ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಳಿ ಸೇತುವೆ ಕುಸಿತ | ಕೇಂದ್ರ ಸರ್ಕಾರ ಹೊಣೆ ಹೊರಬೇಕು: ಸಚಿವ ಮಂಕಾಳ ವೈದ್ಯ

Published : 7 ಆಗಸ್ಟ್ 2024, 6:46 IST
Last Updated : 7 ಆಗಸ್ಟ್ 2024, 6:46 IST
ಫಾಲೋ ಮಾಡಿ
Comments

ಕಾರವಾರ: ಇಲ್ಲಿನ ಕಾಳಿನದಿಯ ಸೇತುವೆ ಕುಸಿತಕ್ಕೆ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಸಾಕಷ್ಟು ಅಧ್ವಾನ ನಡೆದರೂ ಅವರು (ಕೇಂದ್ರ ಸರ್ಕಾರ) ಮೌನವಾಗಿರುವುದು ಅಚ್ಚರಿ ಮೂಡಿಸುತ್ತಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು‌.

ಸೇತುವೆ ಕುಸಿತವಾದ ಸ್ಥಳಕ್ಕೆ ಭೇಟಿ ನೀಡಿದ ಅವರು ಮಾಧ್ಯಮದವರ ಜತೆ ಮಾತನಾಡಿದರು.

'ರಾಷ್ಟ್ರೀಯ ಹೆದ್ದಾರಿ ಯೋಜನೆ ಕೇಂದ್ರ ಸರ್ಕಾರಕ್ಕೆ ಸೇರಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಐ.ಆರ್.ಬಿ ಕಂಪನಿ ಮೇಲೆ ಕೇಂದ್ರದ ಹಿಡಿತವಿದೆ. ಕಂಪನಿ ಈವರೆಗೆ ಹಲವು ಅವೈಜ್ಞಾನಿಕ ಕೆಲಸ ಮಾಡಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ' ಎಂದರು.

'ಕಾಳಿ ನದಿಗೆ ಹೊಸ ಸೇತುವೆ ನಿರ್ಮಿಸುವ ವೇಳೆ ಹಳೆಯ ಸೇತುವೆ ಮೇಲೆ ಭಾರದ ಯಂತ್ರೋಪಕರಣ ಇಟ್ಟು ಕೆಲಸ ಮಾಡಿದ್ದರು. ಅಂಕೋಲಾದ ಹಟ್ಟಿಕೇರಿಯಲ್ಲೂ ಅಂತಹ ಕೆಲಸ ನಡೆದಿತ್ತು. ಅದರಿಂದ ಕಳೆದ ವರ್ಷ ಅಲ್ಲಿನ ಸೇತುವೆ ಕುಸಿದಿತ್ತು. ಹಳೆಯ ಸೇತುವೆಯ ಸಾಮರ್ಥ್ಯ ಪರೀಕ್ಷಿಸದೆ ವಾಹನಗಳ ಓಡಾಟಕ್ಕೆ ಅನುಮತಿಸಲಾಗಿತ್ತು. ಎಲ್ಲದರ ಹಿಂದೆ ಐ.ಆರ್.ಬಿ ಕಂಪನಿ ನಿರ್ಲಕ್ಷತನವಿದೆ' ಎಂದರು.

ಎಲ್ಲ ಸೇತುವೆ ತಪಾಸಣೆ:

'ಕಾಳಿ ನದಿಯ ಹೊಸ ಸೇತುವೆಯ ಸಾಮರ್ಥ್ಯದ ಕಾರ್ಯಸಾಧ್ಯತೆ ವರದಿ ಸಲ್ಲಿಸಲು ಎನ್.ಎಚ್.ಎ.ಐ ಎಂಜಿನಿಯರಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ವಾಹನ ಸಂಚಾರಕ್ಕೆ ಅನುಮತಿಸಲಾಗುವುದು. ಜಿಲ್ಲೆಯಲ್ಲಿರುವ ಎಲ್ಲ ಸೇತುವೆಗಳ ಧಾರಣ ಸಾಮರ್ಥ್ಯ, ಸುರಕ್ಷತೆ ಕುರಿತು ಎರಡು ದಿನಗಳೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ' ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದರು.

'ಸೇತುವೆ ಕುಸಿತ ಘಟನೆಗೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಐ.ಆರ್.ಬಿ ಕಂಪನಿ ಅಧಿಕಾರಿಗಳ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಹೆದ್ದಾರಿಯಲ್ಲಿ ಸುರಕ್ಷತೆಗೆ ಗಮನ ಕೊಡದ ಹಿನ್ನೆಲೆಯಲ್ಲಿ ಸೇತುವೆ ಕುಸಿತ ಘಟನೆಯಲ್ಲಿ ಗಾಯಗೊಂಡ ಲಾರಿ ಚಾಲಕ ಬಾಲಮುರುಗನ್ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದೇವೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT