುವ ನಿಟ್ಟಿನಲ್ಲಿ ನ್ಯಾಯಾಧೀಶರನ್ನೂ ಒಳಗೊಂಡು ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ತಿಳಿಸಿದರು.

‘ಬೆಂಗಳೂರಿನಲ್ಲಿ ಈಗಾಗಲೇ ಇರುವ ಅಂತರರಾಷ್ಟ್ರೀಯ ಕಾನೂನು ಮಧ್ಯಸ್ಥಿಕೆ ಕೇಂದ್ರಕ್ಕೆ ಜಾಗ ಕೊಟ್ಟು ಕಟ್ಟಡ ನಿರ್ಮಿಸಲಾಗುತ್ತದೆ. ತೆಲಂಗಾಣ ಸರ್ಕಾರವು ಹೈದರಾಬಾದ್‌ನಲ್ಲಿ ಕೇಂದ್ರ ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ’ ಎಂದರು.

ವಿದೇಶ ಕಾನೂನು ಕೋರ್ಸ್:

‘ವಿದೇಶಗಳಿಗೆ ಉದ್ಯೋಗ, ವಿದ್ಯಾಭ್ಯಾಸಗಳಿಗೆ ಹೋಗುವ ಯುವಕರಿಗೆ ಅಲ್ಲಿನ ಕಾನೂನು ತಿಳಿವಳಿಕೆ ಇಲ್ಲದೇ ಬಹಳ ಸಂಕಷ್ಟ ಅನುಭವಿಸುತ್ತಾರೆ. ಇದನ್ನು ತಡೆಯಲು ಪ್ರತಿಷ್ಠಿತ ಕಾನೂನು ಕಾಲೇಜುಗಳಲ್ಲಿ ಎರಡು, ಮೂರು ತಿಂಗಳ ಕೋರ್ಸ್ ಆರಂಭಿಸಲು ಉದ್ದೇಶಿಸಲಾಗಿದೆ. ಇದೇರೀತಿ, ವಿದೇಶಗಳಿಂದ ನಮ್ಮ ದೇಶಕ್ಕೆ ಬಂದವರಿಗೆ ಇಲ್ಲಿನ ಕಾನೂನುಗಳ ಅರಿವು ಮೂಡಿಸಲಾಗುತ್ತದೆ. ಇವುಗಳನ್ನು ಆದಷ್ಟೂ ಆನ್‌ಲೈನ್ ಮೂಲಕ ಮಾಡಲು ಚಿಂತಿಸಲಾಗಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT